Kolkata hospital rape-murder: ರಾಷ್ಟ್ರವ್ಯಾಪಿ ವೈದ್ಯರ ಪ್ರತಿಭಟನೆ, ಒಪಿಡಿ ಸೇವೆಗಳಿಗೆ ಧಕ್ಕೆ
x
ಕೋಲ್ಕತ್ತಾದಲ್ಲಿ ಸೋಮವಾರ ವೈದ್ಯರು ಪ್ರತಿಭಟನೆ ನಡೆಸಿದರು.

Kolkata hospital rape-murder: ರಾಷ್ಟ್ರವ್ಯಾಪಿ ವೈದ್ಯರ ಪ್ರತಿಭಟನೆ, ಒಪಿಡಿ ಸೇವೆಗಳಿಗೆ ಧಕ್ಕೆ

‘ನ್ಯಾಯ ಸಿಗುವವರೆಗೆ ಮತ್ತು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಮುಷ್ಕರ ಕೈಬಿಡುವುದಿಲ್ಲ’ ಎಂದು ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಫೋರ್ಡಾ) ಹೇಳಿದೆ.


ಕೋಲ್ಕತ್ತಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳ ನಿವಾಸಿ ವೈದ್ಯರ ಮುಷ್ಕರದಿಂದ, ಒಪಿಡಿ(ಹೊರರೋಗಿ ವಿಭಾಗ) ಮತ್ತು ತುರ್ತು ಅಲ್ಲದ ಶಸ್ತ್ರಚಿಕಿತ್ಸೆ ಸೇವೆಗಳು ಸ್ಥಗಿತಗೊಂಡಿವೆ.

‘ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳೊಂದಿಗೆ ನಡೆಸಿದ ಸಭೆ ಯಾವುದೇ ನಿರ್ಧಾರ ತಲುಪಲು ವಿಫಲವಾದ್ದರಿಂದ ಅನಿರ್ದಿಷ್ಟ ಮುಷ್ಕರ ಮುಂದುವರಿಯಲಿದೆ. ನ್ಯಾಯ ಸಿಗುವವರೆಗೆ ಮತ್ತು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಮುಷ್ಕರ ಕೈಬಿಡುವುದಿಲ್ಲ’ ಎಂದು ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಫೋರ್ಡಾ) ಹೇಳಿದೆ.

ಆ.13ರಂದೂ ಮುಷ್ಕರ: ಮಂಗಳವಾರ (ಆಗಸ್ಟ್ 13) ಮುಷ್ಕರ ಮುಂದುವರಿಯಲಿದೆ ಎಂದು ಫೋರ್ಡಾ ಅಧ್ಯಕ್ಷ ಅವಿರಾಲ್ ಮಾಥುರ್ ಸಭೆ ನಂತರ ಘೋಷಿಸಿದರು.

ʻನಾನು, ಸಂಘದ ಸದಸ್ಯರು ಮತ್ತು ವೈದ್ಯರೊಂದಿಗೆ ಸೋಮವಾರ ಕೇಂದ್ರ ಆರೋಗ್ಯ ಸಚಿವರ ತಂಡವನ್ನು ಭೇಟಿ ಮಾಡಿದ್ದೇವೆ. ಬೇಡಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನಕ್ಕೆ ಬಾರದ ಕಾರಣ, ಮುಷ್ಕರ ಇನ್ನೊಂದು ದಿನ ಮುಂದುವರಿಯುತ್ತದೆ,ʼ ಎಂದು ಮಾಥುರ್ ಹೇಳಿದರು. ತುರ್ತು ಸೇವೆಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿ, ಕೋಲ್ಕತ್ತಾ, ಲಕ್ನೋ, ರಾಂಚಿಯಲ್ಲಿ ಸೇವೆ ಬಾಧಿತ: ದೆಹಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆಗಳನ್ನು ಮಂಗಳವಾರ ಮುಚ್ಚ ಲಾಗಿತ್ತು. ದೆಹಲಿಯ ಏಮ್ಸ್‌ನಲ್ಲಿ ಮುಷ್ಕರ ಆರಂಭಗೊಂಡ ನಂತರ ದೈನಂದಿನ ಶಸ್ತ್ರಚಿಕಿತ್ಸೆಗಳ ಸಂಖ್ಯೆ ಶೇ.80 ರಷ್ಟು ಕಡಿಮೆಯಾಗಿದೆ ಮತ್ತು ದಾಖಲಾತಿ ಶೇ. 35 ರಷ್ಟು ಕಡಿಮೆಯಾಗಿದೆ ಎಂದು ವರದಿಯಾಗಿದೆ.

ಕೋಲ್ಕತ್ತಾದ ಹೆಚ್ಚಿನ ಆಸ್ಪತ್ರೆಗಳಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರು ಹೊರರೋಗಿಗಳ ವಾರ್ಡ್‌ಗಳಲ್ಲಿ ಸೇವೆಗಳ ಕೊರತೆ ಬಗ್ಗೆ ದೂರು ನೀಡುತ್ತಿದ್ದಾರೆ. ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವೈದ್ಯರು ಕೆಲಸವನ್ನು ನಿಲ್ಲಿಸುವಂತೆ ಹೊರರೋಗಿ ವಿಭಾಗಕ್ಕೆ ಮೆರವಣಿಗೆ ನಡೆಸಿದರು. ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ರಿಮ್ಸ್‌) ನಲ್ಲಿ ಮಂಗಳವಾರ ಕಿರಿಯ ವೈದ್ಯರು ಒಪಿಡಿ ಸೇವೆಗಳು ಮತ್ತು ಐಚ್ಛಿಕ ಶಸ್ತ್ರಚಿಕಿತ್ಸೆಗಳನ್ನು ಬಹಿಷ್ಕರಿಸಿ, ಪ್ರತಿಭಟಿಸಿದರು.ಆದರೆ, ಪ್ರಧಾನ ಆಸ್ಪತ್ರೆಯಲ್ಲಿ ತುರ್ತು ಸೇವೆಗಳಿಗೆ ವೈದ್ಯರು ಹಾಜರಾಗುತ್ತಿದ್ದಾರೆ.

ಸಿಬಿಐ ತನಿಖೆಗೆ ಆಗ್ರಹ: ಕೋಲ್ಕತ್ತಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿ ಧರಣಿ ನಿರತ ವೈದ್ಯರು ಒತ್ತಾಯಿಸಿದರು.

ʻಸುಮಾರು 200 ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿರಿಯ ವೈದ್ಯರು ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ. ಪ್ರತಿಭಟನೆ ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ, ರೋಗಿಗಳು ತೊಂದರೆ ಅನುಭವಿಸಬಾರದು,ʼ ಎಂದು ರಿಮ್ಸ್‌ ಜೂನಿಯರ್ ವೈದ್ಯರ ಸಂಘದ (ಜೆಡಿಎ) ಅಧ್ಯಕ್ಷ ಅಂಕಿತ್ ಕುಮಾರ್ ತಿಳಿಸಿದರು. ʻಸಿಬಿಐ ತನಿಖೆಯಲ್ಲದೆ, ಆಸ್ಪತ್ರೆಗಳಲ್ಲಿ ವೈದ್ಯರ ಸುರಕ್ಷತೆಗೆ ನಾವು ಒತ್ತಾಯಿಸುತ್ತೇವೆ,ʼ ಎಂದು ಹೇಳಿದರು.

ಫೋರ್ಡಾದ ಬೇಡಿಕೆಗಳು: ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಫೋರ್ಡಾ ಬರೆದ ಪತ್ರದಲ್ಲಿ,ʼ ಕೋಲ್ಕತ್ತಾ ಅಪರಾಧವು ವೈದ್ಯ ಸಮುದಾಯದ ಇತಿಹಾಸದಲ್ಲಿ ಸಂಭವಿಸಿದ ಅತ್ಯಂತ ದೊಡ್ಡ ದುರಂತ,ʼ ಎಂದು ಹೇಳಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯೆಯ ಮಾನ, ಪ್ರಾಣ ರಕ್ಷಣೆ ಮಾಡಲಾಗದ ಎಲ್ಲ ಅಧಿಕಾರಿಗಳ ರಾಜೀನಾಮೆ, ಆರೋಗ್ಯ ಕಾರ್ಯಕರ್ತರಿಗೆ ಕೇಂದ್ರದಿಂದ ಕಡ್ಡಾಯ ಭದ್ರತಾ ಪ್ರೋಟೋಕಾಲ್‌ಗಳು, ಪ್ರಕರಣದಲ್ಲಿ ತ್ವರಿತ ಕ್ರಮ ಮತ್ತು ಪ್ರತಿಭಟನಾ ನಿರತ ವೈದ್ಯರ ಮೇಲೆ ದೌರ್ಜನ್ಯ ನಡೆಸುವುದಿಲ್ಲ ಎಂಬ ಖಾತ್ರಿ ನೀಡಬೇಕು ಎಂಬ ಬೇಡಿಕೆಗಳನ್ನು ಸಂಘ ಇರಿಸಿದೆ.

ಕೇಂದ್ರ ಕಾನೂನಿನ ಜಾರಿಗೆ ಐಎಂಎ ಒತ್ತಾಯ: ಭಾರತೀಯ ವೈದ್ಯಕೀಯ ಸಂಘ (ಐಎಂಎ)ವು ಆರೋಗ್ಯ ಸಚಿವ ನಡ್ಡಾ ಅವರಿಗೆ ಪತ್ರ ಬರೆದಿದ್ದು, ವೈದ್ಯರ ಮೇಲಿನ ದಾಳಿ ಮತ್ತು ಹಿಂಸಾಚಾರ ತಡೆಗಟ್ಟಲು ಮತ್ತು ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳೆಂದು ಘೋಷಿಸಲು ಕೇಂದ್ರ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದೆ.

25 ರಾಜ್ಯಗಳಲ್ಲಿ ವೈದ್ಯರ ವಿರುದ್ಧ ಹಿಂಸಾಚಾರ ತಡೆಗಟ್ಟುವ ಕಾನೂನುಗಳಿವೆ. ಆದರೆ, ಅವು ನಿಷ್ಪರಿಣಾಮಕಾರಿಯಾಗಿವೆ. ಕೇಂದ್ರೀಯ ಕಾನೂನು ಇಲ್ಲದಿರುವುದು ಇದಕ್ಕೆ ಒಂದು ಕಾರಣ ಎಂದು ವೈದ್ಯರ ಸಂಸ್ಥೆ ಹೇಳಿದೆ.

Read More
Next Story