ಎಡ ಪಕ್ಷಗಳ ಸಾಧನೆಯಲ್ಲಿ ಸುಧಾರಣೆ
x

ಎಡ ಪಕ್ಷಗಳ ಸಾಧನೆಯಲ್ಲಿ ಸುಧಾರಣೆ


ಹೊಸದಿಲ್ಲಿ, ಜೂ.4- ಉಳಿವಿಗಾಗಿ ಕದನ ನಡೆಸುತ್ತಿದ್ದ ಎಡಪಕ್ಷಗಳು, 2024ರ ಲೋಕಸಭೆ ಚುನಾವಣೆಯಲ್ಲಿಸ್ವಲ್ಪಮಟ್ಟಿಗೆ ಉತ್ತಮ ಸಾಧನೆ ಮಾಡಿವೆ. ಎಂಟರಿಂದ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

17ನೇ ಲೋಕಸಭೆಯಲ್ಲಿ ಕೇವಲ ಮೂವರು ಸಂಸದರನ್ನು ಹೊಂದಿದ್ದ ಸಿಪಿಐ (ಎಂ), ಐದು ಸಂಸದೀಯ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜಸ್ಥಾನದ ಸಿಖರ್‌ ನಲ್ಲಿ ಪಕ್ಷದ ಅಭ್ಯರ್ಥಿ ಅಮ್ರ ರಾಮ್, ಬಿಜೆಪಿಯ ಸುಮೇಧಾನಂದ ಸರಸ್ವತಿಗಿಂತ 55,814 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ತಮಿಳುನಾಡಿನಲ್ಲಿ ಸಿಪಿಐ(ಎಂ) ಮಧುರೈ ಮತ್ತು ದಿಂಡಿಗಲ್‌ನಲ್ಲಿ ಸ್ಪರ್ಧಿಸಿದ್ದು, ಎರಡರಲ್ಲೂ ಮುನ್ನಡೆ ಸಾಧಿಸಿದೆ. ಕೇರಳದ ಸಿಪಿಐ(ಎಂ)ನ ಅಲತ್ತೂರ್ ಕೆ ರಾಧಾಕೃಷ್ಣನ್ ಕಾಂಗ್ರೆಸ್‌ನ ರಮ್ಯಾ ಹರಿದಾಸ್ ವಿರುದ್ಧ 15,936 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಕೇರಳದ ಅಟ್ಟಿಂಗಲ್‌ನಲ್ಲಿ ಸಿಪಿಐ(ಎಂ), ಕಾಂಗ್ರೆಸ್‌ನ ಅಡೂರ್ ಪ್ರಕಾಶ್ ವಿರುದ್ಧ ವಿ. ಜಾಯ್ ಅವರನ್ನು ಕಣಕ್ಕಿಳಿಸಿದೆ. ಸಿಪಿಐ(ಎಂ) ಅಭ್ಯರ್ಥಿ 600 ಮತಗಳಿಂದ ಮುನ್ನಡೆಯಲ್ಲಿದ್ದರು. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಸಿಪಿಐ(ಎಂ)ನ ಎಂ.ಡಿ .ಸಲೀಂ ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ಅಬು ತಾಹೆರ್ ಖಾನ್ ಅವರಿಗಿಂತ 11,838 ಮತಗಳಿಂದ ಹಿಂದೆ ಇದ್ದರು.

17ನೇ ಲೋಕಸಭೆಯಲ್ಲಿ ಇಬ್ಬರು ಸಂಸದರನ್ನು ಹೊಂದಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ತಮಿಳುನಾಡಿನ ತಿರುಪುರ್ ಮತ್ತು ನಾಗಪಟ್ಟಿನಂನಲ್ಲಿ ಮುನ್ನಡೆ ಸಾಧಿಸಿದೆ. ಬಿಹಾರದ ಬೇಗುಸರಾಯ್‌ನಲ್ಲಿ ಪಕ್ಷದ ಅಬ್ದೇಶ್ ಕುಮಾರ್ ರಾಯ್ ಅವರು ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರಿಗಿಂತ ಸುಮಾರು 8,000 ಹಿನ್ನಡೆಯಲ್ಲಿದ್ದರು.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಶನ್ ಬಿಹಾರದಲ್ಲಿ ಸ್ಪರ್ಧಿಸಿದ ಮೂರು ಸ್ಥಾನಗಳಲ್ಲಿ ಎರಡರಲ್ಲಿ ಮುನ್ನಡೆ ಸಾಧಿಸಿದೆ. ಅರಾಹ್‌ನಲ್ಲಿ ಸಿಪಿಐ-ಎಂಎಲ್‌ನ ಸುದಾಮ ಪ್ರಸಾದ್ ಅವರು ಬಿಜೆಪಿಯ ಆರ್‌ಕೆ ಸಿಂಗ್‌ಗಿಂತ 18,000 ಕ್ಕೂ ಹೆಚ್ಚು ಮತ್ತು ಕರಕಟ್‌ನಲ್ಲಿ ರಾಜಾ ರಾಮ್ ಸಿಂಗ್ ಅವರು ಎನ್‌ಡಿಎ ಅಭ್ಯರ್ಥಿ ಉಪೇಂದ್ರ ಕುಶ್ವಾಹಾ ಅವರಿಗಿಂತ ಸುಮಾರು 25,000 ಮತಗಳಿಂದ ಮುಂದಿದ್ದಾರೆ.

ಮಧ್ಯಾಹ್ನದ ವೇಳೆಗ ಸಿಪಿಐ(ಎಂ) ಸುಮಾರು ಶೇ. 1.83 ರಷ್ಟು ಮತ ದಾಖಲಿಸಿದೆ. 2019 ರ ಶೇ.1.75 ರಷ್ಟು ಪ್ರಮಾಣವನ್ನು ಮೀರಿಸಿದೆ. ಸಿಪಿಐ ಮತಗಳಿಕೆ ಶೇ.0.57 ಹಾಗೂ ಸಿಪಿಐ(ಎಂಎಲ್)ನ ಪಾಲು ಶೇ.0.11ರಷ್ಟಿತ್ತು.

Read More
Next Story