
ಚುನಾವಣೆ 2024: ಬಾರಾಮತಿಯಲ್ಲಿ ಪವಾರ್ ವಿರುದ್ಧ ಪವಾರ್?
ಮಹಾರಾಷ್ಟ್ರದ ಬಾರಾಮತಿ ಲೋಕಸಭೆ ಕ್ಷೇತ್ರವು ಈ ಬಾರಿ ಪವಾರ್ ಕುಟುಂಬದ ನಡುವೆಯೇ ಕದನದ ಕಣವಾಗಿ ಪರಿವರ್ತನೆ ಆಗಬಹುದು. ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರ ಪುತ್ರಿ ಸಂಸದೆ ಸುಪ್ರಿಯಾ ಸುಳೆ ಹಾಗೂ ಉಪಮುಖ್ಯಮಂತ್ರಿ ಮತ್ತು ಬಂಡಾಯ ಎನ್‌ಸಿಪಿಯ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ನಡುವೆ ಸ್ಪರ್ಧೆ ನಡೆಯಲಿದೆ.
ಸುಪ್ರಿಯಾ ಸುಳೆ 2009 ರಿಂದ ಸತತ ಮೂರು ಅವಧಿಗೆ ಲೋಕಸಭೆಯಲ್ಲಿ ಬಾರಾಮತಿಯನ್ನು ಪ್ರತಿನಿಧಿಸಿದ್ದಾರೆ. ಶರದ್ ಪವಾರ್ ಐದು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅವರು ಆರು ಬಾರಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಾರಾಮತಿಯಿಂದ ಆಯ್ಕೆಯಾಗಿದ್ದಾರೆ.
ಅಜಿತ್ ಪವಾರ್ ಮನವಿ: ಅಜಿತ್ ಪವಾರ್ 1991ರಲ್ಲಿ ಬಾರಾಮತಿ ಲೋಕಸಭೆ ಸ್ಥಾನವನ್ನು ಗೆದ್ದರು; ನಂತರ ಅಲ್ಲಿಂದ ಏಳು ಬಾರಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾಯಿತರಾದರು. ಶುಕ್ರವಾರ ಅಜಿತ್ ಪವಾರ್ ಅವರು ಬಾರಾಮತಿಯ ಮತದಾರರಿಗೆ ʻಮೊದಲ ಬಾರಿ ಸ್ಪರ್ಧಿಸಿದವರನ್ನು ಆಯ್ಕೆ ಮಾಡಿʼ ಎಂದು ಮನವಿ ಮಾಡುವ ಮೂಲಕ ಮೊದಲ ಬಾಣ ಬಿಟ್ಟಿದ್ದಾರೆ. ಅವರು ಯಾವುದೇ ಹೆಸರನ್ನು ಹೇಳಿಲ್ಲ. ಆದರೆ, ತಮ್ಮ ಪತ್ನಿ ಸುನೇತ್ರಾ ಪವಾರ್ ಅವರನ್ನು ಉಲ್ಲೇಖಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಸುನೇತ್ರ ಪ್ರಚಾರ: ಇದು ಖಾಲಿ ಮಾತು ಅಲ್ಲ ಎಂದು ಸಾಬೀತುಪಡಿಸಲು, ಸುನೇತ್ರಾ ಪವಾರ್ ಈಗಾಗಲೇ ಬಾರಾಮತಿಯಲ್ಲಿ ಪ್ರಚಾರ ಪ್ರಾರಂಭಿಸಿದ್ದಾರೆ. ಸುನೇತ್ರಾ ಪವಾರ್ ರಾಜಕೀಯ ಕುಟುಂಬದಿಂದ ಬಂದವರು. ಆಕೆಯ ಸಹೋದರ ಪದ್ಮಸಿಂಹ ಪಾಟೀಲ್ ಹಿರಿಯ ರಾಜಕಾರಣಿ ಮತ್ತು ಮಾಜಿ ಸಚಿವ. ʻಭಾವನಾತ್ಮಕ ವಿಷಯಗಳ ಬಗ್ಗೆ ಮಾತನ್ನಾಡಿ, ನಿಮ್ಮ ಮತ ಕೇಳುತ್ತಾರೆ. ಆದರೆ, ನೀವು ಭಾವನಾತ್ಮಕ ವಿಷಯ ಅಥವಾ ಅಭಿವೃದ್ಧಿ ಕಾರ್ಯ ಹಾಗೂ ಮುಂದಿನ ಪೀಳಿಗೆಯ ಕಲ್ಯಾಣಕ್ಕಾಗಿ ಮತ ಚಲಾಯಿಸುತ್ತೀರಾ?ʼ
ಸುಳೆ ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯಿಸಿದ ಸುಳೆ, ʻಇದು ಪ್ರಜಾಪ್ರಭುತ್ವ. ಇಲ್ಲಿ ಪ್ರತಿಯೊಬ್ಬರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆʼ ಎಂದು ಹೇಳಿದರು.
2023ರ ಜುಲೈನಲ್ಲಿ ಅಜಿತ್ ಪವಾರ್ ಮತ್ತು ಇತರ ಎಂಟು ಶಾಸಕರು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವನ್ನು ಸೇಋಇದರು. ಚುನಾವಣೆ ಆಯೋಗವು ಅಜಿತ್ ಪವಾರ್ ಬಣವನ್ನು 'ನೈಜ ಎನ್ಸಿಪಿ' ಎಂದು ತೀರ್ಪು ನೀಡಿದೆ. ಇದರಿಂದ ಪಕ್ಷದ ಹೆಸರು ಮತ್ತು ಚಿಹ್ನೆ (ಗಡಿಯಾರ) ಅಜಿತ್ ಪವಾರ್ ಕೈಸೇರಿದೆ.