ಕುವೈತ್ ಅಗ್ನಿ ಅವಘಡ: ಕೇರಳದ 19, ತಮಿಳುನಾಡಿನ 5 ಮಂದಿ ಸಾವು
x

ಕುವೈತ್ ಅಗ್ನಿ ಅವಘಡ: ಕೇರಳದ 19, ತಮಿಳುನಾಡಿನ 5 ಮಂದಿ ಸಾವು

ಬೆಂಕಿ ಅವಘಡದಲ್ಲಿ ಮೃತಪಟ್ಟ 49 ಜನರಲ್ಲಿ ನಲವತ್ತೆರಡು ಮಂದಿ ಭಾರತೀಯರು.ಪರಿಸ್ಥಿತಿಯನ್ನು ಅವಲೋಕಿಸಲು ರಾಜ್ಯ ಸಚಿವ ಕೀರ್ತಿ ವರ್ಧನ್‌ ಸಿಂಗ್‌ ಅವರು ಕುವೈತಿಗೆ ತೆರಳಿದ್ದಾರೆ.


ದಕ್ಷಿಣ ಕುವೈತ್‌ನ ಮಂಗಾಫ್ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವಿಗೀಡಾದ 42 ಭಾರತೀಯರಲ್ಲಿ 19 ಮಂದಿ ಕೇರಳದವರು ಮತ್ತು ಐವರು ತಮಿಳುನಾಡಿನವರು ಇದ್ದಾರೆ. ವಸತಿ ಕಟ್ಟಡದಲ್ಲಿ 195 ವಲಸೆ ಕಾರ್ಮಿಕರು ನೆಲೆಸಿದ್ದರು. 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಬುಧವಾರ ರಾತ್ರಿ ಕುವೈತ್‌ ನ ಸಚಿವ ಅಬ್ದುಲ್ಲಾ ಅಲಿ ಅಲ್-ಯಾಹ್ಯಾ ಅವರೊಂದಿಗೆ ಮಾತನಾಡಿದ್ದು, ಮೃತರ ಶರೀರವನ್ನು ಶೀಘ್ರವಾಗಿ ಸ್ವದೇಶಕ್ಕೆ ಹಿಂದಿರುಗಿಸುವಂತೆ ಒತ್ತಾಯಿಸಿದ್ದಾರೆ.

ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಗುರುವಾರ (ಜೂನ್ 13) ಕುವೈತ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ತಮಿಳುನಾಡಿನ ಐವರ ಸಾವು: ತಮಿಳುನಾಡು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಅನಿವಾಸಿ ತಮಿಳರ ಕಲ್ಯಾಣ ಸಚಿವ ಗಿಂಗೀ ಕೆ.ಎಸ್. ಮಸ್ತಾನ್ ಮಾತನಾಡಿ, ತಂಜಾವೂರು, ರಾಮನಾಥಪುರಂ ಮತ್ತು ಪೆರವುರಾನಿಗೆ ಸೇರಿದ ಐವರು ಮೃತಪಟ್ಟಿದ್ದಾರೆ. ರಾಮ ಕರುಪ್ಪನ್, ವೀರಸಾಮಿ ಮಾರಿಯಪ್ಪನ್, ಚಿನ್ನದೊರೈ ಕೃಷ್ಣಮೂರ್ತಿ, ಮೊಹಮ್ಮದ್ ಶರೀಫ್ ಮತ್ತು ರಿಚರ್ಡ್ ಮೃತರು ಎಂದು ಗುರುತಿಸಲಾಗಿದೆ ಎಂದು ಹೇಳಿದರು.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನಿರ್ದೇಶನದಂತೆ ಮೃತದೇಹಗಳನ್ನು ತರಲು ಮತ್ತು ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕುವೈತ್‌ ರಾಯಭಾರ ಕಚೇರಿ ಅಧಿಕೃತ ಮಾಹಿತಿ ನೀಡಲಾಗುವುದು ಎಂದಿದೆ. ನಾವು ಪರಿಸ್ಥಿತಿ ಮೇಲೆ ನಿಗಾ ಇರಿಸಿದ್ದೇವೆ,ʼ ಎಂದು ಹೇಳಿದರು.

ಕುವೈತಿಗೆ ತೆರಳಿದ ಸಚಿವ: ʻಅಗ್ನಿ ದುರಂತ ಕುರಿತು ಸಚಿವರಾದ ಅಬ್ದುಲ್ಲಾ ಅಲಿ ಅಲ್-ಯಾಹ್ಯಾ ಅವರೊಂದಿಗೆ ಮಾತನಾಡಿದ್ದೇನೆ. ಪ್ರಕರಣದ ತನಿಖೆ ನಡೆಸಲಾಗುವುದು ಮತ್ತು ಜವಾಬ್ದಾರಿ ನಿಗದಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ,ʼ ಎಂದು ಜೈಶಂಕರ್ ಎಕ್ಸ್ ನಲ್ಲಿ ಬರೆದಿದ್ದಾರೆ. ʻಪಾರ್ಥಿವ ಶರೀರವನ್ನು ಶೀಘ್ರವಾಗಿ ಸ್ವದೇಶಕ್ಕೆ ಕಳುಹಿಸುವಂತೆ ಒತ್ತಾಯಿಸಲಾಗಿದೆ. ಗಾಯಗೊಂಡವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ರಾಜ್ಯ ಸಚಿವ ಕೀರ್ತಿ ವರ್ಧನ್‌ ಸಿಂಗ್‌ ಅವರು ಕುವೈತ್ ತಲುಪಿ, ಪರಿಸ್ಥಿತಿಯನ್ನು ಪರಿಶೀಲಿಸುತ್ತಾರೆ,ʼ ಎಂದು ಹೇಳಿದರು.

ಪ್ರಧಾನಿ ಅವರಿಂದ ಪರಿಹಾರ ಘೋಷಣೆ: ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಕೇರಳ ಸರ್ಕಾರ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ಘೋಷಿಸಿದೆ. ಮೃತರ ಕುಟುಂಬಕ್ಕೆ ಕೇರಳದ ಉದ್ಯಮಿಗಳಾದ ಎಂ.ಎ. ಯೂಸುಫ್ ಅಲಿ 5 ಲಕ್ಷ ರೂ. ಮತ್ತು ರವಿ ಪಿಳ್ಳೈ ಅವರು 2 ಲಕ್ಷ ರೂ. ನೀಡುವುದಾಗಿ ವಾಗ್ದಾನ ಮಾಡಿದ್ದಾರೆ.

Read More
Next Story