ಎನ್‌ಡಿಎ ನೂತನ ಸಂಸದರ  ಮಹತ್ವದ ಸಭೆ ಇಂದು
x

ಎನ್‌ಡಿಎ ನೂತನ ಸಂಸದರ ಮಹತ್ವದ ಸಭೆ ಇಂದು


ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ದ ನೂತನ ಸಂಸದರ ಸಭೆಯು ಜೂನ್ 7 ರಂದು (ಶುಕ್ರವಾರ) ನಡೆಯಲಿದೆ.

ನೂತನ ಸಂಸದರು ಸಭೆಯಲ್ಲಿ ನರೇಂದ್ರ ಮೋದಿ ಅವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡುವ ನಿರೀಕ್ಷೆಯಿದೆ. ಇದು ಅವರಿಗೆ ಮೂರನೇ ಅವಧಿಗೆ ಪ್ರಧಾನಿಯಾಗಲು ದಾರಿ ಮಾಡಿಕೊಡುತ್ತದೆ. ಪ್ರಮಾಣವಚನ ಸ್ವೀಕಾರ ಸಮಾರಂಭವು ಜೂನ್ 9 ರ ಭಾನುವಾರದಂದು ನಡೆಯುವ ಸಾಧ್ಯತೆಯಿದೆ. ಆದರೆ, ದಿನಾಂಕದ ಅಧಿಕೃತ ದೃಢೀಕರಣ ಆಗಬೇಕಿದೆ.

ಟಿಡಿಪಿ ನಾಯಕ ಎನ್.ಚಂದ್ರಬಾಬು ನಾಯ್ಡು ಅವರು ಗುರುವಾರ ನವದೆಹಲಿಗೆ ತೆರಳಿದ್ದು, ಎನ್‌ಡಿಎ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ನಾಯ್ಡು ಅವರು ಜೂನ್ 9 ರವರೆಗೆ ನವದೆಹಲಿಯಲ್ಲಿರುವ ನಿರೀಕ್ಷೆಯಿದೆ. ಮೋದಿ ಅವರು ಎನ್‌ಡಿಎ ನಾಯಕರಾಗಿ ಆಯ್ಕೆಯಾದ ನಂತರ, ಮೈತ್ರಿಕೂಟದ ಹಿರಿಯ ನಾಯಕರಾದ ನಾಯ್ಡು ಮತ್ತು ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ, ಬೆಂಬಲಿಸುವ ಸಂಸದರ ಪಟ್ಟಿಯನ್ನು ನೀಡುವ ಸಾಧ್ಯತೆಯಿದೆ.

ಇದಕ್ಕೂ ಮುನ್ನಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಿವಾಸದಲ್ಲಿ ಗುರುವಾರ ವ್ಯಾಪಕ ಚರ್ಚೆ ನಡೆಸಿದ್ದು, ಹೊಸ ಸರ್ಕಾರ ರಚನೆಗೆ ಪ್ರಯತ್ನಗಳು ಆರಂಭವಾಗಿವೆ. ಸಚಿವ ಸ್ಥಾನಗಳು ಮತ್ತು ಸಮ್ಮಿಶ್ರ ಸರ್ಕಾರಕ್ಕೆ ಮಿತ್ರ ಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಇತ್ಯಾದಿ ಕುರಿತು ಚರ್ಚೆ ನಡೆದಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯಕ್ಕಾಗಿ ಜೆಡಿಯು ನಾಯಕರ ಬೇಡಿಕೆ ಕುರಿತು ಚರ್ಚೆ ನಡೆಯಿತು. ʻಸಂಪುಟದಲ್ಲಿ ಸ್ಥಾನ ಕುರಿತು ಪ್ರಧಾನಿ ಮತ್ತು ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ಅವರು ನಿರ್ಧರಿಸುತ್ತಾರೆ. ಆದರೆ, ಅದು ಗೌರವಯುತವಾಗಿರಬೇಕು,ʼ ಎಂದು ಬಿಹಾರದ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್ ಹೇಳಿದ್ದಾರೆ.

ಮೋದಿ ಅವರು ಬುಧವಾರ ಆಡಳಿತಾರೂಢ ಮೈತ್ರಿಕೂಟದ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಅವರನ್ನು ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ದೇಶದ ಪರಂಪರೆಯನ್ನು ಉಳಿಸಿಕೊಂಡು ಸರ್ವತೋಮುಖ ಅಭಿವೃದ್ಧಿಯನ್ನು ಉತ್ತೇಜಿಸಲು ಎನ್‌ಡಿಎ ಸರ್ಕಾರ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಘೋಷಿಸಲಾಯಿತು.

Read More
Next Story