ವೈಜಾಗ್ ಸ್ಟೀಲ್ ಪುನಚ್ಚೇತನ; ವಿತ್ತ ಸಚಿವೆ, ಆಂಧ್ರ ಸಿಎಂ ಜೊತೆ ಕುಮಾರಸ್ವಾಮಿ ಚರ್ಚೆ
ನವದೆಹಲಿಯ ನಾರ್ಥ್ ಬ್ಲಾಕ್ ನಲ್ಲಿರುವ ವಿತ್ತ ಸಚಿವಾಲಯದ ಕಚೇರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ ಆರ್'ಐಎನ್'ಎಲ್ ಉಳಿಸುವ ನಿಟ್ಟಿನಲ್ಲಿ ಕಂಡುಕೊಳ್ಳಬೇಕಾದ ಪರಿಹಾರೋಪಾಯಗಳು, ಮಾರ್ಗಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.
ವಿಶಾಖಪಟ್ಟಣದಲ್ಲಿರುವ ರಾಷ್ಟ್ರೀಯ ಉಕ್ಕು ಕಾರ್ಖಾನೆ - RNIL (ವೈಜಾಗ್ ಸ್ಟೀಲ್) ಯನ್ನು ಪುನರುದ್ಧಾರ ಮಾಡುವ ನಿಟ್ಟಿನಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ತಡರಾತ್ರಿವರೆಗೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಹತ್ವದ ಸಭೆ ನಡೆಸಿದರು.
ನವದೆಹಲಿಯ ನಾರ್ಥ್ ಬ್ಲಾಕ್ ನಲ್ಲಿರುವ ವಿತ್ತ ಸಚಿವಾಲಯದ ಕಚೇರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ ಆರ್'ಐಎನ್'ಎಲ್ ಉಳಿಸುವ ನಿಟ್ಟಿನಲ್ಲಿ ಕಂಡುಕೊಳ್ಳಬೇಕಾದ ಪರಿಹಾರೋಪಾಯಗಳು, ಮಾರ್ಗಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ತಾವು ಖುದ್ದು ಕಾರ್ಖಾನೆಗೆ ಭೇಟಿ ನೀಡಿ ಸಂಗ್ರಹಿಸಿದ್ದ ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊಂಡ ಕುಮಾರಸ್ವಾಮಿ ಅವರು, ಅದರಲ್ಲಿಯೂ ಕಾರ್ಮಿಕರು, ಕಾರ್ಮಿಕ ಸಂಘಟನೆಗಳ ಮುಖಂಡರು, ಆಡಳಿತ ಮಂಡಳಿ, ಸ್ಥಳೀಯ ಜನಪ್ರತಿನಿಧಿಗಳು ನೀಡಿದ್ದ ಮಾಹಿತಿ ಬಗ್ಗೆ ವಿವರಿಸಿದರು.
ಸಭೆಯ ಬಗ್ಗೆ ಮಾಹಿತಿ ನೀಡಿರುವ ಸಚಿವ ಕುಮಾರಸ್ವಾಮಿ ಅವರು; "ವೈಜಾಗ್ ಸ್ಟೀಲ್ ಉಳಿಸುವ ನಿಟ್ಟಿನಲ್ಲಿ ಹಣಕಾಸು ಸಚಿವರು ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಫಲಪ್ರದ ಮಾತುಕತೆ ನಡೆಯಿತು. ಈಗಾಗಲೇ ನಾನು ಕಾರ್ಖಾನೆಗೂ ಭೇಟಿ ನೀಡಿದ್ದ ನಿಮಿತ್ತ ವಿತ್ತ ಸಚಿವರ ಜತೆಯೂ ಚರ್ಚೆ ನಡೆಸಿದ್ದೆ. ಅಲ್ಲದೆ; ಸಚಿವಾಲಯದ ಮಟ್ಟದಲ್ಲಿ ಹಲವಾರು ಸಭೆಗಳನ್ನು ನಡೆಸಲಾಗಿತ್ತು" ಎಂದು ತಿಳಿಸಿದ್ದಾರೆ.
ಈ ಸಭೆಗೆ ಮುನ್ನ ಮಂಗಳವಾರ ಮಧ್ಯಾಹ್ನವೇ ನವದೆಹಲಿಯಲ್ಲಿ ಕೇಂದ್ರ ಸಚಿವರು ಈ ಬಗ್ಗೆ ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚೆ ನಡೆಸಿದ್ದರು.