Kumbh Mela Stampede: ಮಹಾಕುಂಭ ದುರಂತಕ್ಕೆ ಕಾರಣವೇನು? ಪ್ರತ್ಯಕ್ಷದರ್ಶಿಗಳು ಹೇಳುವುದೇನು?
x
ಮಹಾಕುಂಭ ಮೇಳ

Kumbh Mela Stampede: ಮಹಾಕುಂಭ ದುರಂತಕ್ಕೆ ಕಾರಣವೇನು? ಪ್ರತ್ಯಕ್ಷದರ್ಶಿಗಳು ಹೇಳುವುದೇನು?

Kumbh Mela Stampede: ಕಾಲ್ತುಳಿತದ ಕುರಿತು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪುಣ್ಯಸ್ನಾನ ಮಾಡಿದವರು ಮತ್ತೆ ವಾಪಸ್‌ ಹೋಗಲು ವ್ಯವಸ್ಥೆ ಮಾಡದಿರುವುದೇ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.


ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದ ವೇಳೆ ಭಾರಿ ಕಾಲ್ತುಳಿತ (Kumbh Mela Stampede) ಉಂಟಾಗಿದ್ದು, ಕನಿಷ್ಠ 10 ಯಾತ್ರಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಲವರು ಗಾಯಗೊಂಡಿದ್ದು ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಕರ್ನಾಟಕದವರೂ ಇದ್ದಾರೆ.

ಮೌನಿ ಅಮಾವಾಸ್ಯೆಯ ಪವಿತ್ರ ದಿನದಂದೇ ದುರ್ಘಟನೆ ಸಂಭವಿಸಿದ್ದು ಆತಂಕ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ, ಕಾಲ್ತುಳಿತದ ಕುರಿತು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪುಣ್ಯಸ್ನಾನ ಮಾಡಿದವರು ಮತ್ತೆ ವಾಪಸ್‌ ಹೋಗಲು ವ್ಯವಸ್ಥೆ ಮಾಡದಿರುವುದೇ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

“ ಸಂಗಮ ಸ್ಥಳದಲ್ಲಿ ಒಂದೇ ರಾತ್ರಿಯಲ್ಲಿ ಕೋಟ್ಯಂತರ ಜನ ಸೇರಿದ್ದರು. ಆದರೆ, ಜನದಟ್ಟಣೆ ನಿಯಂತ್ರಿಸಲು ಹೆಚ್ಚಿನ ಪೊಲೀಸರು ಇರಲಿಲ್ಲ. ಹಾಗೆಯೇ, ಪುಣ್ಯಸ್ನಾನ ಮಾಡಿದವರು ತ್ರಿವೇಣಿ ಸಂಗಮದಿಂದ ಮರಳಲು ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಸರಿಯಾದ ಸುರಕ್ಷತೆ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಜನಜಂಗುಳಿ ಉಂಟಾಗಿ, ಕಾಲ್ತುಳಿತ ಸಂಭವಿಸಿತು” ಎಂದು ಪ್ರತ್ಯಕ್ಷದರ್ಶಿ ವಿನಯ್ ಕುಮಾರ್ ಎಂಬುವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಾಲ್ತುಳಿತದಲ್ಲಿ ತಮ್ಮ ಪತ್ನಿಯನ್ನು ಕಳೆದುಕೊಂಡವರೊಬ್ಬರು ಕೂಡ ಮಾಧ್ಯಮದವರೊಂದಿಗೆ ತಮ್ಮ ನೋವು ನೋಡಿಕೊಂಡಿದ್ದಾರೆ, “ಮಧ್ಯರಾತ್ರಿ 12.30ರ ಸುಮಾರಿಗೆ ನಾವು ಪುಣ್ಯಸ್ನಾನ ಮುಗಿಸಿಕೊಂಡು ವಾಪಸ್‌ ಬರುತ್ತಿದ್ದೆವು . ಆಗಲೇ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಏಕಾಏಕಿ ಗೇಟ್‌ಗಳನ್ನು ತೆರೆದುಕೊಂಡವು ಆಗ ಲಕ್ಷಾಂತರ ಜನ ತ್ರಿವೇಣಿ ಸಂಗಮದತ್ತ ನುಗ್ಗಿದರು. ಇದರಿಂದಾಗಿ ಕಾಲ್ತುಳಿತ ಸಂಭವಿಸಿತು. ಕಾಲ್ತುಳಿತದಲ್ಲಿ ನನ್ನ ಹೆಂಡತಿ ತೀರಿಕೊಂಡಳು” ಎಂದು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.

ಬೆಳಗಾವಿಯ ಸರೋಜಿನಿ ಎಂಬುವರು ದುರಂತದ ಬಗ್ಗೆ ಮಾಹಿತಿ ನೀಡಿದ್ದಾರೆ. “ನಾವು ಕುಟುಂಬದ ಸಮೇತ ಪುಣ್ಯಸ್ನಾನ ಮಾಡಲು ತೆರಳಿದ್ದೆವು. ಈ ವೇಳೆ ನೂಕುನುಗ್ಗಲು ಉಂಟಾಯಿತು. ಜನಸಂದಣಿ ನಡುವೆ ನಾವು ಸಿಲುಕಿಕೊಂಡೆವು. ಎಷ್ಟೇ ಪ್ರಯತ್ನ ಮಾಡಿದರೂ ಹೊರಬರಲು ಆಗಲಿಲ್ಲ. ಕಾಲ್ತುಳಿತ ಉಂಟಾಗಿ ಹಲವರು ಮೃತಪಟ್ಟರು” ಎಂದು ತಿಳಿಸಿದ್ದಾರೆ.

Read More
Next Story