Kolkata rape-murder: ಆ. 18 ರೊಳಗೆ ಪ್ರಕರಣ ಪರಿಹರಿಸಲು ಸಿಬಿಐಗೆ ಮಮತಾ ಬ್ಯಾನರ್ಜಿ ಸೂಚನೆ
x

Kolkata rape-murder: ಆ. 18 ರೊಳಗೆ ಪ್ರಕರಣ ಪರಿಹರಿಸಲು ಸಿಬಿಐಗೆ ಮಮತಾ ಬ್ಯಾನರ್ಜಿ ಸೂಚನೆ

"ಭಾನುವಾರದೊಳಗೆ ಪ್ರಕರಣವನ್ನು ಬಗೆಹರಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ" ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಹೇಳಿದ್ದಾರೆ.


ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಪ್ರಶಿಕ್ಷಣಾರ್ಥಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬುಧವಾರ (ಆಗಸ್ಟ್ 14) ತನಿಖೆಯನ್ನು ಪ್ರಾರಂಭಿಸಿದೆ. ತನಿಖೆಯನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನಿಖೆಯನ್ನು ಬೆಂಬಲಿಸಿದರು ಮತ್ತು ಪ್ರತಿಪಕ್ಷಗಳು ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಅಶಾಂತಿಯಿಂದ ಅವಾಮಿ ಲೀಗ್ ಸರ್ಕಾರ ಪತನವಾಯಿತು. ಅದೇ ರೀತಿಯಲ್ಲಿ ಸಿಪಿಐ(ಎಂ) ಮತ್ತು ಬಿಜೆಪಿ ಪ್ರತಿಭಟನೆಗಳ ಮೂಲಕ ಅಧಿಕಾರವನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ತನಿಖೆ ಆರಂಭಿಸಿದ 25 ಸದಸ್ಯರ ಸಿಬಿಐ ತಂಡ

ಕಲ್ಕತ್ತಾ ಹೈಕೋರ್ಟ್‌ನ ಆದೇಶದ ಮೇರೆಗೆ ಹೆಚ್ಚುವರಿ ನಿರ್ದೇಶಕರ ನೇತೃತ್ವದಲ್ಲಿ ವೈದ್ಯಕೀಯ ಮತ್ತು ವಿಧಿವಿಜ್ಞಾನ ತಜ್ಞರ ಜೊತೆಗೂಡಿ 25 ಸದಸ್ಯರ ಸಿಬಿಐ ತಂಡವು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದೆ. ಈ ಪ್ರಕರಣವು ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆಯನ್ನು ಹುಟ್ಟುಹಾಕಿದೆ. ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್ 9 ರಂದು ತರಬೇತಿ ವೈದ್ಯರ ಶವ ಪತ್ತೆಯಾಗಿತ್ತು.

ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ನಂತರ, ಕೋಲ್ಕತ್ತಾ ಪೊಲೀಸರು ಪ್ರಮುಖ ಶಂಕಿತ ಸಂಜಯ್ ರಾಯ್‌ನನ್ನು ಕೋಲ್ಕತ್ತಾದ ಸಿಜಿಒ ಕಾಂಪ್ಲೆಕ್ಸ್‌ನಲ್ಲಿ ಸಿಬಿಐಗೆ ಹಸ್ತಾಂತರಿಸಿದರು.

ಈ ಮಧ್ಯೆ ಘಟನೆ ಖಂಡಿಸಿ ಎಲ್ಲಾ ವರ್ಗಗಳ ಸಾವಿರಾರು ಮಹಿಳೆಯರು ಬುಧವಾರ ಮಧ್ಯರಾತ್ರಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.

ರಾಹುಲ್ ಗಾಂಧಿ ಹೇಳಿಕೆಗೆ ಟಿಎಂಸಿ ಆಕ್ರೋಶ

ಸಾರ್ವಜನಿಕರ ಆಕ್ರೋಶದ ನಡುವೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಂತ್ರಸ್ತೆಗೆ ನ್ಯಾಯ ಒದಗಿಸುವ ಬದಲು ಆರೋಪಿಗಳನ್ನು ರಕ್ಷಿಸುವ ಪ್ರಯತ್ನವು ಆಸ್ಪತ್ರೆ ಮತ್ತು ಸ್ಥಳೀಯ ಆಡಳಿತದ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಿದರು.

ರಾಹುಲ್‌ ಹೇಳಿಕೆಯಿಂದ ಟಿಎಂಸಿ ಕೋಪಗೊಂಡಿದೆ. ರಾಷ್ಟ್ರರಾಜಕಾರಣದಲ್ಲಿ ವಿರೋಧ ಪಕ್ಷದ ಒಕ್ಕೂಟವಾದ ಇಂಡಿಯಾ ಮೈತ್ರಿಕೂಟದಲ್ಲಿ ಟಿಎಂಸಿ-ಕಾಮಗ್ರೆಸ್‌ ಮಿತ್ರ ಪಕ್ಷಗಳು

ʻʻತಮ್ಮ ಸಹೋದ್ಯೋಗಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ರಾಜ್ಯದಲ್ಲಿ ಆರೋಗ್ಯ ಸೇವೆಗಳು ಸತತ ಆರನೇ ದಿನವೂ ಸ್ಥಗಿತಗೊಂಡಿವೆ. ಹೆಚ್ಚಿನ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಮತ್ತು ಹೊರರೋಗಿ ವಿಭಾಗಗಳು ಇನ್ನೂ ಮುಚ್ಚಲ್ಪಟ್ಟಿವೆ, ಇದು ರೋಗಿಗಳಿಗೆ ತೊಂದರೆಯನ್ನುಂಟು ಮಾಡಿದೆ.

ಆ.18ರೊಳಗೆ ಪ್ರಕರಣ ಬಗೆಹರಿಸುವಂತೆ ಸಿಬಿಐಗೆ ಮಮತಾ ಒತ್ತಾಯ

ಬೆಹಾಲಾದಲ್ಲಿ ಪಕ್ಷದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ ಅವರು, ʻʻನಾವು ಕಲ್ಕತ್ತಾ ಹೈಕೋರ್ಟ್‌ನ ಆದೇಶವನ್ನು ಪಾಲಿಸುತ್ತೇವೆ ಮತ್ತು ಸಿಬಿಐಗೆ ಎಲ್ಲಾ ಬೆಂಬಲವನ್ನು ನೀಡುತ್ತೇವೆ. ಪ್ರಕರಣವನ್ನು ಸಿಬಿಐಗೆ ವಹಿಸುವುದರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ, ಆದ್ದರಿಂದ ಸಾಧ್ಯವಾದಷ್ಟು ಬೇಗ ಅದನ್ನು ಪರಿಹರಿಸಬೇಕೆಂದು ನಾವು ಬಯಸುತ್ತೇವೆʼʼ ಎಂದು ಹೇಳಿದರು.

ಶೀಘ್ರ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿರುವ ಸಿಎಂ, ಭಾನುವಾರದೊಳಗೆ (ಆ.18) ಪ್ರಕರಣವನ್ನು ಸಿಬಿಐ ಬಗೆಹರಿಸುವಂತೆ ಒತ್ತಾಯಿಸಿದರು.

ಕೋಲ್ಕತ್ತಾ ಪೊಲೀಸರು ಈಗಾಗಲೇ "90 ಪ್ರತಿಶತ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಆರೋಪಿಯನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದರು.

ಸಿಪಿಐ(ಎಂ), ಬಿಜೆಪಿ ಅಶಾಂತಿಯನ್ನು ಪ್ರಚೋದಿಸುತ್ತಿದೆ: ಮಮತಾ ಟೀಕೆ

ಪ್ರತಿಭಟನೆಗಳ ಬಗ್ಗೆ ಹತಾಶೆ ವ್ಯಕ್ತಪಡಿಸಿದ ಮಮತಾ ಅವರು, ʻʻಸಿಪಿಐ(ಎಂ) ಮತ್ತು ಬಿಜೆಪಿ ಅಶಾಂತಿಯನ್ನು ಪ್ರಚೋದಿಸುತ್ತಿದ್ದಾರೆʼʼ ಎಂದು ಟೀಕಿಸಿದರು.

ʻʻಬಂಗಾಳವನ್ನು ದೂಷಿಸಲು ಮತ್ತು ಪರಿಸ್ಥಿತಿಯನ್ನು ಬಳಸಿಕೊಳ್ಳಲು ಕೇಂದ್ರದ ಬೆಂಬಲದೊಂದಿಗೆ ಬಿಜೆಪಿ ಮತ್ತು ಸಿಪಿಐ(ಎಂ) ಸಂಘಟಿತ ವಿಧಾನವನ್ನು ಕಾರ್ಯಗತಗೊಳಿಸಿದೆʼʼ ಎಂದು ಬ್ಯಾನರ್ಜಿ ಹೇಳಿದರು.

ʻʻಅವರು ಬಾಂಗ್ಲಾದೇಶವನ್ನು ಅನುಸರಿಸುತ್ತಿದ್ದಾರೆ. ಅದೇ ರೀತಿ ಅಧಿಕಾರವನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಯಶಸ್ವಿಯಾಗುವುದಿಲ್ಲʼʼ ಎಂದು ಗುಡುಗಿದರು.

ʻʻನಾನು ಶುಕ್ರವಾರ ಬೀದಿಗಿಳಿದು ಪ್ರತಿಭಟಿಸುತ್ತೇನೆ. ರವಿವಾರದೊಳಗೆ ಪ್ರಕರಣವನ್ನು ಬಗೆಹರಿಸಬೇಕು ಎಂದು ಸಿಬಿಐಗೆ ನಾವು ಒತ್ತಾಯಿಸುತ್ತೇವೆʼʼ ಎಂದು ಅವರು ಪುನರುಚ್ಚರಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿರುವುದಾಗಿ ಸಿಬಿಐ ವರದಿ ಮಾಡಿದೆ ಮತ್ತು ಪ್ರಕರಣವು ಇತ್ಯರ್ಥವಾಗುವವರೆಗೆ ಸಿಬಿಐ ತಂಡ ಕೋಲ್ಕತ್ತಾದಲ್ಲಿ ಮೊಕ್ಕಾಂ ಹೂಡಲಿದೆ.

ವೈದ್ಯರು ಕೆಲಸಕ್ಕೆ ಮರಳುವಂತೆ ಸಿಎಂ ಮನವಿ

ಮುಷ್ಕರ ನಿರತ ವೈದ್ಯರಿಗೆ ಕೆಲಸಕ್ಕೆ ಮರಳುವಂತೆ ಬ್ಯಾನರ್ಜಿ ಅವರು ಮನವಿ ಮಾಡಿದರು, ರಾಜ್ಯದಾದ್ಯಂತ ಆರೋಗ್ಯ ಸೇವೆಗಳ ಮೇಲೆ ತೀವ್ರ ಪರಿಣಾಮ ಬೀರಿರುವುದನ್ನು ಎತ್ತಿ ತೋರಿಸಿದರು.

ಕರ್ತವ್ಯಕ್ಕೆ ಹಿಂತಿರುಗದ ವೈದ್ಯರಿಗೆ ಮತ್ತೆ ಕೆಲಸ ಮಾಡಲು ನಾನು ಒತ್ತಾಯಿಸುತ್ತೇನೆ. ನೀವು ಹಲವಾರು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದೀರಿ, ಮತ್ತು ನಾನು ಹಸ್ತಕ್ಷೇಪ ಮಾಡಿಲ್ಲ. ಆದರೆ ನೀವು ಪ್ರಮಾಣ ವಚನ ಸ್ವೀಕರಿಸಿದಂತೆ ಜನರ ಸೇವೆ ಮಾಡುವ ನಿಮ್ಮ ಕರ್ತವ್ಯವನ್ನು ನೀವು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.

ʻʻಅಪ್ರಾಪ್ತ ವಯಸ್ಕ ಮಹಿಳೆ, ಗರ್ಭಿಣಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ನಾನು ನಿಮ್ಮ ಪಾದಗಳನ್ನು ಮುಟ್ಟಿ ಕರ್ತವ್ಯಕ್ಕೆ ಮರಳುವಂತೆ ಮನವಿ ಮಾಡುತ್ತೇನೆʼʼ ಎಂದು ವೈದ್ಯರಲ್ಲಿ ಸಿಎಂ ಮನವಿ ಮಾಡಿದರು.

ಮುಷ್ಕರದಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗ (OPD) ಕೌಂಟರ್‌ಗಳಲ್ಲಿ ರೋಗಿಗಳು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಖಾಸಗಿ ಆಸ್ಪತ್ರೆಗಳು ಸಹ ತಮ್ಮ ಹೊರರೋಗಿ ವಿಭಾಗಗಳನ್ನು ಮುಚ್ಚಿ ಸರ್ಕಾರಿ ಆಸ್ಪತ್ರೆಗಳಲ್ಲಿ ಧರಣಿ ನಿರತ ಕಿರಿಯ ವೈದ್ಯರಿಗೆ ಬೆಂಬಲ ನೀಡುತ್ತಿದ್ದಾರೆ.

ಕಾಂಗ್ರೆಸ್‌ ಟೀಕೆಗೆ ಮಮತಾ, ಇತರೆ ಟಿಎಂಸಿ ನಾಯಕರ ಪ್ರಶ್ನೆ

ಘಟನೆಯ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, ʻʻವೈದ್ಯಕೀಯ ಕಾಲೇಜಿನಂತಹ ಸ್ಥಳದಲ್ಲಿ ವೈದ್ಯರೇ ಸುರಕ್ಷಿತವಾಗಿಲ್ಲದಿದ್ದರೆ, ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಓದಲು ಹೇಗೆ ಹೊರಗೆ ಕಳುಹಿಸುತ್ತಾರೆ ಎನ್ನುವ ಯೋಚನೆಯನ್ನು ಇದು ಹುಟ್ಟುಹಾಕುತ್ತದೆ. ನಿರ್ಭಯಾ ಪ್ರಕರಣದ ನಂತರ ಮಾಡಿದ ಕಟ್ಟುನಿಟ್ಟಿನ ಕಾನೂನು ಇಂತಹ ಅಪರಾಧಗಳನ್ನು ತಡೆಯುವಲ್ಲಿ ವಿಫಲವಾಗಿದೆಯೇ?ʼʼ ಎಂದು ಪ್ರಶ್ನೆ ಮಾಡಿದ್ದಾರೆ.

ರಾಹುಲ್‌ ಟೀಕೆಗಳಿಗೆ ಟಿಎಂಸಿ ಪ್ರತ್ಯುತ್ತರ ನೀಡಿದ್ದು, ʻʻನಾನು ಕಾಂಗ್ರೆಸ್ ಅನ್ನು ಸಹ ಕೇಳುತ್ತೇನೆ, ವಿವಿಧ ರಾಜ್ಯಗಳಲ್ಲಿ ನಿಮ್ಮ ಸರ್ಕಾರವಿದೆ, ನ್ಯಾಯವನ್ನು ಖಚಿತಪಡಿಸಿಕೊಳ್ಳಲು ನೀವು ಅಲ್ಲಿ ಏನು ಮಾಡಿದ್ದೀರಿ?ʼʼ ಎಂದು ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದಾರೆ.

ಆರೋಪಗಳನ್ನು "ಆಧಾರರಹಿತ" ಎಂದು ಕರೆದ ಟಿಎಂಸಿ ನಾಯಕ ಕುನಾಲ್ ಘೋಷ್, ʻʻಇಂತಹ ಹೇಳಿಕೆಗಳನ್ನು ನೀಡುವ ಮೊದಲು, ಅವರು (ಗಾಂಧಿ) ಸತ್ಯಗಳನ್ನು ಪರಿಶೀಲಿಸಬೇಕು. ಅವರು ರಾಜೀವ್ ಗಾಂಧಿ ಆಡಳಿತ ಮತ್ತು ಕಾಂಗ್ರೆಸ್ ಸರ್ಕಾರಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ನೀರಸ ದಾಖಲೆಯನ್ನು ಮರೆಯಬಾರದುʼʼ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.

Read More
Next Story