ಟೂರ್ನಿಯುದ್ದಕ್ಕೂ ಕೆಕೆಆರ್ ಅಜೇಯ ತಂಡದಂತೆ ಆಡಿತು: ಶ್ರೇಯಸ್ ಅಯ್ಯರ್
ಚೆನ್ನೈ, ಮೇ 26 - ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮೂರನೇ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ ನಾಯಕ ಶ್ರೇಯಸ್ ಅಯ್ಯರ್ ಅವರು,ʻತಂಡ ಇಡೀ ಋತುವಿನಲ್ಲಿ ಅಜೇಯರಂತೆ ಆಡಿತು,ʼ ಎಂದು ಹೇಳಿದರು.
ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎಂಟು ವಿಕೆಟ್ ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.
ʻಇದು ಸಮಗ್ರವಾದ ಗೆಲುವು. ಋತುವಿನ ಉದ್ದಕ್ಕೂ ನಾವು ಅಜೇಯರಂತೆ ಆಡಿದ್ದೇವೆ. ಈಗ ಸಂಭ್ರಮಿಸಲು ಸಾಕಷ್ಟು ಇದೆ. ಇಂಥ ಪ್ರದರ್ಶ ನವನ್ನು ನಾವು ತಂಡ ಮತ್ತು ಪ್ರತಿಯೊಬ್ಬ ಆಟಗಾರನಿಂದ ಬಯಸಿದ್ದೆವು,ʼ ಎಂದು ಪಂದ್ಯದ ನಂತರ ಹೇಳಿದರು.
ʻಎಲ್ಲರೂ ಸರಿಯಾದ ಸಮಯದಲ್ಲಿ ದೃಢವಾಗಿ ನಿಂತರು; ಈ ಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. ದೋಷರಹಿತ ಪ್ರದರ್ಶ ನ ನೀಡಿದ್ದೇವೆ. ಸಂತೋಷವನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ,ʼ ಎಂದು ಹೇಳಿದರು.
ಶ್ರೇಯಸ್ ಟಿ20 ವಿಶ್ವಕಪ್ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. ʻಪರಿಸ್ಥಿತಿ ಏನೇ ಇದ್ದರೂ ಒಬ್ಬರನ್ನೊಬ್ಬರು ಬೆಂಬಲಿಸಬೇಕೆಂದು ಎಲ್ಲರೂ ಅಂದುಕೊಂಡಿದ್ದೆವು. ಇನ್ನಷ್ಟು ಸ್ಪರ್ಧಾತ್ಮಕ ಕ್ರಿಕೆಟ್ ಆಟವನ್ನು ಎದುರು ನೋಡುತ್ತಿದ್ದೇನೆ,ʼ ಎಂದು ಹೇಳಿದರು.
ಬಲಗೈ ಆಟಗಾರ ಮಿಚೆಲ್ ಸ್ಟಾರ್ಕ್ ಅವರ ಬಗ್ಗೆ ಶ್ರೇಯಸ್, ಮೆಚ್ಚುಗೆಯ ಮಾತು ಆಡಿದರು. ಸ್ಟಾರ್ಕ್ ಪವರ್ ಪ್ಲೇನಲ್ಲಿ ಗಳಿಸಿದ ಎರಡು ವಿಕೆಟ್‌ಗಳು ಸನ್ ರೈಸರ್ಸ್ ತಂಡದ ರನ್ ದರವನ್ನು ಕುಂಠಿತಗೊಳಿಸಿತ್ತು. ʻಇಂಥ ಸನ್ನಿವೇಶದಲ್ಲಿ ನಿಜವಾದ ಆಟಗಾರರು ಎದ್ದು ನಿಲ್ಲುತ್ತಾರೆ. ಫೈನಲ್ ಹೆಚ್ಚು ಒತ್ತಡದ ಪಂದ್ಯ. ಮೈದಾನದಲ್ಲಿ ಕೂಡ ಅವರು ಉತ್ತಮ ಪ್ರದರ್ಶನ ನೀಡಿದರು. ಎಂದೂ ಸೋಮಾರಿತನ ತೋರದ ಆಟಗಾರ. ಸರಿಯಾದ ಸಂದರ್ಭದಲ್ಲಿ ಉತ್ತಮವಾಗಿ ಆಡಿದರು,ʼ ಎಂದರು.
ಮುಂಬೈ ಆಟಗಾರ ಆಲ್‌ರೌಂಡರ್ ಆಂಡ್ರೆ ರಸೆಲ್ ಅವರನ್ನು ಶ್ರೇಯಸ್ ಶ್ಲಾಘಿಸಿದರು. ರಸೆಲ್ ಫೈನಲ್‌ನಲ್ಲಿ ಮೂರು ವಿಕೆಟ್ ಗಳಿಸಿದರು. ʻಅವರ ಬಳಿ ಮಂತ್ರ ದಂಡ ಇದೆ. ಸದಾ ವಿಕೆಟ್ ಗಳಿಸಲು ಎದುರು ನೋಡುತ್ತಿದ್ದಾರೆ. ಎಲ್ಲ ಆಟಗಾರರು ಸರಿಯಾದ ಸಮಯದಲ್ಲಿ ಕೈ ಜೋಡಿಸಿದರು; ಇದರಿಂದ ಗೆಲುವು ಸುಲಭವಾಯಿತು. ಇದು ದೋಷರಹಿತ ಋತು,ʼ ಎಂದರು.
ಎಲ್ಲ ಕ್ಷೇತ್ರದಲ್ಲೂ ಮೀರಿಸಿದರು: ಸನ್ ರೈಸರ್ಸ್ ನಾಯಕ ಪ್ಯಾಟ್ ಕಮ್ಮಿನ್ಸ್, ನೈಟ್ ರೈಡರ್ಸ್ ತಮ್ಮ ತಂಡವನ್ನು ಎಲ್ಲ ವಿಭಾಗದಲ್ಲೂ ಮೀರಿಸಿದರು ಎಂದು ಹೇಳಿದರು. ʻಅವರು ಅದ್ಭುತವಾಗಿ ಬೌಲಿಂಗ್ ಮಾಡಿದರು. ಆದರೆ, ಎಲ್ಲ ವಿಭಾಗದಲ್ಲೂ ಚೆನ್ನಾಗಿ ಆಡಿದರು. ನಮಗೆ ಏನನ್ನೂ ಉಳಿಸಲಿಲ್ಲ. ಈ ವಿಕೆಟ್ ನಲ್ಲಿ 200 ಪ್ಲಸ್ ರನ್ ಬರುತ್ತದೆ ಎಂದುಕೊಂಡಿರಲಿಲ್ಲ. 160 ರನ್ ಗಳಿಸಿದ್ದರೆ, ನಮಗೆ ಅವಕಾಶ ಇರುತ್ತಿತ್ತು,ʼ ಎಂದ ಕಮ್ಮಿನ್ಸ್ ತಂಡದ ಆಟಗಾರರು ಮತ್ತು ವೀಕ್ಷಕರಿಗೆ ಧನ್ಯವಾದ ಅರ್ಪಿಸಿದರು.
ʻನಾನು ತಂಡದಲ್ಲಿರುವ ಅನೇಕ ಆಟಗಾರರೊಂದಿಗೆ ಈ ಹಿಂದೆ ಆಟವಾಡಿರಲಿಲ್ಲ. ನಿಜವಾಗಿಯೂ ಉತ್ತಮ ತಂಡ ಮತ್ತು ಸಿಬ್ಬಂ ದಿ. ಭಾರತದಲ್ಲಿ ತಂಡವನ್ನು ಬೆಂಬಲಿಸುವ ನೀಲಿ ವಸ್ತ್ರ ಧರಿಸಿದ ಪ್ರೇಕ್ಷಕರ ಸಾಗರದ ಮುಂದೆ ಆಡುತ್ತೇವೆ. ಕೆಲವೊಮ್ಮೆ ತಂಡದ ಪರವಿರುವ ಪ್ರೇಕ್ಷಕರ ಎದುರು ಆಡುವುದು ಒಳ್ಳೆಯದು,ʼ ಎಂದು ಹೇಳಿದರು.
ಬಹಳಷ್ಟು ಮಂದಿ ಹಣ ಮಾಡಿದ್ದಾರೆ: ಸ್ಟಾರ್ಕ್
24.75 ಕೋಟಿ ರೂ.ಗೆ ಹರಾಜಾಗಿದ್ದ ಸ್ಟಾರ್ಕ್, ʻಆ ಭಾರಿ ಶುಲ್ಕ ನನ್ನ ಮೇಲೆ ಒತ್ತಡ ಹೇರಿಲ್ಲ. ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಬೌಲಿಂಗ್ ಮುನ್ನಡೆಸುವುದನ್ನು ಆನಂದಿಸುತ್ತಿದ್ದೇನೆ,ʼ ಎಂದರು. ಫೈನಲ್ ಪಂದ್ಯದಲ್ಲಿ 2/14 ಮೂಲಕ ಸನ್‌ರೈಸರ್ಸ್ ನ್ನು ಎಂಟು ವಿಕೆಟ್‌ಗಳಿಂದ ಸೋಲಿಸಲು ನೆರವಾದರು.
ಕೆಕೆಆರ್ ಬೌಲರ್‌ಗಳ ಉತ್ತಮ ಆಟವನ್ನು ಸ್ಟಾರ್ಕ್ ಶ್ಲಾಘಿಸಿದರು. ʻಕೆಕೆಆರ್‌ಗೆ ಇದು ರೋಚಕ ರಾತ್ರಿ. ನಮ್ಮದು ಅದ್ಭುತ ತಂಡ ಎಂದುಕೊಂಡಿದ್ದೇನೆ. ಎಲ್ಲರ ಕೊಡುಗೆಯೊಂದಿಗೆ, ಸ್ಥಿರವಾದ ತಂಡವಾಗಿ ಉಳಿದಿದ್ದೇವೆ. ಅದು ನಮ್ಮ ಯಶಸ್ಸಿನ ದೊಡ್ಡ ಭಾಗ,ʼ ಎಂದು ಹೇಳಿದರು.