Kolkata rape-murder: ಬಿಜೆಪಿ- ಆಗಸ್ಟ್ 28 ರಿಂದ ಸರಣಿ ಪ್ರತಿಭಟನೆ
x
ಕೋಲ್ಕತ್ತಾದ ಆರ್‌.ಜಿ. ಕರ್ ಆಸ್ಪತ್ರೆಯಲ್ಲಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರತಿಭಟಿಸಿ ಕಿರಿಯ ವೈದ್ಯರು ಅಳವಡಿಸಿರುವ ಬೃಹತ್‌ ಪೋಸ್ಟರ್

Kolkata rape-murder: ಬಿಜೆಪಿ- ಆಗಸ್ಟ್ 28 ರಿಂದ ಸರಣಿ ಪ್ರತಿಭಟನೆ


ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಮೇಲಿನ ದಾಳಿ ತೀವ್ರಗೊಳಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಸುಕಾಂತ ಮಜುಂದಾರ್, ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆಯನ್ನು ಪ್ರತಿಭಟಿಸಿ ಆಗಸ್ಟ್ 28 ರಿಂದ ಸೆಪ್ಟೆಂಬರ್ 4 ರ ನಡುವೆ ರಾಜ್ಯಾದ್ಯಂತ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದ್ದಾರೆ.

ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ವಿಫಲರಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರಾಜೀನಾಮೆಗೆ ಒತ್ತಾಯಿಸಿ, ಕೋಲ್ಕತ್ತಾದ ಎಸ್ಪ್ಲನೇಡ್ ಪ್ರದೇಶದಲ್ಲಿ ಆಗಸ್ಟ್ 28 ರಿಂದ ಧರಣಿ ಆರಂಭವಾಗಲಿದೆ. ಬಿಜೆಪಿಯ ಮಹಿಳಾ ವಿಭಾಗವು ರಾಜ್ಯ ಮಹಿಳಾ ಆಯೋಗದ ಕಚೇರಿಗೆ ಬೀಗ ಹಾಕಲಿದೆ ಎಂದರು.

ನಗರದ ಶ್ಯಾಂಬಜಾರ್ ಪ್ರದೇಶದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ʻರಾಜ್ಯ ಮಹಿಳಾ ಆಯೋಗವು ಮೂರ್ಛೆ ಹೋಗಿದೆ,ʼ ಎಂದು ಹೇಳಿದರು. ಆಗಸ್ಟ್ 29 ರಂದು ಪಕ್ಷದ ಕಾರ್ಯಕರ್ತರು ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಘೇರಾವ್ ಹಾಗೂ ಸೆಪ್ಟೆಂಬರ್ 2 ರಂದು ಎಲ್ಲ ವಲಯ ಆಡಳಿತ ಕಚೇರಿ ಹೊರಗೆ ಪ್ರತಿಭಟನೆ ನಡೆಸಲಿದ್ದಾರೆ. ಸೆ.4ರಂದು ರಾಜ್ಯದ ಎಲ್ಲೆಡೆ ಒಂದು ಗಂಟೆ ಕಾಲ ಸಂಚಾರ ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಹತ್ಯೆಗೆ ಸಂಬಂಧಿಸಿದ ಸಿಬಿಐ ತನಿಖೆಯು ರಾಜ್ಯ ಸರ್ಕಾರ ಮತ್ತು ಆಸ್ಪತ್ರೆ ಲಾಬಿ ನಡುವಿನ ಸಂಬಂಧವನ್ನು ತೋರಿಸುತ್ತದೆ. ಮುಖ್ಯಮಂತ್ರಿ ಭಾರಿ ಹಗರಣದಲ್ಲಿ ಭಾಗಿಯಾಗಿರುವ ದೊಡ್ಡ ಮೀನುಗಳನ್ನು ರಕ್ಷಿಸುತ್ತಿದ್ದಾರೆ. ಸಿಎಂ ಮತ್ತು ಆಸ್ಪತ್ರೆಯ ಪ್ರಭಾವಿ ಅಧಿಕಾರಿಯೊಬ್ಬರ ನಡುವಿನ ಫೋನ್ ಸಂಭಾಷಣೆಯನ್ನು ಸಿಬಿಐ ತನಿಖೆ ವ್ಯಾಪ್ತಿಗೆ ತರಬೇಕೆಂದು ಒತ್ತಾಯಿಸುತ್ತೇವೆʼ ಎಂದು ಕೇಂದ್ರ ಶಿಕ್ಷಣ ಇಲಾಖೆ ರಾಜ್ಯ ಸಚಿವ ಹೇಳಿದ್ದಾರೆ.

ಟಿಎಂಸಿ ಪ್ರತಿಕ್ರಿಯೆ: ಟಿಎಂಸಿ ರಾಜ್ಯ ವಕ್ತಾರ ಜಾಯ್ ಪ್ರಕಾಶ್ ಮಜುಂದಾರ್ ಪ್ರತಿಕ್ರಿಯಿಸಿ ,ʻಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ಸಿಬಿಐ ವೈಫಲ್ಯವನ್ನು ಮುಚ್ಚಿಹಾಕಲು ಬಿಜೆಪಿಯು ಪ್ರತಿಭಟನೆ ನಾಟಕಕ್ಕೆ ಮುಂದಾಗಿದೆ. ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವಂತೆ ಇಡೀ ಪಶ್ಚಿಮ ಬಂಗಾಳ ಸಿಬಿಐಗೆ ಮನವಿ ಮಾಡುತ್ತಿದೆ. ಆದರೆ, ಬಿಜೆಪಿ ಸಂತ್ರಸ್ತರ ಕುಟುಂಬದ ಬೆಂಬಲಕ್ಕೆ ನಿಂತಿರುವ ಸಿಎಂ ರಾಜೀನಾಮೆ ಕೇಳುತ್ತಿದೆ. ತಮ್ಮ ಸರ್ಕಾರ ಮತ್ತು ಪಕ್ಷ ಅತ್ಯಾಚಾರದಂತಹ ಘಟನೆಗಳಿಗೆ ಶೂನ್ಯ ಸಹಿಷ್ಣುವಾಗಿದೆ,ʼ ಎಂದು ಹೇಳಿದರು.

ಟಿಎಂಸಿ ನಾಯಕ ಕುನಾಲ್ ಘೋಷ್ ಮಾತನಾಡಿ, ʻವೈದ್ಯೆಯ ಹತ್ಯೆಯಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂಬುದು ರಾಜ್ಯದ ಪ್ರತಿಯೊಬ್ಬ ನಾಗರಿಕನ ಪ್ರಮುಖ ಬೇಡಿಕೆ. ಆದರೆ, ಬಿಜೆಪಿ ಆಸ್ಪತ್ರೆಯಲ್ಲಿ ಹಣಕಾಸಿನ ಅಕ್ರಮಗಳ ಬಗ್ಗೆ ಮಾತನಾಡುತ್ತಿದೆ. ಮಹಿಳೆಯರ ಸುರಕ್ಷತೆಯಂಥ ಪ್ರಮುಖ ವಿಷಯದ ಬಗ್ಗೆ ಬಿಜೆಪಿ ಗಂಭೀರವಾಗಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಸಿಬಿಐ ತನಿಖೆಯ ವೇಗವನ್ನು ಹೆಚ್ಚಿಸಬೇಕು,ʼ ಎಂದು ಹೇಳಿದರು.

Read More
Next Story