ಪಿವಿಎನ್‌, ಚರಣ್ ಸಿಂಗ್ ಸೇರಿದಂತೆ 4 ಮಂದಿಗೆ ಭಾರತರತ್ನ ಪ್ರಶಸ್ತಿ ಪ್ರದಾನ
x
ಪಿ.ವಿ. ನರಸಿಂಹ ರಾವ್‌ ಅವರ ಪರವಾಗಿ ಪುರಸ್ಕಾರ ಸ್ವೀಕರಿಸಿದ ಅವರ ಪುತ್ರ ಪಿ.ವಿ.ಪ್ರಭಾಕರ ರಾವ್

ಪಿವಿಎನ್‌, ಚರಣ್ ಸಿಂಗ್ ಸೇರಿದಂತೆ 4 ಮಂದಿಗೆ ಭಾರತರತ್ನ ಪ್ರಶಸ್ತಿ ಪ್ರದಾನ


ನವದೆಹಲಿ, ಮಾ. 30- ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್ ಮತ್ತು ಚೌಧರಿ ಚರಣ್ ಸಿಂಗ್, ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ರಾಷ್ಟ್ರಪತಿ ಭವನದಲ್ಲಿ ಭಾರತರತ್ನ ಪ್ರಶಸ್ತಿ ಪ್ರದಾನ ಮಾಡಿದರು.

ʻದೇಶದ ಒಂಬತ್ತನೇ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ದೂರಗಾಮಿ ಆರ್ಥಿಕ ಸುಧಾರಣೆಗಳ ನೇತೃತ್ವ ವಹಿಸಿದ್ದರು. ಹರೆಯದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ,ವಿಶೇಷವಾಗಿ, ನಿಜಾಮ್ ಆಳ್ವಿಕೆಯ ದುರಾಡಳಿತ ಮತ್ತು ದಬ್ಬಾಳಿಕೆ ವಿರುದ್ಧ ಹೋರಾಡಿದ್ದರು. ಹಲವು ಭಾಷೆಗಳು ಮತ್ತು ಸಾಹಿತ್ಯದ ಮೇಲೆ ಹಿಡಿತ ಹೊಂದಿದ್ದರುʼ ಎಂದು ರಾಷ್ಟ್ರಪತಿ ಭವನ ಎಕ್ಸ್‌ನ ಪೋಸ್ಟ್‌ನಲ್ಲಿ ತಿಳಿಸಿದೆ. ಪಿವಿಎನ್‌ ಪರವಾಗಿ ಅವರ ಪುತ್ರ ಪಿ.ವಿ. ಪ್ರಭಾಕರ್ ರಾವ್ ಅವರು ಪ್ರಶಸ್ತಿ ಸ್ವೀಕರಿಸಿದರು.

1991 ರಿಂದ 1996 ರವರೆಗೆ ಪ್ರಧಾನಿಯಾಗಿದ್ದ ಪಿವಿಎನ್‌, ದಕ್ಷಿಣದ ಮೊದಲ ಪ್ರಧಾನಿ. ಪ್ರಧಾನಿ ಹುದ್ದೆಗೇರಿದ ನೆಹರು-ಗಾಂಧಿ ಕುಟುಂಬದ ಹೊರಗಿನ ಮೊದಲ ಕಾಂಗ್ರೆಸ್ ನಾಯಕ. ಜೂನ್ 28, 1921 ರಂದು ಕರೀಂನಗರ (ಈಗ ತೆಲಂಗಾಣದಲ್ಲಿದೆ)ದ ಕೃಷಿಕ ಕುಟುಂಬದಲ್ಲಿ ಜನನ. 1980ರ ದಶಕದಲ್ಲಿ ವಿದೇಶಾಂಗ, ರಕ್ಷಣೆ ಮತ್ತು ಗೃಹ ಸೇರಿದಂತೆ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದರು. ಡಿಸೆಂಬರ್ 23, 2004 ರಂದು ನಿಧನರಾದರು.

ಚೌಧರಿ ಚರಣ್‌ ಸಿಂಗ್:‌ ʻಉತ್ಕಟ ದೇಶಭಕ್ತರಾಗಿದ್ದ ಚೌಧರಿ ಚರಣ್ ಸಿಂಗ್, ಸ್ವಾತಂತ್ರ್ಯ ಹೋರಾಟದ ವೇಳೆ ಅನೇಕ ಬಾರಿ ಜೈಲುವಾಸ ಅನುಭವಿಸಿದರು. ಜಮೀನ್ದಾರಿ ನಿರ್ಮೂಲನೆ ಮತ್ತು ಭೂಸುಧಾರಣೆಗಳಿಗೆ ಅಪಾರ ಕೊಡುಗೆ ನೀಡಿದ್ದು, ಆರ್ಥಿಕತೆ, ವಿಶೇಷವಾಗಿ ಗ್ರಾಮೀಣ ಮತ್ತು ಕೃಷಿ ಆರ್ಥಿಕತೆ ಬಗ್ಗೆ ಆಳವಾದ ತಿಳಿವಳಿಕೆ ಇತ್ತುʼ ಎಂದು ಎಕ್ಸ್‌ ನ ಪೋಸ್ಟ್‌ನಲ್ಲಿ ಹೇಳಿದೆ. ಚರಣ್ ಸಿಂಗ್ ಅವರ ಪರವಾಗಿ ಮೊಮ್ಮಗ ಜಯಂತ್ ಚೌಧರಿ ಪ್ರಶಸ್ತಿ ಸ್ವೀಕರಿಸಿದರು.

ಪಶ್ಚಿಮ ಉತ್ತರ ಪ್ರದೇಶದ ಜಾಟ್ ನಾಯಕ ಚೌಧರಿ ಚರಣ್ ಸಿಂಗ್( ಜುಲೈ 28, 1979 ಮತ್ತು ಜನವರಿ 14, 1980 ರ ಅವಧಿಯಲ್ಲಿ ಪ್ರಧಾನಿ) ಡಿಸೆಂಬರ್ 23, 1902 ರಂದು ಮೀರತ್ ಜಿಲ್ಲೆಯ ನೂರ್‌ಪುರದಲ್ಲಿ ಜನಿಸಿದರು. 1929 ರಲ್ಲಿ ಮೀರತ್‌ಗೆ ಸ್ಥಳಾಂತರಗೊಂಡರು ಮತ್ತು ನಂತರ ಕಾಂಗ್ರೆಸ್‌ ಸೇರಿದರು. ಅವರು 1987 ರಲ್ಲಿ ನಿಧನರಾದರು.

ಎಂ.ಎಸ್‌. ಸ್ವಾಮಿನಾಥನ್:‌ ಎಂ.ಎಸ್. ಸ್ವಾಮಿನಾಥನ್ ಅವರಿಗೆ ಮರಣೋತ್ತರವಾಗಿ ಭಾರತರತ್ನ ನೀಡಿ ಗೌರವಿಸಲಾಗಿದೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ. ಆಹಾರ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಅವರನ್ನು 'ಹಸಿರು ಕ್ರಾಂತಿಯ ಪಿತಾಮಹ' ಎಂದು ಕರೆಯಲಾಗುತ್ತದೆ. ಆಗಸ್ಟ್ 7, 1925 ರಂದು ತಮಿಳುನಾಡಿನ ಕುಂಭಕೋಣಂನಲ್ಲಿ ಡಾ.ಎಂ.ಕೆ. ಸಾಂಬಶಿವನ್ ಮತ್ತು ಪಾರ್ವತಿ ತಂಗಮ್ಮಾಯಿ ದಂಪತಿಗೆ ಜನಿಸಿದ ಸ್ವಾಮಿನಾಥನ್, ಕೃಷಿ ಕ್ಷೇತ್ರದ ಪಥವನ್ನು ಬದಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.

ಮಂಕೊಂಬು ಸಾಂಬಶಿವನ್ ಸ್ವಾಮಿನಾಥನ್, ರಾಜ್ಯಸಭೆ ಸದಸ್ಯ (2007-13)ರೂ ಆಗಿದ್ದರು. ಪ್ರಪಂಚದಾದ್ಯಂತದ ವಿಶ್ವವಿದ್ಯಾಲಯಗಳಿಂದ 84 ಗೌರವ ಡಾಕ್ಟರೇಟ್ ಪದವಿ ಗಳಿಸಿದ್ದರು. ಸೆಪ್ಟೆಂಬರ್ 28, 2023 ರಂದು 98ನೇ ವಯಸ್ಸಿನಲ್ಲಿ ನಿಧನರಾದರು. ಅವರ ಪುತ್ರಿ ನಿತ್ಯಾ ರಾವ್ ಪ್ರಶಸ್ತಿ ಸ್ವೀಕರಿಸಿದರು.

ಕರ್ಪೂರಿ ಠಾಕೂರ್:‌ ʻಕರ್ಪೂರಿ ಠಾಕೂರ್ ಅವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾನತೆ ಹಾಗೂ ಒಳಗೊಳ್ಳುವ ಅಭಿವೃದ್ಧಿಯ ಹರಿಕಾರ. ಅವರು ಜನವರಿ 24, 1924 ರಂದು ಅತ್ಯಂತ ಹಿಂದುಳಿದ ವರ್ಗಗಳಲ್ಲಿ ಒಂದಾದ ನಾಯ್ ಸಮಾಜ (ಕ್ಷೌರಿಕ ಸಮುದಾಯ) ದಲ್ಲಿ ಜನಿಸಿದರು. ಜನರ ಜೀವನವನ್ನು ಸುಧಾರಿಸಲು ಕೆಲಸ ಮಾಡಿದ ಅವರನ್ನು 'ಜನನಾಯಕʼ ಎಂದು ಕರೆಯಲಾಗುತ್ತದೆ. ಡಿಸೆಂಬರ್ 1970- ಜೂನ್ 1971 ಮತ್ತು ಡಿಸೆಂಬರ್ 1977- ಏಪ್ರಿಲ್ 1979 ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಹಿಂದುಳಿದ ವರ್ಗಗಳಿಗೆ ಕೋಟಾ ಪರಿಚಯಿಸಿದ ಮುಂಗೇರಿ ಲಾಲ್ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕಾಗಿ ಅವರನ್ನುಸ್ಮರಿಸಿಕೊಳ್ಳಲಾಗುತ್ತದೆ. ಫೆಬ್ರವರಿ 17, 1988 ರಂದು ನಿಧನರಾದರು. ಅವರ ಪರವಾಗಿ ಪುತ್ರ ರಾಮನಾಥ್ ಠಾಕೂರ್ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ವರ್ಷ ಸರ್ಕಾರ ಐದು ಮಂದಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದೆ. ಬಿಜೆಪಿ ಮುಖಂಡ ಮತ್ತು ಮಾಜಿ ಉಪ ಪ್ರಧಾನಿ ಎಲ್‌.ಕೆ. ಆಡ್ವಾಣಿ ಅವರಿಗೂ ಈ ಪುರಸ್ಕಾರ ನೀಡಲಾಗಿದೆ.

ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರು ಪಾಲ್ಗೊಂಡಿದ್ದರು.

Read More
Next Story