
ಪ್ರಮುಖ ಸಂಸದೀಯ ಸಮಿತಿಗಳಿಗೆ ಅವಿರೋಧ ನೇಮಕ
ಹೊಸದಿಲ್ಲಿ, ಆ.4- ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸೇರಿದಂತೆ ಪ್ರಮುಖ ಸಂಸದೀಯ ಸಮಿತಿಗಳನ್ನು ಒಮ್ಮತದಿಂದ ರಚಿಸಲಾಗಿದೆ.
ಸರ್ಕಾರದ ವೆಚ್ಚವನ್ನು ಪರಿಶೀಲಿಸುವ ಪಿಎಸಿ, ಸಾರ್ವಜನಿಕ ಉದ್ಯಮಗಳ ಸಮಿತಿ, ಅಂದಾಜು ಸಮಿತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ, ಲಾಭದಾಯಕ ಹುದ್ದೆ ಜಂಟಿ ಸಮಿತಿ ಮತ್ತು ಇತರ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯನ್ನು ಚುನಾವಣೆ ಇಲ್ಲದೆ ರಚಿಸಲಾಗಿದೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸಮಿತಿಗಳ ಅಧ್ಯಕ್ಷರನ್ನು ಶೀಘ್ರದಲ್ಲೇ ನಾಮನಿರ್ದೇಶನ ಮಾಡುವ ನಿರೀಕ್ಷೆಯಿದೆ ಎಂದು ಸಂಸದೀಯ ಅಧಿಕಾರಿಗಳು ತಿಳಿಸಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಸಂಸದೀಯ ವ್ಯವಸ್ಥಾಪಕರ ತಂಡವು ಸಮಿತಿಗಳಿಗೆ ನೇಮಕಗಳು ಒಮ್ಮತದಿಂದ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡಿವೆ.
ಅವಿರೋಧ ನೇಮಕ:ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಲೋಕಸಭೆಯಿಂದ 19 ನಾಮಪತ್ರಗಳು ಬಂದಿದ್ದವು. ಪಿಎಸಿಗೆ ಸಂಸತ್ತು 15 ಹಾಗೂ ರಾಜ್ಯಸಭೆಯು 7 ಸದಸ್ಯರನ್ನು ಆಯ್ಕೆ ಮಾಡುತ್ತದೆ. ನಾಲ್ವರು ಅಭ್ಯರ್ಥಿಗಳು ಉಮೇದುವಾರಿಕೆಯನ್ನು ಹಿಂತೆಗೆದುಕೊಂಡಿದ್ದರಿಂದ, ಅವಿರೋಧ ಆಯ್ಕೆ ಸಾಧ್ಯವಾಯಿತು ಎಂದು ಲೋಕಸಭೆಯ ಬುಲೆಟಿನ್ ಹೇಳಿದೆ. ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ಡಿಎಂಕೆ ನಾಯಕ ಟಿ.ಆರ್. ಬಾಲು, ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್, ರವಿಶಂಕರ್ ಪ್ರಸಾದ್ ಮತ್ತು ತೇಜಸ್ವಿ ಸೂರ್ಯ, ಟಿಎಂಸಿ ನಾಯಕ ಸೌಗತ ರೇ ಮತ್ತು ಎಸ್‌ಪಿ ನಾಯಕ ಧರ್ಮೇಂದ್ರ ಯಾದವ್ ಪಿಎಸಿ ಸದಸ್ಯರಾಗಿದ್ದಾರೆ.
30 ಸದಸ್ಯರ ಅಂದಾಜು ಸಮಿತಿಗೆ 36 ಮಂದಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ ಆರು ಮಂದಿ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಸಾರ್ವಜನಿಕ ಉದ್ಯಮಗಳ ಸಮಿತಿಯ 15 ಸ್ಥಾನಗಳಿಗೆ 27 ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಆನಂತರ 12 ಸದಸ್ಯರು ನಾಮಪತ್ರ ಹಿಂತೆಗೆದುಕೊಂಡರು. ಎಸ್‌ಸಿ ಮತ್ತು ಎಸ್‌ಟಿ ಕಲ್ಯಾಣ ಸಮಿತಿಯ 20 ಸ್ಥಾನಕ್ಕೆ 27 ಮತ್ತು ಒಬಿಸಿಗಳ ಕಲ್ಯಾಣ ಸಮಿತಿಯ 20 ಸ್ಥಾನಕ್ಕೆ 23 ಅರ್ಜಿಗಳು ಸಲ್ಲಿಕೆಯಾಗಿದ್ದವು. ಎಸ್‌ಸಿ-ಎಸ್‌ಟಿ ಕಲ್ಯಾಣ ಸಮಿತಿಯಿಂದ ಏಳು ಹಾಗೂ ಒಬಿಸಿ ಕಲ್ಯಾಣ ಸಮಿತಿಯಿಂದ ಮೂವರು ನಾಮಪತ್ರ ಹಿಂತೆಗೆದುಕೊಂಡರು. ಹೀಗಾಗಿ, ಚುನಾವಣೆ ಇಲ್ಲದೆ ಅವಿರೋಧ ಆಯ್ಕೆ ಸಾಧ್ಯವಾಗಿದೆ.