ಬಿಜೆಪಿ ಟಿಕೆಟ್ ನಿರಾಕರಣೆ: ಮನನೊಂದು ಆರ್‌ಎಸ್‌ಎಸ್‌ ಕಾರ್ಯಕರ್ತ ಆತ್ಮಹತ್ಯೆ
x

ಬಿಜೆಪಿ ಟಿಕೆಟ್ ನಿರಾಕರಣೆ: ಮನನೊಂದು ಆರ್‌ಎಸ್‌ಎಸ್‌ ಕಾರ್ಯಕರ್ತ ಆತ್ಮಹತ್ಯೆ

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ, ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆನಂದ್ ಅವರ ವಾಟ್ಸ್​ಆ್ಯಪ್ ಸಂದೇಶಗಳನ್ನು ಆಧರಿಸಿ, ಅದರಲ್ಲಿ ಉಲ್ಲೇಖಿಸಲಾದ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.


ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ತೀವ್ರವಾಗಿ ಮನನೊಂದ ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ಕೇರಳದ ರಾಜಧಾನಿಯಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಅವರು ತಮ್ಮ ಸ್ನೇಹಿತರಿಗೆ ಕಳುಹಿಸಿದ ವಾಟ್ಸ್​ಆ್ಯಪ್ ಸಂದೇಶದಲ್ಲಿ, ಸ್ಥಳೀಯ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿರುವುದು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

ತಿರುವನಂತಪುರಂ ಕಾರ್ಪೊರೇಷನ್ ವ್ಯಾಪ್ತಿಯ ತ್ರಿಕ್ಕಣ್ಣಾಪುರಂ ವಾರ್ಡ್ ನಿವಾಸಿ ಆನಂದ್ ಕೆ. ಥಂಪಿ ಆತ್ಮಹತ್ಯೆ ಮಾಡಿಕೊಂಡ ಆರ್‌ಎಸ್‌ಎಸ್ ಕಾರ್ಯಕರ್ತ. ಇವರು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ಬಿಜೆಪಿ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಆನಂದ್ ಅವರ ಹೆಸರನ್ನು ಕೈಬಿಟ್ಟು, ಬೇರೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಇದರಿಂದ ಆನಂದ್ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

ವಾಟ್ಸ್​ಆ್ಯಪ್ ಸಂದೇಶದಲ್ಲಿತ್ತು ಸ್ಫೋಟಕ ಸತ್ಯ

ಆತ್ಮಹತ್ಯೆಗೂ ಮುನ್ನ ಆನಂದ್ ತಮ್ಮ ಸ್ನೇಹಿತರಿಗೆ ಕಳುಹಿಸಿದ ವಾಟ್ಸ್​ಆ್ಯಪ್ ಸಂದೇಶದಲ್ಲಿ, ತಮಗೆ ಟಿಕೆಟ್ ತಪ್ಪಲು ಕೆಲವು ಸ್ಥಳೀಯ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಇದಲ್ಲದೆ, ಈ ನಾಯಕರು ಮರಳು ಮಾಫಿಯಾದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಸಹ ಹೊರಹಾಕಿದ್ದಾರೆ. "ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿ ಬದುಕಿದ್ದೇ ನಾನು ಮಾಡಿದ ಬಹುದೊಡ್ಡ ತಪ್ಪು," ಎಂದು ಅವರು ನೋವು ತೋಡಿಕೊಂಡಿದ್ದಾರೆ. ಟಿಕೆಟ್ ನಿರಾಕರಣೆಯಾದ ಬಳಿಕ ಪಕ್ಷೇತರನಾಗಿ ಸ್ಪರ್ಧಿಸಲು ಮುಂದಾದಾಗ ಇದೇ ನಾಯಕರು ತೀವ್ರ ಮಾನಸಿಕ ಒತ್ತಡ ಹೇರಿದ್ದರು ಎಂದೂ ಅವರು ಸಂದೇಶದಲ್ಲಿ ದೂರಿದ್ದಾರೆ.

ತನಿಖೆ ಆರಂಭಿಸಿದ ಪೊಲೀಸರು

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ, ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆನಂದ್ ಅವರ ವಾಟ್ಸ್​ಆ್ಯಪ್ ಸಂದೇಶಗಳನ್ನು ಆಧರಿಸಿ, ಅದರಲ್ಲಿ ಉಲ್ಲೇಖಿಸಲಾದ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆಯು ಸ್ಥಳೀಯ ರಾಜಕೀಯ ವಲಯದಲ್ಲಿ ಮತ್ತು ಆರ್‌ಎಸ್‌ಎಸ್ ಸಂಘಟನೆಯೊಳಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.

Read More
Next Story