ಲೋಕಸಭೆ ಚುನಾವಣೆ 2024: 15 ಮುಸ್ಲಿಂ ಅಭ್ಯರ್ಥಿಗಳಿಗೆ ಗೆಲುವು
ಹೊಸದಿಲ್ಲಿ, ಜೂ.4: ಪಶ್ಚಿಮ ಬಂಗಾಳದ ಬಹರಂಪುರದಲ್ಲಿ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ವಿರುದ್ಧ ಜಯ ಗಳಿಸಿದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಸೇರಿದಂತೆ 15 ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಈ ಚುನಾವಣೆಯಲ್ಲಿ 78 ಮುಸ್ಲಿಮರು ಕಣದಲ್ಲಿದ್ದರು. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 115 ಮಂದಿಗೆ ಹೋಲಿಸಿದರೆ, ಇದು ಕುಸಿತ.
ಯೂಸುಫ್ ಪಠಾಣ್ ಅವರು ಆರು ಬಾರಿ ಸಂಸದ ಅಧೀರ್ ರಂಜನ್ ಚೌಧರಿ ಅವರನ್ನು 85,022 ಮತಗಳಿಂದ ಸೋಲಿಸಿದರು. ಸಹರನ್‌ಪುರದಿಂದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ 64,542 ಮತ, ಕೈರಾನಾದಿಂದ ಸಮಾಜವಾದಿ ಪಕ್ಷದ ಇಕ್ರಾ ಚೌಧರಿ(29) 69,116 ಮತಗಳಿಂದ ಬಿಜೆಪಿಯ ಪ್ರದೀಪ್ ಕುಮಾರ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಘಾಜಿಪುರದ ಹಾಲಿ ಸಂಸದ ಅಫ್ಜಲ್ ಅನ್ಸಾರಿ ಅವರು 5.3 ಲಕ್ಷ ಮತ ಗಳಿಸಿ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಬಿಜೆಪಿಯ ಮಾಧವಿಲತಾ ಕೊಂಪೆಲ್ಲಾ ಅವರಿಗಿಂತ 3,38,087 ಹೆಚ್ಚು ಮತ ಗಳಿಸಿ ಹೈದರಾಬಾದ್ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ರಾಂಪುರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಮೊಹಿಬ್ಬುಲ್ಲಾ 4,81,503 ಮತ ಗಳಿಸಿ ಹಾಗೂ ಜಿಯಾ ಉರ್ ರೆಹಮಾನ್ ಸಂಭಾಲ್‌ನಲ್ಲಿ 1.2 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.
ಲಡಾಖ್‌ನಲ್ಲಿ ಸ್ವತಂತ್ರ ಅಭ್ಯರ್ಥಿ ಮೊಹಮ್ಮದ್ ಹನೀಫಾ 27,862 ಮತಗಳ ಅಂತರದಿಂದ ಹಾಗೂ ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿ ಅಬ್ದುಲ್ ರಶೀದ್ ಶೇಖ್ ಅವರು ಜಮ್ಮು- ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಲ್ಲಿ 4.7 ಲಕ್ಷ ಮತ ಗಳಿಸಿ ಗೆಲುವು ಸಾಧಿಸಿದ್ದಾರೆ. ಜಮ್ಮು- ಕಾಶ್ಮೀರದ ಅನಂತನಾಗ್-ರಜೌರಿ ಕ್ಷೇತ್ರದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ಮಿಯಾನ್ ಅಲ್ತಾಫ್ ಅಹ್ಮದ್ ಅವರು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿರುದ್ಧ 2,81,794 ಮತಗಳಿಂದ ಗೆದ್ದಿದ್ದಾರೆ. ಶ್ರೀನಗರದಲ್ಲಿ ಎನ್‌ಸಿ ಅಭ್ಯರ್ಥಿ ಆಗಾ ಸೈಯದ್ ರುಹುಲ್ಲಾ ಮೆಹದಿ 3,56,866 ಮತ ಗಳಿಸಿದರು.