Kolkata rape-murder: ಸಿಬಿಐಗೆ ಮಾಹಿತಿ ನೀಡಿದ ಪೋಷಕರು
x

Kolkata rape-murder: ಸಿಬಿಐಗೆ ಮಾಹಿತಿ ನೀಡಿದ ಪೋಷಕರು

ಮಗಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಹಿಂದೆ ಅನೇಕ ಜನರ ಕೈವಾಡವಿದೆ ಎಂದು ಮೃತಳ ಪೋಷಕರು ಶಂಕಿಸಿದ್ದಾರೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಕೋಲ್ಕತ್ತಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆಸ್ಪತ್ರೆಯ ಇಂಟರ್ನಿಗಳು ಮತ್ತು ವೈದ್ಯರು ಭಾಗಿಯಾಗಿರಬಹುದು ಎಂದು ಆಕೆಯ ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.

ʻತಮ್ಮ ಮಗಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಹಿಂದೆ ಅನೇಕ ಜನರ ಪಾಲ್ಗೊಳ್ಳುವಿಕೆ ಇರಬಹುದು ಎಂದು ಪೋಷಕರು ತಿಳಿಸಿ ದ್ದಾರೆ. ಆಕೆಯೊಂದಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಕೆಲವು ಇಂಟರ್ನಿಗಳು ಮತ್ತು ವೈದ್ಯರ ಹೆಸರನ್ನು ನೀಡಿದ್ದಾರೆ,ʼ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಂಕಿತರ ಪ್ರಶ್ನೆ: ಸಿಬಿಐ ಈ ವ್ಯಕ್ತಿಗಳು ಹಾಗೂ ಆರಂಭದಲ್ಲಿ ತನಿಖೆಯ ಭಾಗವಾಗಿದ್ದ ಕೋಲ್ಕತ್ತಾ ಪೊಲೀಸ್ ಅಧಿಕಾರಿಗಳ‌ ವಿಚಾರಣೆ ಆರಂಭಿಸಿದೆ. ʻನಾವು ಕನಿಷ್ಠ 30 ಶಂಕಿತರನ್ನು ಗುರುತಿಸಿದ್ದೇವೆ ಮತ್ತು ಅವರನ್ನು ಪ್ರಶ್ನಿಸಲು ಪ್ರಾರಂಭಿಸಿದ್ದೇವೆ,ʼ ಎಂದು ಸಿಬಿಐ ಅಧಿಕಾರಿ ಹೇಳಿದರು.

ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಹಾಗೂ ಕೊಲೆಯಾದ ರಾತ್ರಿ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ಮತ್ತು ಇಬ್ಬರು ಸ್ನಾತಕೋತ್ತರ ವಿದ್ಯಾರ್ಥಿಗಳ ವಿಚಾರಣೆ ನಡೆಸಿದೆ.

ವೈದ್ಯೆಯ ಶವ ಪತ್ತೆಯಾದ ಒಂದೆರಡು ದಿನಗಳ ನಂತರ ಡಾ. ಘೋಷ್ ರಾಜೀನಾಮೆ ನೀಡಿದರು. ತನ್ನ ಮೇಲೆ ದಾಳಿ ನಡೆಯಬಹುದೆಂಬ ಆತಂಕ ವ್ಯಕ್ತಪಡಿಸಿ, ಕಲ್ಕತ್ತಾ ಹೈಕೋರ್ಟ್‌ನಿಂದ ರಕ್ಷಣೆ ಕೋರಿದರು. ಹೈಕೋರ್ಟ್‌ ಏಕ ಪೀಠವನ್ನು ಸಂಪರ್ಕಿಸಲು ಸೂಚಿಸಿತ್ತು.

ಸಿಬಿಐ 3ಡಿ ವಿಧಾನ ಬಳಸಿ ಅಪರಾಧದ ಸ್ಥಳದ ಪುನರ್ನಿರ್ಮಾಣ ಮಾಡಿ, ಪ್ರಮುಖ ಆರೋಪಿ ಪಾಲ್ಗೊಳ್ಳುವಂತೆ ಮಾಡಿದೆ ಎಂದು ಅಧಿಕಾರಿ ಹೇಳಿದರು.

ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ: ಪ್ರತಿಪಕ್ಷ ಸಿಪಿಐ(ಎಂ) ಮತ್ತು ಬಿಜೆಪಿ, ಆರ್‌.ಜಿ. ಕರ್ ಆಸ್ಪತ್ರೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಿವೆ ಮತ್ತು ಮಹಿಳಾ ವೈದ್ಯೆ ಅತ್ಯಾಚಾರ-ಕೊಲೆ ಹಿಂದಿನ ಸತ್ಯವನ್ನು ತಿರುಚಲು ಪ್ರಯತ್ನಿಸುತ್ತಿವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಆರೋಪಿಸಿದ್ದಾರೆ. ʻನಾವು ಸತ್ಯ ಹೊರಬರಬೇಕೆಂದು ಬಯಸುತ್ತೇವೆ. ಆದರೆ, ಕೆಲವರು ಜನರನ್ನು ದಾರಿ ತಪ್ಪಿಸಲು ಸುಳ್ಳುಗಳನ್ನು ಹರಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಬಯಸುತ್ತೇವೆ,ʼ ಎಂದು ಅವರು ಮೆರವಣಿಗೆಯಲ್ಲಿ ಹೇಳಿದರು.

ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಮಹಿಳೆಯರ ವಿರುದ್ಧದ ಅಪರಾಧಗಳ ಬಗ್ಗೆ ಮಾತನಾಡುವ ಇಂಡಿಯಾ ಒಕ್ಕೂಟದ ನಾಯಕರು ರಾಜಕೀಯ ರಣಹದ್ದುಗಳು ಎಂದು ಕರೆದಿದ್ದಾರೆ.

Read More
Next Story