Kunal Kamra: ಕುನಾಲ್ ಕಾಮ್ರಾಗೆ ಮದ್ರಾಸ್​ ಹೈಕೋರ್ಟ್​ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು
x

Kunal Kamra: ಕುನಾಲ್ ಕಾಮ್ರಾಗೆ ಮದ್ರಾಸ್​ ಹೈಕೋರ್ಟ್​ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು

ವಿಡಿಯೊ ವೈರಲ್ ಆದ ನಂತರ, ಶಿವಸೇನೆ (ಶಿಂದೆ ಬಣ) ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪ್ರದರ್ಶನ ನಡೆದ ಸ್ಟುಡಿಯೋವನ್ನು ಧ್ವಂಸಗೊಳಿಸಿದ್ದರು.


ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರನ್ನು "ಗದ್ದಾರ್​​' (ದ್ರೋಹಿ) ಎಂದು ಕರೆದ ಪ್ರಕರಣದಲ್ಲಿ ಸ್ಟಾಂಡ್​ಅಪ್​ ಕಾಮಿಡಿಯನ್ ಕುನಾಲ್ ಕಾಮ್ರಾಗೆ ಮದ್ರಾಸ್ ಹೈಕೋರ್ಟ್‌ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ ಮುಂಬೈನಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಕಾಮ್ರಾ ಅವರು ಮಾರ್ಚ್ 27, 2025ರಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಟ್ರಾನ್ಸಿಟ್ ಆಂಟಿಸಿಪೇಟರಿ ಬೇಲ್‌ಗಾಗಿ ಅರ್ಜಿ ಸಲ್ಲಿಸಿದ್ದರು. ತಮಿಳುನಾಡಿನ ವಿಲ್ಲುಪುರಂನ ನಿವಾಸಿಯಾಗಿರುವ ಕಾಮ್ರಾ, ತಮ್ಮ ಸ್ವಂತ ರಾಜ್ಯದಲ್ಲಿ ಈ ರೀತಿಯ ಜಾಮೀನು ಕೋರಿದ್ದ.

ಕುನಾಲ್ ಕಾಮ್ರಾ ಅವರು ತಮ್ಮ ಇತ್ತೀಚಿನ ಸ್ಟ್ಯಾಂಡ್-ಅಪ್ ಕಾಮಿಡಿ ಶೋ "ನಯಾ ಭಾರತ್" ನಲ್ಲಿ 1997 ರ ಬಾಲಿವುಡ್ ಚಿತ್ರ "ದಿಲ್ ತೋ ಪಾಗಲ್ ಹೈ" ಜನಪ್ರಿಯ ಹಾಡಿನ ರಾಗದ ರೂಪದಲ್ಲಿ ಏಕನಾಥ್ ಶಿಂದೆ ಅವರನ್ನು "ಗದ್ದಾರ್​" ಎಂದು ಹಾಸ್ಯ ಮಾಡಿದ್ದರು. ಈ ಪ್ರದರ್ಶನವು ಫೆಬ್ರವರಿ 2, 2025 ರಂದು ಮುಂಬೈನ ಖಾರ್‌ನಲ್ಲಿರುವ ಹ್ಯಾಬಿಟಾಟ್ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿತ್ತು ಮತ್ತು ಮಾರ್ಚ್ 23ರಂದು ಯೂಟ್ಯೂಬ್‌ನಲ್ಲಿ ಪ್ರಸಾರವಾಗಿತ್ತು.

ಈ ವಿಡಿಯೊ ವೈರಲ್ ಆದ ನಂತರ, ಶಿವಸೇನೆ (ಶಿಂದೆ ಬಣ) ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪ್ರದರ್ಶನ ನಡೆದ ಸ್ಟುಡಿಯೋವನ್ನು ಧ್ವಂಸಗೊಳಿಸಿದ್ದರು. ಶಿವಸೇನೆ ಶಾಸಕ ಮುರ್ಜಿ ಪಟೇಲ್ ಅವರ ದೂರಿನ ಆಧಾರದ ಮೇಲೆ ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ಕಾಮ್ರಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 353(1)(b), 353(2) (ಸಾರ್ವಜನಿಕ ತೊಂದರೆ) ಮತ್ತು 356(2) (ಮಾನಹಾನಿ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದರ ಜೊತೆಗೆ, ದೊಂಬಿವಲಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.

ಕಾನೂನು ಕ್ರಮ ಶುರು

ಮುಂಬೈ ಪೊಲೀಸರು ಕಾಮ್ರಾಗೆ ಎರಡು ಸಮನ್ಸ್‌ಗಳನ್ನು ಜಾರಿ ಮಾಡಿದ್ದು, ಮಾರ್ಚ್ 31 ರ ಮೊದಲು ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ಕಾಮ್ರಾ ಅವರು ತಮಗೆ ಒಂದು ವಾರದ ಅವಧಿ ನೀಡುವಂತೆ ಕೋರಿದ್ದರು, ಆದರೆ ಪೊಲೀಸರು ಈ ವಿನಂತಿಯನ್ನು ತಿರಸ್ಕರಿಸಿದ್ದಾರೆ. ಈ ಮಧ್ಯೆ, ಶಿವಸೇನೆ ಕಾರ್ಯಕರ್ತರಿಂದ 500 ಕ್ಕೂ ಹೆಚ್ಚು ಜೀವ ಬೆದರಿಕೆ ಕರೆಗಳು ಬಂದಿವೆ ಎಂದು ಕಾಮ್ರಾ ಹೇಳಿಕೊಂಡಿದ್ದಾರೆ.

ತಮ್ಮ ವಕೀಲರ ಮೂಲಕ ಮದ್ರಾಸ್ ಹೈಕೋರ್ಟ್‌ಗೆ ತೆರಳಿದ್ದ ಅವರು, ಮುಂಬೈಗೆ ಮರಳಿದರೆ ಬಂಧನಕ್ಕೊಳಗಾಗುವ ಭೀತಿಯಿದೆ ಎಂದು ಹೇಳಿದ್ದಾರೆ. ಮಾರ್ಚ್ 28, 2025ರಂದು ನ್ಯಾಯಮೂರ್ತಿ ಸುಂದರ್ ಮೋಹನ್ ಅವರ ಮುಂದೆ ತುರ್ತು ವಿಚಾರಣೆಗೆ ಪ್ರಕರಣವನ್ನು ಪಟ್ಟಿ ಮಾಡಲಾಗಿದ್ದು ಅವರಿಗೆ ಜಾಮೀನು ಮಂಜೂರಾಗಿದೆ.

ಕ್ಷಮೆಗೆ ಒಪ್ಪದ ಕಾಮ್ರಾ

ಕಾಮ್ರಾ ಅವರು ತಮ್ಮ ಹಾಸ್ಯಕ್ಕೆ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ. "ನಾನು ಕ್ಷಮೆ ಕೇಳುವುದಿಲ್ಲ. ನಾನು ಶಿಂಧೆ ಗುಂಪಿಗೆ ಭಯಪಡುವುದಿಲ್ಲ ಮತ್ತು ಈ ವಿವಾದ ಕಡಿಮೆಯಾಗುವವರೆಗೆ ಅಡಗಿ ಕೂರುವುದಿಲ್ಲ" ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಅವರು ತಮ್ಮ ವಾಕ್​ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಒತ್ತಿ ಹೇಳಿದ್ದಾರೆ, "ನಮ್ಮ ರಾಜಕೀಯ ವ್ಯವಸ್ಥೆಯನ್ನು ಗೇಲಿ ಮಾಡುವುದು ಕಾನೂನು ವಿರುದ್ಧವಲ್ಲ" ಎಂದು ವಾದಿಸಿದ್ದಾರೆ.

ರಾಜಕೀಯ ಜಗಳ

ಈ ವಿವಾದವು ಮಹಾರಾಷ್ಟ್ರದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಶಿವಸೇನೆ (ಶಿಂದೆ ಬಣ) ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕಾಮ್ರಾ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಶಿಂದೆ ಅವರು, "ನಾವು ವ್ಯಂಗ್ಯವನ್ನು ಅರ್ಥಮಾಡಿಕೊಳ್ಳುತ್ತೇವೆ. ಆದರೆ ಒಂದು ಮಿತಿ ಇರಬೇಕು. ಇದು ಯಾರ ವಿರುದ್ಧವಾದರೂ ಮಾತನಾಡಲು ಸುಪಾರಿ ತೆಗೆದುಕೊಂಡಂತಿದೆ" ಎಂದು ಹೇಳಿದ್ದಾರೆ. ಸಿಎಂ ಫಡ್ನವೀಸ್ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. ಆದರೆ, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಕಾಮ್ರಾ ಅವರನ್ನು ಸಮರ್ಥಿಸಿದ್ದಾರೆ, "ಕುನಾಲ್ ಕಾಮ್ರಾ ತಪ್ಪು ಮಾಡಿಲ್ಲ. ಮೋಸಗಾರ ಯಾವತ್ತೂ ಮೋಸಗಾರ ಎಂದು ಹೇಳಿದ್ದಾರೆ.

Read More
Next Story