Wayanad Landslide| ಕೇರಳದಿಂದ ವಿಮೆ ಕಾರ್ಯಪಡೆ ರಚನೆ
x
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮಹಾ ನಿರ್ದೇಶಕ ಪಿಯೂಷ್ ಆನಂದ್ ಅವರು ವಯನಾಡಿನ ಭೂಕುಸಿತ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು.

Wayanad Landslide| ಕೇರಳದಿಂದ ವಿಮೆ ಕಾರ್ಯಪಡೆ ರಚನೆ


ತಿರುವನಂತಪುರಂ: ವಯನಾಡ್ ಭೂಕುಸಿತದಿಂದ ಬದುಕುಳಿದವರು ವಿವಿಧ ನಷ್ಟಗಳಿಗೆ ವಿಮೆಯನ್ನು ಪಡೆಯಲು ನೆರವಾಗಲು ಕೇರಳ ಸರ್ಕಾರ ಗುರುವಾರ ಕಾರ್ಯಪಡೆಯನ್ನು ರಚಿಸಿದೆ.

ಘಟನೆ ನಡೆದ ದಿನದಿಂದ ವಯನಾಡಿನಲ್ಲಿ ಬೀಡುಬಿಟ್ಟಿರುವ ಸಂಪುಟ ಉಪ ಸಮಿತಿಯ ಶಿಫಾರಸಿನ ಮೇರೆಗೆ ಕಾರ್ಯಪಡೆ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ತಿಳಿಸಿದೆ.

ಕಂದಾಯ ವಸೂಲು ಉಪ ಜಿಲ್ಲಾಧಿಕಾರಿ ಕೆ.ಗೋಪಿನಾಥ್ ನೇತೃತ್ವದ ವಿಶೇಷ ತಂಡ ಕಾರ್ಯಾರಂಭ ಮಾಡಿದೆ. ವಾಹನ ವಿಮೆ, ಜೀವ ವಿಮೆ, ಗೃಹ ವಿಮೆ, ಬೆಳೆ ವಿಮೆ ಮತ್ತು ಸಾಕುಪ್ರಾಣಿಗಳು ಮತ್ತು ಜಾನುವಾರುಗಳ ವಿಮೆಗೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸಲಾಗುವುದು. ವಿಮೆ ಮೊತ್ತವನ್ನು ತ್ವರಿತವಾಗಿ ವಿತರಿಸುವುದನ್ನು ತಂಡವು ಖಚಿತಪಡಿಸುತ್ತದೆ ಎಂದು ಸಿಎಂಒ ಪ್ರಕಟಣೆ ತಿಳಿಸಿದೆ.

ʻತಂಡವು ಇತರ ಇಲಾಖೆಗಳೊಂದಿಗೆ ಕೆಲಸ ಮಾಡಿ, ಮಾಹಿತಿ ಸಂಗ್ರಹಿಸುತ್ತದೆ; ಸಂತ್ರಸ್ತರು ತೆಗೆದುಕೊಂಡ ವಿಮಾ ಪಾಲಿಸಿಗಳ ವಿವರಗಳನ್ನು ಸಿದ್ಧಪಡಿಸುತ್ತದೆ. ಪರಿಹಾರ ಶಿಬಿರಗಳಲ್ಲಿ ಅಥವಾ ಸಂಬಂಧಿಕರ ಮನೆಗಳಲ್ಲಿ ನೆಲೆಸಿರುವ ಬದುಕುಳಿದವರಿಂದ ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳು, ವಿಮಾ ಕಂಪನಿಗಳು ಮತ್ತು ಇತರ ಏಜೆನ್ಸಿಗಳಿಂದ ವಿವರಗಳನ್ನು ಸಂಗ್ರಹಿಸಲಾಗುತ್ತದೆ,ʼ ಎಂದು ತಿಳಿಸಿದೆ.

ಲೀಡ್ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕರು, ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯದ ಜಿಲ್ಲಾ ವ್ಯವಸ್ಥಾಪಕರು ಮತ್ತು ಅರ್ಥಶಾಸ್ತ್ರ ಮತ್ತು ಸಾಂಖ್ಯಿಕ ಇಲಾಖೆಯ ಉಪನಿರ್ದೇಶಕರು ಕಾರ್ಯಪಡೆಯ ಸದಸ್ಯರಾಗಿದ್ದಾರೆ.

226 ಮಂದಿ ಸಾವು: ಅಧಿಕಾರಿಗಳ ಪ್ರಕಾರ, ಜುಲೈ 30 ರಂದು ವಯನಾಡಿನ ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶದಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 226 ಕ್ಕೆ ಏರಿದೆ. 138 ಮಂದಿ ನಾಪತ್ತೆಯಾಗಿದ್ದಾರೆ.

Read More
Next Story