Kolkata rape-murder: ನಡ್ಡಾ ಭೇಟಿ ಬಳಿಕ ಮುಷ್ಕರ ಹಿಂಪಡೆದ ಫೋರ್ಡಾ
ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ತಮ್ಮ ಬೇಡಿಕೆಗಳಿಗೆ ಒಪ್ಪಿಕೊಂಡ ನಂತರ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಫೋರ್ಡಾ) ತನ್ನ ಮುಷ್ಕರವನ್ನು ಹಿಂತೆಗೆದುಕೊಂಡಿದೆ. ಆದರೆ, ಕೇಂದ್ರ ಸರ್ಕಾರದ ಅಧೀನದ ಏಮ್ಸ್, ಇಂದಿರಾಗಾಂಧಿ ಆಸ್ಪತ್ರೆ ಮತ್ತು ಅಖಿಲ ಭಾರತ ವೈದ್ಯಕೀಯ ಸಂಘ ಒಕ್ಕೂಟ (ಎಫ್‌ಎಐಎಂಎ) ಸೇರಿದಂತೆ ಇತರ ಸಂಘಗಳ ವೈದ್ಯರು ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ವೈದ್ಯಕೀಯ ಸಿಬ್ಬಂದಿ ಮೇಲಿನ ದಾಳಿ ನಿಗ್ರಹಿಸಲು ಕಾನೂನು ಜಾರಿ ಮತ್ತು ಶಾಶ್ವತ ಪರಿಹಾರಕ್ಕಾಗಿ ಈ ಸಂಘಟನೆಗಳು ಆಗ್ರಹಿಸಿವೆ.
ಫೋರ್ಡಾದ ನಿಯೋಗ ಮಂಗಳವಾರ ರಾತ್ರಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದೆ. ರೋಗಿಗಳ ಹಿತದೃಷ್ಟಿಯಿಂದ ಬುಧವಾರ ಬೆಳಗ್ಗೆಯಿಂದ ಮುಷ್ಕರ ಅಂತ್ಯಗೊಳಿಸಲು ನಿರ್ಧರಿಸಲಾಯಿತು ಎಂದು ಫೋರ್ಡಾ ತಿಳಿಸಿದೆ.
ʻವೈದ್ಯರ ರಕ್ಷಣೆಗೆ ಕೇಂದ್ರದ ಕಾಯಿದೆ ರೂಪಿಸಲು ಫೋರ್ಡಾದ ಪಾಲುದಾರಿಕೆಯ ಸಮಿತಿಯನ್ನು ರಚಿಸಲು ಆರೋಗ್ಯ ಸಚಿವರು ಒಪ್ಪಿಗೆ ನೀಡಿದ್ದಾರೆ. ಮುಂದಿನ 15 ದಿನಗಳಲ್ಲಿ ಇದರ ಕೆಲಸ ಪ್ರಾರಂಭವಾಗಲಿದೆ ಎಂದು ಸಚಿವಾಲಯ ಭರವಸೆ ನೀಡಿದೆ,ʼ ಎಂದು ಫೋರ್ಡಾ ಮಂಗಳವಾರ ತಡರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ʻವೈದ್ಯರು ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಖಾತ್ರಿಪಡಿಸುವ ಗುರಿ ಹೊಂದಿರುವ ಕಾಯಿದೆಯ ಸಮಯೋಚಿತ ಅನುಷ್ಠಾನಕ್ಕೆ ಸಮಿತಿ ಗಮನ ಹರಿಸುತ್ತದೆ. ಫೋರ್ಡಾ ನಿಯೋಗವನ್ನು ರಚಿಸುತ್ತದೆ. ಆರೋಗ್ಯ ಸಚಿವಾಲಯದಿಂದ ಅಧಿಕೃತ ಸೂಚನೆ ಶೀಘ್ರವೇ ನಿರೀಕ್ಷಿಸಲಾಗಿದೆ,ʼ ಎಂದು ಹೇಳಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ)ವು ಮಾದರಿ ಕಾರ್ಯನಿರ್ವಹಣೆ ಉಪಕ್ರಮ (ಎಸ್‌ಒಪಿ)ಗಳ ಮೂಲಕ ಆರೋಗ್ಯ ಸಂಸ್ಥೆ ಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಬೇಕೆಂಬ ಸಂಘದ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದೆ. ಈ ಎಸ್‌ಒಪಿಗಳು ದೇಶಾದ್ಯಂತ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಸಂಸ್ಥೆಗಳಿಗೆ ಅಧಿಕಾರ ನೀಡುವ ನಿರೀಕ್ಷೆಯಿದೆ.
ಕೋಲ್ಕತ್ತಾ ಅಥವಾ ರಾಷ್ಟ್ರದಾದ್ಯಂತ ಮುಷ್ಕರದಲ್ಲಿ ತೊಡಗಿರುವ ವೈದ್ಯರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ ಎಂದು ಹೇಳಿಕೆ ತಿಳಿಸಿದೆ.
ನಡ್ಡಾ ಅವರನ್ನು ಭೇಟಿ ಮಾಡಿದ ನಿಯೋಗದ ಭಾಗವಾಗಿದ್ದ ಇಲ್ಲಿನ ಜಿಟಿಬಿ ಆಸ್ಪತ್ರೆಯ ವೈದ್ಯರು ಕೂಡ ತಮ್ಮ ಮುಷ್ಕರವನ್ನು ಹಿಂಪಡೆದಿದ್ದಾರೆ ಎಂದು ಆಸ್ಪತ್ರೆ ಆರ್‌ಡಿಎ ಅಧ್ಯಕ್ಷ ರಜತ್ ಶರ್ಮಾ ತಿಳಿಸಿದ್ದಾರೆ.
ಏಮ್ಸ್ ವೈದ್ಯರಿಂದ ಪ್ರತಿಭಟನೆ ಮುಂದುವರಿಕೆ: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ನಿವಾಸಿ ವೈದ್ಯರ ಸಂಘದ ಪ್ರಧಾನ ಕಾರ್ಯದರ್ಶಿ ಡಾ ರಘುನಂದನ್ ದೀಕ್ಷಿತ್, ʻಏಮ್ಸ್ ವೈದ್ಯರು ಮುಷ್ಕರ ಮುಂದುವರಿಸಲಿದ್ದಾರೆ. ಕೇಂದ್ರ ಸಂರಕ್ಷಣಾ ಕಾಯ್ದೆಯ ಅನುಷ್ಠಾನ, ಮಾಜಿ ಪ್ರಾಂಶುಪಾಲರ ಅಮಾನತು ಮತ್ತು ಇತರ ಬೇಡಿಕೆಗಳ ಈಡೇರಿಕೆಗಾಗಿ ಲಿಖಿತ ಭರವಸೆ ನೀಡುವವರೆಗೆ ಮುಷ್ಕರ ಮುಂದುವರಿಯಲಿದೆ,ʼ ಎಂದು ಅಖಿಲ ಭಾರತ ವೈದ್ಯಕೀಯ ಸಂಘ ಒಕ್ಕೂಟ (ಎಫ್‌ಎಐಎಂಎ) ಹೇಳಿದೆ.
ಇಂದಿರಾಗಾಂಧಿ ಆಸ್ಪತ್ರೆಯ ವೈದ್ಯರ ಸಂಘ ಮುಷ್ಕರ ಮುಂದುವರಿಸಲು ನಿರ್ಧರಿಸಿದೆ.
ಫೋರ್ಡಾ ಟೀಕೆ: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‌ನ ಜೂನಿಯರ್ ಡಾಕ್ಟರ್ಸ್ ನೆಟ್‌ವರ್ಕ್‌ನ ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಡಾ. ಧ್ರುವ ಚೌಹಾಣ್, ʻ ಫೋರ್ಡಾ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು. ಮುಷ್ಕರ ಹಿಂತೆಗೆದುಕೊಳ್ಳುವುದರಿಂದ ಹತ್ಯೆಗೀಡಾದ ವೈದ್ಯೆಗೆ ನ್ಯಾಯ ಸಿಗುವುದಿಲ್ಲ. ಮುಷ್ಕರ ನಿರ್ಣಾಯಕ ಹಂತದಲ್ಲಿದೆ. ಇದೇ ರೀತಿಯ ಘಟನೆ ಮರುಕಳಿಸುವ ಸಾಧ್ಯತೆಯಿದೆ,ʼ ಎಂದು ಹೇಳಿದರು.