
ಕೇಂದ್ರದಿಂದ ಜಾತ್ಯತೀತತೆ, ಪ್ರಜಾಪ್ರಭುತ್ವಕ್ಕೆ ಅಪಾಯ: ವಿಜಯನ್
ತಿರುವನಂತಪುರಂ, ಮಾ. 30- ಕೇಂದ್ರ ಸರ್ಕಾರವು ದೇಶದ ಜಾತ್ಯತೀತತೆ ಮತ್ತು ಪ್ರಜಾಸತ್ತಾತ್ಮಕ ಸ್ವರೂಪಕ್ಕೆ ಅಪಾಯ ತಂದಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ಎಲ್‌ಡಿಎಫ್‌ನ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಶನಿವಾರ ಚಾಲನೆ ನೀಡಿ, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ನೇತೃತ್ವದ ಕೇಂದ್ರದ ಪುನರಾವರ್ತಿತ ನಡೆಗಳಿಂದಾಗಿ ಜಾತ್ಯತೀತತೆಗೆ ಅಪಾಯವುಂಟಾಗಿದ್ದು, ದಶಕಗಳಿಂದ ದೇಶದಲ್ಲಿ ನೆಲೆಸಿರುವ ಭಾರಿ ಸಂಖ್ಯೆಯ ಜನರು ಇಲ್ಲಿ ಬದುಕಲು ಸಾಧ್ಯವೇ ಎಂಬ ಆತಂಕದಲ್ಲಿದ್ದಾರೆ. ಕೋಟ್ಯಂತರ ಜನರು ಭಯ ಮತ್ತು ಆತಂಕದಲ್ಲಿ ಬದುಕು ತ್ತಿದ್ದಾರೆ ಎಂದು ದೂರಿದ್ದಾರೆ.
ʻಕೇಂದ್ರ ಸರ್ಕಾರದ ಕ್ರಮಗಳು ಜಾಗತಿಕ ಮಟ್ಟದಲ್ಲಿ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ರಾಷ್ಟ್ರ ಎಂಬ ಪರಿಕಲ್ಪನೆ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ವಿಶ್ವ ಸಂಸ್ಥೆ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನಂತಹ ಸಂಸ್ಥೆಗಳು, ಅಮೆರಿಕ, ಜರ್ಮನಿ ದೇಶದಲ್ಲಿನ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಟೀಕಿಸುತ್ತಿವೆ. ಪ್ರಜಾಪ್ರಭುತ್ವ ಮಾರ್ಗಗಳನ್ನು ಅನುಸರಿಸಲಾಗುತ್ತಿದೆಯೇ ಎಂದು ಪ್ರಶ್ನಿಸುತ್ತಿವೆʼ ಎಂದು ಅವರು ಹೇಳಿದರು.
ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನ ಹಾಗೂ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಕುರಿತು ಹಲವು ದೇಶಗಳು ಮತ್ತು ವಿಶ್ವ ಸಂಸ್ಥೆ ಇತ್ತೀಚೆಗೆ ಭಾರತವನ್ನು ಟೀಕಿಸಿವೆ.