ಲಡಾಖ್ ಕರ್ಫ್ಯೂ: ಪ್ರವಾಸೋದ್ಯಮಕ್ಕೆ ಹೊಡೆತ, ಹೋಟೆಲ್‌ಗಳು ಖಾಲಿ ಖಾಲಿ, ನಿಂತಲ್ಲೇ ನಿಂತಿವೆ ಟ್ಯಾಕ್ಸಿಗಳು
x

ಲಡಾಖ್ ಕರ್ಫ್ಯೂ: ಪ್ರವಾಸೋದ್ಯಮಕ್ಕೆ ಹೊಡೆತ, ಹೋಟೆಲ್‌ಗಳು ಖಾಲಿ ಖಾಲಿ, ನಿಂತಲ್ಲೇ ನಿಂತಿವೆ ಟ್ಯಾಕ್ಸಿಗಳು

ಲೇಹ್‌ನಲ್ಲಿ ಒಂದು ವಾರದಿಂದ ಜಾರಿಯಲ್ಲಿರುವ ಕರ್ಫ್ಯೂನಿಂದಾಗಿ ಹೋಟೆಲ್‌ಗಳು ಬಿಕೋ ಎನ್ನುತ್ತಿವೆ, ಟ್ಯಾಕ್ಸಿಗಳು ನಿಂತಲ್ಲೇ ನಿಂತಿವೆ ಮತ್ತು ಸ್ಥಳೀಯ ವ್ಯವಹಾರಗಳು ಸಂಕಷ್ಟದಲ್ಲಿವೆ. ಲಡಾಖ್‌ನ ಪ್ರವಾಸೋದ್ಯಮ ಈ ಹೊಡೆತವನ್ನು ಎಷ್ಟು ಕಾಲ ತಡೆದುಕೊಳ್ಳಬಲ್ಲದು?


Click the Play button to hear this message in audio format

ಲಡಾಖ್‌ನಲ್ಲಿ ಕರ್ಫ್ಯೂ ಜಾರಿಯಾಗಿ ಒಂದು ವಾರ ಕಳೆದಿದ್ದು, ಪ್ರವಾಸಿ ತಾಣಗಳು ಸಂಪೂರ್ಣವಾಗಿ ಮುಚ್ಚಿವೆ. ಅಲ್ಲಿಗೆ ಬಂದಿದ್ದ ಪ್ರವಾಸಿಗರು ಬೇಸರದಿಂದ ಹಿಂದಿರುಗುತ್ತಿದ್ದಾರೆ. ಇದು ಈಗಾಗಲೇ ದುರ್ಬಲವಾಗಿದ್ದ ಸ್ಥಳೀಯ ಪ್ರವಾಸೋದ್ಯಮದ ಮೇಲೆ ತೀವ್ರವಾದ ಹೊಡೆತ ನೀಡಿದೆ.

ಹೋಟೆಲ್‌ಗಳು, ಹೋಂಸ್ಟೇಗಳು ಮತ್ತು ಟ್ಯಾಕ್ಸಿ ಚಾಲಕರು ದಿನ ನಿತ್ಯದ ತಮ್ಮ ಆದಾಯವನ್ನು ಕಳೆದುಕೊಳ್ಳುತ್ತಿದ್ದಾರೆ. ಲಡಾಖ್​ಗೆ ಬರುವ ಪ್ರವಾಸಿಗರ ಸಂಖ್ಯೆ ಈಗಾಗಲೇ ಕುಸಿದಿದೆ. 2023ರಲ್ಲಿ 5,25,400 ಇದ್ದ ಪ್ರವಾಸಿಗರ ಸಂಖ್ಯೆ, 2024ರಲ್ಲಿ ಸುಮಾರು 3,76,400ಕ್ಕೆ ಇಳಿದಿತ್ತು, ಅಂದರೆ ಸುಮಾರು 1.5 ಲಕ್ಷ ಪ್ರವಾಸಿಗರ ಕುಸಿತ ಕಂಡುಬಂದಿತ್ತು. ಈಗ, ಪ್ರವಾಸೋದ್ಯಮದ ಪ್ರಮುಖ ಸೀಸನ್ ಆಗಿದ್ದು ಈ ವೇಳೆಯೇ ಕರ್ಫ್ಯೂ ಹೇರಿರುವುದರಿಂದ ಆರ್ಥಿಕ ಪರಿಣಾಮ ಮತ್ತಷ್ಟು ಗಂಭೀರವಾಗಿದೆ.

ಅಗತ್ಯ ವಸ್ತುಗಳ ಖರೀದಿಗಾಗಿ ಕೆಲಕಾಲ ಕರ್ಫ್ಯೂಸಡಿಲಗೊಳಿಸಿದರೂ, ಅದು ವ್ಯವಹಾರವನ್ನು ನಡೆಸಲು ಸಾಕಾಗುವುದಿಲ್ಲ ಎಂದು ಹೋಟೆಲ್ ಮಾಲೀಕರು ಹೇಳುತ್ತಾರೆ. ಅಲ್ಚಿಯ 'ಹೋಟೆಲ್ ಜಿಮ್ಸ್‌ಖಾಂಗ್'ನ ನೊರ್ಬೂ ಗಲಿಚಾನ್ ಅವರು 'ದ ಫೆಡರಲ್​' ಜತೆ ಮಾತನಾಡಿ "ಸೆಪ್ಟೆಂಬರ್ 29ರಂದು ನಮ್ಮ ಹೋಟೆಲ್‌ನಲ್ಲಿ ಕೇವಲ ಎರಡು ಕೊಠಡಿಗಳು ಮಾತ್ರ ಖಾಲಿಯಿದ್ದವು. ಆದರೆ ಈಗ ಪ್ರವಾಸಿಗರೆಲ್ಲರೂ ತೆರಳಿದ್ದರಿಂದ ಇಡೀ ಹೋಟೆಲ್ ಖಾಲಿಯಾಗಿದೆ," ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕರ್ಫ್ಯೂ ಸಡಿಲಿಕೆಯ ಎರಡು ಗಂಟೆಗಳ ಅವಧಿಯಲ್ಲಿ ಲೇಹ್‌ನಿಂದ ಸಾಮಗ್ರಿಗಳನ್ನು ತರುವುದು ಅಸಾಧ್ಯ ಎಂದು ಅವರು ಹೇಳುತ್ತಾರೆ.

ಸಂಕಷ್ಟದಲ್ಲಿರುವ ವ್ಯಾಪಾರ-ವಹಿವಾಟು

ಟರ್ಟುಕ್‌ನ ಹೋಟೆಲ್ ಮಾಲೀಕರಾಗಿರುವ ಗುಲಾಮ್ ಹುಸೇನ್ ಅವರು, ಈ ವರ್ಷವನ್ನು ಅತ್ಯಂತ ಸವಾಲಿನ ವರ್ಷ ಎಂದು ಹೇಳಿಕೊಂಡಿದ್ದಾರೆ. ಪ್ರತಿಕೂಲ ಹವಾಮಾನದಿಂದ ಈಗಾಗಲೇ ಹೊಡೆತ ಬಿದ್ದಿದ್ದ ಉದ್ಯಮಕ್ಕೆ, ಕರ್ಫ್ಯೂ ಮತ್ತಷ್ಟು ಆಘಾತ ಕೊಟ್ಟಿದೆ. "ನಮ್ಮ ಶೇ. 90ರಷ್ಟು ವ್ಯವಹಾರವು ಪ್ರವಾಸೋದ್ಯಮವನ್ನೇ ಅವಲಂಬಿಸಿದೆ. ಈಗ ನಮಗೆಲ್ಲರಿಗೂ ಭಾರಿ ನಷ್ಟವಾಗಿದೆ, ಬಾಡಿಗೆ ಕಟ್ಟಬೇಕಿದೆ," ಎಂದು ಅವರು ವಿವರಿಸಿದರು. ಇಂಟರ್ನೆಟ್ ಸ್ಥಗಿತದಿಂದಾಗಿ ಆನ್‌ಲೈನ್ ಬುಕಿಂಗ್‌ಗಳಿಗೂ ತೊಂದರೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಬೀದಿಗೆ ಬಿದ್ದ ಟ್ಯಾಕ್ಸಿ ಚಾಲಕರು

ಸ್ಥಳೀಯ ಟ್ಯಾಕ್ಸಿ ಚಾಲಕರ ಪರಿಸ್ಥಿತಿಯೂ ಚಿಂತಾಜನಕವಾಗಿದೆ. ಅಲ್ಲಿನ ಚಾಲಕರ ಯೂನಿಯನ್ ನಿಯಮಗಳ ಪ್ರಕಾರ, ಚಾಲಕರು ತಮ್ಮ ನೋಂದಾಯಿತ ಪ್ರದೇಶಗಳಲ್ಲಿ ಮಾತ್ರ ಕಾರ್ಯನಿರ್ವಹಿಸಬಹುದು. ಅಂದರೆ, ನುಬ್ರಾ ಟ್ಯಾಕ್ಸಿಯು ಲೇಹ್ ಅಥವಾ ಜನ್ಸ್ಕಾರ್‌ನಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ. ಅನೇಕರು ಸಾಲ ಮಾಡಿ ವಾಹನಗಳನ್ನು ಖರೀದಿಸಿದ್ದು, ಈಗ ಸಾಲ ಮರುಪಾವತಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ.

"ಈ ಕರ್ಫ್ಯೂಗಿಂತ ಮೊದಲು, ನಾನು ದಿನಕ್ಕೆ 1,500-1,800 ರೂಪಾಯಿ ಸಂಪಾದಿಸುತ್ತಿದ್ದೆ. ಈಗ ಏನೂ ಇಲ್ಲ. ಪ್ರವಾಸಿಗರೂ ಹೊರಗೆ ಬರುತ್ತಿಲ್ಲ. ನಾವು ಬೇರೆ ಯಾವ ಕೆಲಸಕ್ಕೆ ಹೋಗುವುದು?" ಎಂದು ನುಬ್ರಾದ ಟ್ಯಾಕ್ಸಿ ಚಾಲಕ ಇಕ್ಬಾಲ್ ದ ಫೆಡರಲ್​ಗೆ ಹೇಳಿದ್ದಾರೆ.

ಆರ್ಥಿಕ ಅನಿಶ್ಚಿತತೆ

ಸೆಪ್ಟೆಂಬರ್ 29ರಿಂದ ಅಕ್ಟೋಬರ್ 3ರವರೆಗೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿರುವುದು ಅನಿಶ್ಚಿತತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕರ್ಫ್ಯೂ ಮುಂದುವರಿದರೆ ಮತ್ತು ಬೇಡಿಕೆ ಕಡಿಮೆಯಾದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಸ್ಥಳೀಯ ವ್ಯವಹಾರಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಪರಿಸ್ಥಿತಿ ತಿಳಿಗೊಳ್ಳುವುದನ್ನು ಆಧರಿಸಿ ಮುಂದಿನ ಕಾನೂನು ಸಡಿಲಿಕೆಗಳನ್ನು ನಿರ್ಧರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಡಾಖ್‌ನಲ್ಲಿ ಸಹಜ ಸ್ಥಿತಿ ಮರುಸ್ಥಾಪಿಸುವ ಕ್ರಮಗಳ ಬಗ್ಗೆ ಚರ್ಚಿಸಲು ಅಕ್ಟೋಬರ್ 6ರಂದು ದೆಹಲಿಯಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಿಗದಿಯಾಗಿದೆ. ಖಾಲಿಯಾದ ಹೋಟೆಲ್‌ಗಳಿಂದ ಹಿಡಿದು ನಿಂತಲ್ಲೇ ನಿಂತಿರುವ ಟ್ಯಾಕ್ಸಿಗಳವರೆಗೆ, ಈ ಕರ್ಫ್ಯೂ ಲಡಾಖ್‌ನ ಕಠೋರ ವಾಸ್ತವವನ್ನು ಬಯಲುಮಾಡಿದೆ: ಇಲ್ಲಿ ಪ್ರವಾಸೋದ್ಯಮ ನಿಂತರೆ, ಜೀವನೋಪಾಯಗಳು ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಣ್ಮರೆಯಾಗುತ್ತವೆ.

Read More
Next Story