Lebanon Pager attacks| ಕೇರಳ ಮೂಲದ ನಾರ್ವೆಯ ಪ್ರಜೆಗೆ ಸಂಬಂಧವಿದೆಯೇ?
ರಿನ್ಸನ್ ಜೋಸ್(37) ವಯನಾಡಿನವರು; ಒಂದು ದಶಕದ ಹಿಂದೆ ನಾರ್ವೆಗೆ ವಲಸೆ ಬಂದಿದ್ದಾರೆ. ಪಾಂಡಿಚೇರಿ ವಿಶ್ವವಿದ್ಯಾನಿಲಯದಿಂದ ಎಂಬಿಎ ಮತ್ತು ಓಸ್ಲೋ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯದಿಂದ ಅಂತಾರಾಷ್ಟ್ರೀಯ ಸಮಾಜ ಕಲ್ಯಾಣ ಮತ್ತು ಆರೋಗ್ಯ ನೀತಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ
ಲೆಬನಾನ್‌ನ ಹಿಜ್ಬುಲ್ಲಾಗಳಿಗೆ ಮಾರಾಟವಾದ ಪೇಜರ್‌ಗಳು ಕೇರಳ ಮೂಲದ ನಾರ್ವೇಜಿಯನ್ ಪ್ರಜೆ ರಿನ್ಸನ್ ಜೋಸ್ ಜೊತೆ ಸಂಬಂಧ ಹೊಂದಿವೆ. ಆದರೆ, ಜೋಸ್ ಸಂಭವನೀಯ ಪಾಲ್ಗೊಳ್ಳುವಿಕೆ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯಿಲ್ಲ.
ದಾಳಿಗೆ ಇಸ್ರೇಲ್ ಹೊಣೆ ಎಂದು ಹಿಜ್ಬುಲ್ಲಾ ಆರೋಪಿಸಿದೆ. ಆದರೆ, ಇಸ್ರೇಲ್ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅತ್ಯಾಧುನಿಕ ದಾಳಿಯನ್ನು ನಡೆಸಲು ಇಸ್ರೇಲಿಗಳು ಯುರೋಪಿನಲ್ಲಿ ಹಲವಾರು ಶೆಲ್ ಕಂಪನಿಗಳನ್ನು ಸ್ಥಾಪಿಸಿರಬಹುದು ಎಂಬ ಊಹೆಗಳಿವೆ.
ತೈವಾನಿನ ಸಂಸ್ಥೆಯಿಂದ ನಿರಾಕರಣೆ: ಸ್ಫೋಟಗೊಂಡ ಪೇಜರ್‌ಗಳು ತೈವಾನಿನ ಗೋಲ್ಡ್ ಅಪೊಲೊ ಬ್ರಾಂಡ್ ಹೆಸರು ಹೊಂದಿದ್ದವು. ಆ ದರೆ, ಗೋಲ್ಡ್ ಅಪೊಲೊ ಸಂಸ್ಥಾಪಕ ಮತ್ತು ಅಧ್ಯಕ್ಷ ಹ್ಸು ಚಿಂಗ್ ಕುವಾಂಗ್, ಈ ಪೇಜರ್‌ಗಳನ್ನು ತನ್ನ ಕಂಪನಿ ಉತ್ಪಾದಿಸಿಲ್ಲ ಎಂದು ಹೇಳಿದರು. ತಮ್ಮ ಕಂಪನಿ ಹಂಗೇರಿಯ ಬುಡಾಪೆಸ್ಟ್‌ನಲ್ಲಿರುವ ಬಿಎಸಿ ಕನ್ಸಲ್ಟಿಂಗ್ ಎಂಬ ಕಂಪನಿಗೆ ಮೂರು ವರ್ಷಗಳ ಪರವಾನಗಿ ಒಪ್ಪಂದ ಮಾಡಿಕೊಂಡಿದ್ದು, ಅದು ಪೇಜರ್‌ಗಳನ್ನುಉತ್ಪಾದಿಸಿರಬಹುದು ಎಂದು ಹೇಳಿದರು.
ಬಿಎಸಿ ಕನ್ಸಲ್ಟಿಂಗ್ ಕೇವಲ ಮಧ್ಯವರ್ತಿ ಎಂದು ಹಂಗೇರಿಯ ಟೆಲೆಕ್ಸ್ ವರದಿ ಮಾಡಿದೆ.
ಬಲ್ಗೇರಿಯದ ನಾರ್ಟಾ ಗ್ಲೋಬಲ್ ಪಾತ್ರ: ಬಿಎಸಿ ಕನ್ಸಲ್ಟಿಂಗ್ ನಾರ್ಟಾ ಗ್ಲೋಬಲ್ ಲಿಮಿಟೆಡ್ ಎಂಬ ಬಲ್ಗೇರಿಯನ್ ಕಂಪನಿಯೊಂದಿಗೆ ವ್ಯವಹರಿಸಿದೆ ಎಂದು ಟೆಲೆಕ್ಸ್ ವರದಿ ಮಾಡಿದೆ. ಇದು ಪೇಜರ್ಸ್ ಒಪ್ಪಂದದ ಹಿಂದೆ ಇದೆ.
ಸಿಬಿಎಸ್ ನ್ಯೂಸ್ ಪ್ರಕಾರ, ನಾರ್ಟಾ ಗ್ಲೋಬಲ್ ಲಿಮಿಟೆಡ್ ಅನ್ನು ಏಪ್ರಿಲ್ 2022 ರಲ್ಲಿ ಬಲ್ಗೇರಿಯಾದಲ್ಲಿ ನೋಂದಾಯಿಸಲಾಗಿದೆ ಮತ್ತು ಇದರ ಮಾಲೀಕ ಭಾರತೀಯ ಮೂಲದ ನಾರ್ವೇಜಿಯನ್ ಪ್ರಜೆ ರಿನ್ಸನ್ ಜೋಸ್ ಎಂದು ಹೇಳಿದೆ. ಮಾಧ್ಯಮಗಳು ವಯನಾಡಿನ ಮಾನಂತವಾಡಿಯಲ್ಲಿರುವ ರಿನ್ಸನ್ ಅವರ ಕುಟುಂಬಕ್ಕೆ ಹುಡುಕಾಟ ನಡೆಸಿವೆ. ಆದರೆ, ಬಲ್ಗೇರಿಯಾದ ಭದ್ರತಾ ಸಂಸ್ಥೆ ಡಿಎಎನ್‌ಎಸ್, ಲೆಬನಾನ್ ದಾಳಿಯಲ್ಲಿ ಬಳಸಿದ ಪೇಜರ್‌ಗಳನ್ನು ಬಲ್ಗೇರಿಯಾಕ್ಕೆ ಆಮದು ಮಾಡಿಕೊಂಡಿಲ್ಲ, ರಫ್ತು ಮಾಡಿಲ್ಲ ಅಥವಾ ಉತ್ಪಾದಿಸಿಲ್ಲ ಎಂದು ಹೇಳುವ ಮೂಲಕ ನಾರ್ಟಾ ಗ್ಲೋಬಲ್‌ಗೆ ಕ್ಲೀನ್ ಚಿಟ್ ನೀಡಿದಂತೆ ಕಾಣುತ್ತಿದೆ ( ಸೆಪ್ಟೆಂಬರ್ 20).
ʻಸೆಪ್ಟೆಂಬರ್ 17 ರಂದು ಸ್ಫೋಟಗೊಂಡ ಯಾವುದೇ ಸಂವಹನ ಸಾಧನಗಳನ್ನು ಬಲ್ಗೇರಿಯಕ್ಕೆ ಆಮದು ಮಾಡಿಕೊಂಡಿಲ್ಲ, ರಫ್ತು ಮಾಡಿಲ್ಲ ಅಥವಾ ಉತ್ಪಾದಿಸಿಲ್ಲ,ʼ ಡಿಎಎನ್‌ಎಸ್ ಹೇಳಿದೆ.
ರಿನ್ಸನ್ ಜೋಸ್ ಯಾರು?: ರಿನ್ಸನ್ ಜೋಸ್(37) ವಯನಾಡಿನವರು; ಒಂದು ದಶಕದ ಹಿಂದೆ ನಾರ್ವೆಗೆ ವಲಸೆ ಬಂದಿದ್ದಾರೆ. ಪಾಂಡಿಚೇರಿ ವಿಶ್ವವಿದ್ಯಾನಿಲಯದಿಂದ ಎಂಬಿಎ ಮತ್ತು ಓಸ್ಲೋ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯದಿಂದ ಅಂತಾರಾಷ್ಟ್ರೀಯ ಸಮಾಜ ಕಲ್ಯಾಣ ಮತ್ತು ಆರೋಗ್ಯ ನೀತಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂದು ಆನ್ ಮನೋರಮಾ ವರದಿ ಮಾಡಿದೆ.
ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಮಾರ್ಚ್ 2022 ರಿಂದ ಡಿಎನ್ ಮೀಡಿಯಾ ಗ್ರೂಪ್‌ನಲ್ಲಿ ಉದ್ಯೋಗಿ. ಐಟಿ ಸೇವೆಗಳು, ಸಲಹೆ, ಸಂಗ್ರಹ ಮತ್ತು ನೇಮಕ ಕಂಪನಿಯಾದ ನೊರ್ಟಾಲಿಂಕ್(NortaLink) ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ. ರಿನ್ಸನ್ ಈಗ ಅಮೆರಿಕದಲ್ಲಿದ್ದಾರೆ ಎಂದು ವರದಿಯಾಗಿದೆ.
ಅವರ ತಂದೆ ಮಾನಂದವಾಡಿಯಲ್ಲಿ ದರ್ಜಿ ಆಗಿದ್ದು, ಸಹೋದರ ಇಂಗ್ಲೆಂಡಿನಲ್ಲಿ ಮತ್ತು ಐರ್ಲೆಂಡ್‌ನಲ್ಲಿ ಸಹೋದರಿ ಇದ್ದಾರೆ. ಅವರ ಕುಟುಂಬಕ್ಕೆ ರಿನ್ಸನ್ ಅವರ ವ್ಯಾಪಾರ ವಹಿವಾಟು ಬಗ್ಗೆ ಮಾಹಿತಿ ಇಲ್ಲ ಮತ್ತು ಪೇಜರ್ ದಾಳಿ ವರದಿಗಳು ಗಮನಕ್ಕೆ ಬಂದಿಲ್ಲ. ಸ್ಥಳೀಯರು ಕುಟುಂಬದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಶುಕ್ರವಾರ ರಿನ್ಸನ್ ಅವರನ್ನು ಸಂಪರ್ಕಿಸಲು ನಡೆಸಿದ ಪ್ರಯತ್ನ ಫಲಕಾರಿಯಾಗಲಿಲ್ಲ ಎಂದು ಅವರ ಸೋದರ ಸಂಬಂಧಿಯೊಬ್ಬರು ಹೇಳಿದ್ದಾರೆ.