Kolkata rape-murder: ಆ.17 ರಂದು ರಾಷ್ಟ್ರವ್ಯಾಪಿ ವೈದ್ಯರ ಸೇವೆ  ಸ್ಥಗಿತ
x

Kolkata rape-murder: ಆ.17 ರಂದು ರಾಷ್ಟ್ರವ್ಯಾಪಿ ವೈದ್ಯರ ಸೇವೆ ಸ್ಥಗಿತ


ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌.ಜಿ. ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆ ಅತ್ಯಾಚಾರ ಮತ್ತು ಹತ್ಯೆಯನ್ನು ಪ್ರತಿಭಟಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) 24 ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರ ಘೋಷಿಸಿದೆ.

ಆಗಸ್ಟ್ 17 ರಂದು ಬೆಳಗ್ಗೆ 6 ರಿಂದ ತುರ್ತು ರಹಿತ ಸೇವೆಗಳು ಸ್ಥಗಿತಗೊಳ್ಳಲಿವೆ. ಅಗತ್ಯ ಸೇವೆ ಮತ್ತು ಅಪಘಾತ ವಿಭಾಗ ಕಾರ್ಯನಿರ್ವಹಿಸ ಲಿದೆ ಎಂದು ವೈದ್ಯಕೀಯ ಸಂಸ್ಥೆ ಗುರುವಾರ ತಡರಾತ್ರಿ (ಆಗಸ್ಟ್ 15) ತಿಳಿಸಿದೆ. ಹೊರರೋಗಿ ವಿಭಾಗ(ಒಪಿಡಿ) ಕಾರ್ಯನಿರ್ವಹಿಸುವುದಿಲ್ಲ ಮತ್ತು ಶಸ್ತ್ರಚಿಕಿತ್ಸೆಗಳು ನಡೆಯುವುದಿಲ್ಲ ಎಂದು ಐಎಂಎ ಹೇಳಿದೆ.

ಆರ್‌.ಜಿ.ಕರ್ ಆಸ್ಪತ್ರೆ- ಕಾಲೇಜಿನಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ಹಿನ್ನೆಲೆಯಲ್ಲಿ ಶನಿವಾರ(17.8.2024) ಬೆಳಗ್ಗೆ 6 ಯಿಂದ ಭಾನುವಾರ ಬೆಳಗ್ಗೆ6 ಗಂಟೆವರೆಗೆ 24 ಗಂಟೆ ಕಾಲ ಸೇವೆ ಸ್ಥಗಿತಗೊಳ್ಳಲಿದೆ ಎಂದು ಹೇಳಿಕೆ ತಿಳಿಸಿದೆ.

ʻವೈದ್ಯರು, ವಿಶೇಷವಾಗಿ, ವೈದ್ಯೆಯರು ವೃತ್ತಿಯ ಸ್ವರೂಪದಿಂದಾಗಿ ಹಿಂಸೆಗೆ ಗುರಿಯಾಗುತ್ತಾರೆ. ಅಧಿಕಾರಿಗಳು ಆಸ್ಪತ್ರೆ ಮತ್ತು ಕ್ಯಾಂಪಸ್‌ಗಳಲ್ಲಿ ವೈದ್ಯರಿಗೆ ರಕ್ಷಣೆ ಒದಗಿಸಬೇಕು. ದೈಹಿಕ ಹಲ್ಲೆ ಮತ್ತು ಅಪರಾಧಗಳು ಅಧಿಕಾರಿಗಳ ಅಸಡ್ಡೆ ಮತ್ತು ಅಸೂಕ್ಷ್ಮತೆಯ ಪರಿಣಾಮ,ʼ ಎಂದು ಐಎಂಎ ಹೇಳಿದೆ. ಐಎಂಐ ರಾಜ್ಯ ಶಾಖೆಗಳೊಂದಿಗಿನ ಸಭೆ ನಂತರ ತುರ್ತು ವೈದ್ಯಕೀಯ ಸೇವೆಗಳನ್ನು ರಾಷ್ಟ್ರವ್ಯಾಪಿ ಹಿಂತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ʻಸಿಬಿಐ ತನಿಖೆ ನಡೆಯುತ್ತಿರುವಾಗಲೂ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಈ ವಿಧ್ವಂಸಕತೆಯು ಅರಾಜಕತೆ ಮತ್ತು ಕಾನೂನು-ಸುವ್ಯವಸ್ಥೆಯ ಹದಗೆಡುವಿಕೆಯನ್ನು ಸೂಚಿಸುತ್ತದೆ. ಐಎಂಎ ಇಂಥ ಬುದ್ದಿಹೀನ ಹಿಂಸಾಚಾರವನ್ನು ಖಂಡಿಸುತ್ತದೆ,ʼ ಎಂದು ಹೇಳಿಕೆ ತಿಳಿಸಿದೆ.

ಕೋಲ್ಕತ್ತಾ ಪೊಲೀಸರ ಪ್ರಕಾರ, ಸುಮಾರು 40 ಜನ ಪ್ರತಿಭಟನಾಕಾರರಂತೆ ಮುಖವಾಡ ಧರಿಸಿ ಆಸ್ಪತ್ರೆ ಆವರಣಕ್ಕೆ ಪ್ರವೇಶಿಸಿ, ಆಸ್ತಿಯನ್ನು ಧ್ವಂಸಗೊಳಿಸಿದರು ಮತ್ತು ಪೊಲೀಸರ ಮೇಲೆ ಕಲ್ಲು ತೂರಿದರು. ಈ ಪ್ರದೇಶದ ಮತ್ತು ಸುತ್ತಮುತ್ತಲಿನ ಹಲವು ಸಿಸಿಟಿವಿ ಕ್ಯಾಮೆರಾಗಳನ್ನು ಸಹ ನಾಶಪಡಿಸಲಾಗಿದೆ.

Read More
Next Story