ಸ್ಪೀಕರ್ ಹುದ್ದೆ: ಸಮಾಲೋಚನೆ ನಡೆಸಿಲ್ಲ ಎಂದ ಟಿಎಂಸಿ
`ಯಾರೂ ನಮ್ಮನ್ನು ಸಂಪರ್ಕಿಸಿಲ್ಲ, ಯಾವುದೇ ಮಾತುಕತೆ ನಡೆದಿಲ್ಲ. ಇದು ಏಕಪಕ್ಷೀಯ ನಿರ್ಧಾರ,' ಎಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಕೆ. ಸುರೇಶ್ ಅವರನ್ನು ಲೋಕಸಭೆಯ ಸ್ಪೀಕರ್ ಹುದ್ದೆಗೆ ಕಣಕ್ಕಿಳಿಸುವ ಕುರಿತು ತಮ್ಮ ಪಕ್ಷದ ಜೊತೆಗೆ ಸಮಾಲೋಚನೆ ನಡೆಸಿಲ್ಲ ಎಂದು ಟಿಎಂಸಿ ಹೇಳಿದೆ.
ಕೆ. ಸುರೇಶ್ ಅವರು ಮಂಗಳವಾರ ಬೆಳಗ್ಗೆ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಪತ್ರಕ್ಕೆ ಸಹಿ ಹಾಕಿದ ಪಕ್ಷಗಳಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಇರಲಿಲ್ಲ.
ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರನ್ನು ಈ ಬಗ್ಗೆ ಕೇಳಿದಾಗ, ಈ ಸಂಬಂಧ ಪಕ್ಷವನ್ನು ಯಾರೂ ಸಂಪರ್ಕಿಸಿಲ್ಲ ಎಂದು ಹೇಳಿದರು.ʻಯಾರೂ ನಮ್ಮನ್ನು ಸಂಪರ್ಕಿಸಿಲ್ಲ, ಯಾವುದೇ ಮಾತುಕತೆ ನಡೆದಿಲ್ಲ. ದುರದೃಷ್ಟವಶಾತ್ ಇದು ಏಕಪಕ್ಷೀಯ ನಿರ್ಧಾರ. ಪಕ್ಷದ ನಾಯಕರಾದ ಮಮತಾ ಅವರು ಈ ಬಗ್ಗೆ ನಿರ್ಧರಿಸುತ್ತಾರೆ,ʼ ಎಂದು ಹೇಳಿದರು.
ಆನಂತರ, ಲೋಕಸಭೆಯೊಳಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಮಮತಾ ಬ್ಯಾನರ್ಜಿ ಮಾತುಕತೆ ನಡೆಸುತ್ತಿರುವುದು ಕಂಡುಬಂತು. ರಾಹುಲ್ ಅವರು ಸದನದಿಂದ ಹೊರಬಂದಾಗ, ʻಸ್ಪೀಕರ್ ವಿಷಯದ ಬಗ್ಗೆ ಬ್ಯಾನರ್ಜಿ ಅವರೊಂದಿಗೆ ಒಪ್ಪಂದಕ್ಕೆ ಬರಬಹುದೇ?ʼ ಎಂದು ಮಾಧ್ಯಮದವರು ಕೇಳಿದರು. ರಾಹುಲ್ ʻಜೈ ಸಂವಿಧಾನ್ (ಸಂವಿಧಾನಕ್ಕೆ ಜಯವಾಗಲಿ)ʼ ಎಂದು ಹೇಳಿದರು.
ಎಂಟು ಬಾರಿ ಲೋಕಸಭೆ ಸಂಸದರಾಗಿರುವ ಸುರೇಶ್ ಅವರು ಸ್ಪೀಕರ್ ಹುದ್ದೆಗೆ ಪ್ರತಿಪಕ್ಷಗಳ ಆಯ್ಕೆಯಾಗಿದ್ದು, ಬಿಜೆಪಿಯ ಓಂ ಬಿರ್ಲಾ ವಿರುದ್ಧ ಸ್ಪರ್ಧಿಸಲಿದ್ದಾರೆ.