ಚುನಾವಣೆ 2024:  ಸಿಪಿಐ(ಎಂ)ಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ
x

ಚುನಾವಣೆ 2024: ಸಿಪಿಐ(ಎಂ)ಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ


ಒಂದು ತಿಂಗಳ ಹಿಂದೆ ಲೋಕಸಭೆ ಚುನಾವಣೆಗೆ ಸಿಪಿಐ(ಎಂ) ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸುತ್ತಿದ್ದಾಗ, ಹಿರಿಯ ನಾಯಕರೊಬ್ಬರು ಪೊನ್ನಾನಿ ಕ್ಷೇತ್ರದಿಂದ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಕೇಳಿದಾಗ, ʼಅಭ್ಯರ್ಥಿ ಯಾರೇ ಆಗಿರಬಹುದು, ಒಂದು ವಿಷಯ ಖಚಿತ: ಅವರು ಕುಡುಗೋಲು, ಸುತ್ತಿಗೆ ಮತ್ತು ನಕ್ಷತ್ರದ ಚಿಹ್ನೆಯಡಿಯಲ್ಲಿ ಸ್ಪರ್ಧಿಸುತ್ತಾರೆʼ. ಅವರ ಮಾತಿನಲ್ಲಿ ಆತ್ಮವಿಶ್ವಾಸದ ಬದಲು ಪಕ್ಷದ ಸದಸ್ಯರು ಪ್ರತಿನಿಧಿಸಬೇಕು ಎಂಬ ಹತಾಶೆ ಕಾಣುತ್ತಿತ್ತು. ಸಿಪಿಐ(ಎಂ) ಲೋಕಸಭೆ ಸ್ಥಾನವನ್ನು ಗೆಲ್ಲುವ ಸಾಧ್ಯತೆ ಇರುವ ಏಕೈಕ ರಾಜ್ಯ ಕೇರಳ.

ಪಕ್ಷದ ಚಿಹ್ನೆ: ಅಂತಿಮವಾಗಿ, ಪಕ್ಷ ಭಿನ್ನಮತೀಯ ಐಯುಎಂಎಲ್‌ ನಾಯಕ ಕೆ.ಎಸ್. ಹಮ್ಜಾ ಅವರನ್ನು ಪೊನ್ನಾನಿ ಕ್ಷೇತ್ರದಿಂದ ಆಯ್ಕೆ ಮಾಡಿತು. ಅವರನ್ನು ತಿಂಗಳುಗಳ ಹಿಂದೆ ಪಕ್ಷದಿಂದ ಹೊರಹಾಕಲಾಗಿತ್ತು. ಅವರು ಸುತ್ತಿಗೆ, ಕುಡುಗೋಲು ಮತ್ತು ನಕ್ಷತ್ರದ ಚಿಹ್ನೆಯಡಿ ಸ್ಪರ್ಧಿಸಲಿದ್ದಾರೆ. ಈ ಹಿಂದೆ ಉಲ್ಲೇಖಿಸಿದ ಸಿಪಿಐ(ಎಂ) ನಾಯಕ ʻದಿ ಫೆಡರಲ್‌ʼಗೆ ತಿಳಿಸಿದಂತೆ, ಪಕ್ಷದ ಎಲ್ಲ 15 ಅಭ್ಯರ್ಥಿಗಳು ಅಧಿಕೃತ ಚಿಹ್ನೆಯಡಿ ಕಣಕ್ಕಿಳಿ ದಿದ್ದಾರೆ. ಗರಿಷ್ಠ ಸಂಖ್ಯೆಯ ಮತಗಳನ್ನುಗಳಿಸಲು ಮತ್ತು ಪಕ್ಷದ ಮತ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನ ಇದಾಗಿದೆ. ಒಂದುವೇಳೆ ಪಕ್ಷದ ಅಭ್ಯರ್ಥಿ ಗೆಲ್ಲದಿದ್ದರೂ, ಗರಿಷ್ಠ ಸಂಖ್ಯೆಯ ಮತಗಳನ್ನು ಗಳಿಸಲು ಪ್ರಯತ್ನಿಸಬೇಕೆಂದು ಪ್ರತಿಯೊಂದು ಶಾಖೆ ಮತ್ತು ಮಿತ್ರ ಸಂಘಟನೆಗಳಿಗೆ ತಿಳಿಸಲಾಗಿದೆ.

ಎಡ ವಿರೋಧಿ ನಡೆ?: ಪಕ್ಷದ ಇತಿಹಾಸದಲ್ಲಿ ಅತ್ಯಂತ ನಿರ್ಣಾಯಕ ಚುನಾವಣೆಗಳಲ್ಲಿ ಒಂದಾಗಲಿದೆ ಎಂದು ಪರಿಗಣಿಸಿ, ಯಾವುದೇ ಮತ ಅಮಾನ್ಯವಾಗದಂತೆ ನೋಡಿಕೊಳ್ಳುವಂತೆ ಕಾರ್ಯಕರ್ತರನ್ನು ಕೇಳಿಕೊಂಡಿದೆ. ಕೆಲವು ನಾಯಕರು ಪಕ್ಷ ರಾಷ್ಟ್ರೀಯ ಸ್ಥಾನಮಾನವನ್ನು ಕಳೆದುಕೊಳ್ಳುವ ನಿಜವಾದ ಅಪಾಯದಲ್ಲಿದೆ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಲು ಹಿಂಜರಿಯುವುದಿಲ್ಲ.

ʻದೇಶದಲ್ಲಿ ಎಡ ಚಳವಳಿಯನ್ನು ನಾಶಮಾಡುವ ಪ್ರಯತ್ನಗಳು ನಡೆಯುತ್ತಿವೆʼ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಮತ್ತು ಮಾಜಿ ರಾಜ್ಯ ಸಚಿವ ಎ.ಕೆ. ಬಾಲನ್ ಅವರು ಕೋಯಿಕ್ಕೋಡ್‌ನಲ್ಲಿ ನಡೆದ ಕೇರಳ ರಾಜ್ಯ ಹಣಕಾಸು ಉದ್ಯಮ(ಕೆಎಸ್‌ಎಫ್‌ಇ)ಗಳ ಅಧಿಕಾರಿಗಳ ಒಕ್ಕೂಟದ ಸಮಾವೇಶದಲ್ಲಿ ಹೇಳಿದರು. ʻಈ ಚುನಾವಣೆಯಲ್ಲಿ ನಾವು ನಿಗದಿತ ಶೇಕಡಾವಾರು ಮತ ಅಥವಾ ಸಂಸದರ ಸಂಖ್ಯೆಯನ್ನು ಗಳಿಸಲು ವಿಫಲವಾದರೆ, ಪಕ್ಷದ ರಾಷ್ಟ್ರೀಯ ಸ್ಥಾನಮಾನ ಬದಲಾಗುತ್ತದೆ ಮತ್ತು ನಾವು 'ಸ್ವತಂತ್ರ ಪಕ್ಷ' ಆಗುತ್ತೇವೆ. ಆನಂತರ ನಾವು ಬೇರೆ ಚಿನ್ಹೆಗಳಡಿ ಸ್ಪರ್ಧೆ ಮಾಡಬೇಕಾಗುತ್ತದೆ. ನಾವು ನಮ್ಮ ಅಸ್ಮಿತೆಯನ್ನು ಕಳೆದುಕೊಳ್ಳಬಾರದು,ʼ ಎಂದು ಬಾಲನ್ ಹೇಳಿದರು.

ರಾಷ್ಟ್ರೀಯ ಪಕ್ಷ ಸ್ಥಾನಮಾನ: 1968 ರ ಚುನಾವಣಾ ಚಿಹ್ನೆಗಳು (ಮೀಸಲು ಮತ್ತು ಹಂಚಿಕೆ) ಆದೇಶದ ಪ್ರಕಾರ, ನಿಗದಿಪಡಿಸಿದ ಮೂರು ಷರತ್ತು ಗಳಲ್ಲಿ ಯಾವುದನ್ನಾದರೂ ಒಂದನ್ನು ಪೂರೈಸಿದರೆ, ರಾಜಕೀಯ ಪಕ್ಷವೊಂದು ರಾಷ್ಟ್ರೀಯ ಪಕ್ಷದ ಮನ್ನಣೆ ಗಳಿಸುತ್ತದೆ. ಅವೆಂದರೆ, ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕನಿಷ್ಠ ನಾಲ್ಕು ಲೋಕಸಭೆ ಸದ ಸ್ಯರು ಹಾಗೂ ಕನಿಷ್ಠ ಶೇ.ಆರರಷ್ಟು ಮತ ಗಳಿಸಬೇಕು. ಪರ್ಯಾಯವಾಗಿ, ಲೋಕಸಭಾ ಸ್ಥಾನಗಳಲ್ಲಿ ಶೇ.2ಕ್ಕಿಂತ ಕಡಿಮೆಯಿಲ್ಲದಂತೆ ಮತ್ತು ಕನಿಷ್ಠ ಮೂರು ರಾಜ್ಯಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು. ಹೆಚ್ಚುವರಿಯಾಗಿ, ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ರಾಜ್ಯ ಪಕ್ಷವೆಂದು ಅಂಗೀಕಾರಗೊಳ್ಳಬೇಕು.

ಪ್ರಸ್ತುತ, ಕೇವಲ ಆರು ಪಕ್ಷಗಳು - ಆಪ್‌,ಬಿಜೆಪಿ, ಬಿಎಸ್‌ಪಿ, ಸಿಪಿಐ(ಎಂ), ಕಾಂಗ್ರೆಸ್ ಮತ್ತುಎನ್‌ಪಿಪಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಹೊಂದಿವೆ. ತೃಣಮೂಲ ಕಾಂಗ್ರೆಸ್, ಸಿಪಿಐ ಮತ್ತು ಎನ್‌ಸಿಪಿ 2023ರಲ್ಲಿ ಈ ಸ್ಥಾನಮಾನ ಕಳೆದುಕೊಂಡವು; ಎಎಪಿ ಅದನ್ನು ಗಳಿಸಿಕೊಂಡಿತು.

ಸಿಪಿಐ(ಎಂ) ನ ನಿರೀಕ್ಷೆಗಳೇನು?: ಪ್ರಸ್ತುತ ಸಿಪಿಐ(ಎಂ) ಲೋಕಸಭೆಯಲ್ಲಿ ಕೇವಲ ಮೂರು ಸ್ಥಾನ ಹೊಂದಿದೆ( ಕೇರಳದಿಂದ ಒಂದು ಮತ್ತು ತಮಿಳುನಾಡಿನಿಂದ ಎರಡು). ಕೇರಳ, ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ತಮಿಳುನಾಡಿನಲ್ಲಿ ರಾಜ್ಯ ಪಕ್ಷವಾಗಿ ಗುರುತಿಸಿಕೊಂಡಿದೆ. ಹೀಗಾಗಿ, ರಾಷ್ಟ್ರೀಯ ಪಕ್ಷವಾಗಿ ಉಳಿದುಕೊಂಡಿದೆ.

ಜೊತೆಗೆ, ಪಕ್ಷ ಏಳು ರಾಜ್ಯಗಳ ವಿಧಾನಸಭೆಗಳಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಕೇರಳದಲ್ಲಿ 62, ತ್ರಿಪುರಾ 11, ತಮಿಳುನಾಡು ಮತ್ತು ಬಿಹಾರದಲ್ಲಿ ತಲಾ ಇಬ್ಬರು ಮತ್ತು ಒಡಿಶಾ, ಮಹಾರಾಷ್ಟ್ರ ಮತ್ತು ಅಸ್ಸಾಂನಲ್ಲಿ ತಲಾ ಒಬ್ಬರು ಶಾಸಕರನ್ನು ಹೊಂದಿದೆ. ಇತರ ರಾಜ್ಯಗಳಲ್ಲಿ ರಾಜ್ಯ ಪಕ್ಷದ ಸ್ಥಾನಮಾನ ಪಡೆಯುವುದು ಕಷ್ಟಕರವಾಗಿರುವಾಗ, ಕೇರಳದಿಂದ ಸಾಧ್ಯವಾದಷ್ಟು ಹೆಚ್ಚು ಸ್ಥಾನ ಗೆಲ್ಲುವುದು ಆದ್ಯತೆಯಾಗಿದೆ.

ಏರಿಳಿತದ ಹಾದಿ: ಪ್ರಸ್ತುತ ಲೋಕಸಭೆಯಲ್ಲಿ ಎಡ ಪಕ್ಷಗಳ ಕೇವಲ ಐದು ಸದಸ್ಯರು ಇದ್ದಾರೆ- ಮೂರು ಸಿಪಿಐ(ಎಂ) ಮತ್ತು ಇಬ್ಬರು ಸಿಪಿಐ. ಇದು ಸುಮಾರು ಆರು ದಶಕಗಳಲ್ಲಿ ಎಡ ಪಕ್ಷಗಳ ಅತ್ಯಂತ ಕಡಿಮೆ ಸಾಧನೆಯಾಗಿದೆ. ಎಡಪಂಥೀಯರು 1990 ಮತ್ತು 2009 ರ ನಡುವೆ ದೇಶದ ರಾಷ್ಟ್ರೀಯ ಚುನಾವಣಾ ಕಣದಲ್ಲಿ ಸ್ಥಿರ ಅಸ್ತಿತ್ವ ಕಂಡುಕೊಂಡರು. 1996 ರಲ್ಲಿ ಯುನೈಟೆಡ್ ಫ್ರಂಟ್ ಸರ್ಕಾರ ರಚನೆಯಾದಾಗ, ಪಕ್ಷ ಮಹತ್ವದ ಸ್ಥಾನ ಗಳಿಸಿತು. ಸಿಪಿಐ(ಎಂ) ನಾಯಕ ಮತ್ತು ಆಗಿನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಅವರು ಪ್ರಧಾನಿ ಸ್ಥಾನಕ್ಕೆ ಹತ್ತಿರವಾಗಿದ್ದರು. 2004 ರಲ್ಲಿ ಎಡ ಪಕ್ಷಗಳು ತಮ್ಮ ಉತ್ತುಂಗವನ್ನು ತಲುಪಿದವು, ಸಿಪಿಐ(ಎಂ) 43, ಸಿಪಿಐ 10, ಫಾರ್ವರ್ಡ್ ಬ್ಲಾಕ್ ಮತ್ತು ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್‌ಎಸ್‌ಪಿ) ತಲಾ ಮೂರು ಸಂಸದರನ್ನು ಹೊಂದಿದ್ದವು. ಆದರೆ, 2009 ರಿಂದ ಗಮನಾರ್ಹ ಆರಂಭವಾಯಿತು. 2011 ರಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಮತ್ತು 2018 ರಲ್ಲಿ ತ್ರಿಪುರಾದಲ್ಲಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಟ್ಟರು.

ಕಠಿಣ ಪ್ರಯತ್ನ: ಸಿಪಿಐ(ಎಂ) 40 ಕ್ಕೂ ಹೆಚ್ಚು ಲೋಕಸಭೆ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ, ಭರವಸೆ ಇರುವುದು ತಮಿಳುನಾಡಿನ ಎರಡು, ರಾಜಸ್ಥಾನದಲ್ಲಿ ಒಂದು ಮತ್ತು ಕೇರಳದಲ್ಲಿ ಮಾತ್ರ. ಕೇರಳದಲ್ಲಿ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಪಕ್ಷ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ʻಕಳೆದ ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಾಧನೆ ಕೆಟ್ಟದಾಗಿದೆ ಎನ್ನುವುದು ನಿಜ. ಆದರೆ, ರಾಷ್ಟ್ರೀಯ ಪಕ್ಷದ ಸ್ಥಾನಮಾನ ಈಗ ಅಪಾಯದಲ್ಲಿಲ್ಲ. ಆದ್ದರಿಂದ, ಬಾಲನ್ ಅವರ ಹೇಳಿಕೆಯಿಂದ ನಮಗೆ ಲಾಭವಾಗುವುದಿಲ್ಲ. ಬದಲಾಗಿ, ನಮ್ಮ ವಿರೋಧಿಗಳಿಗೆ ಸಹಾಯ ಮಾಡುತ್ತದೆ,ʼ' ಎಂದು ಹೆಸರು ಹೇಳಲಿಚ್ಛಿಸದ ಪಕ್ಷದ ಮುಖಂಡರೊಬ್ಬರು ಹೇಳಿದರು.

1964 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ವಿಭಜನೆ ನಂತರ ಸಿಪಿಐ(ಎಂ) ರೂಪುಗೊಂಡಿತು. ಕೆಲವು ವರ್ಷಗಳ ಹಿಂದೆ ಸಿಪಿಐ(ಎಂ) ಮೂರು ರಾಜ್ಯಗಳಲ್ಲಿ(ಪಶ್ಚಿಮ ಬಂಗಾಳ, ಕೇರಳ ಮತ್ತು ತ್ರಿಪುರಾ) ಆಡಳಿತ ನಡೆಸುತ್ತಿತ್ತು.

Read More
Next Story