ಸಿಎಎ ಬಗ್ಗೆ ಕಾಂಗ್ರೆಸ್ ಮೌನ: ಪಿಣರಾಯಿ ವಾಗ್ದಾಳಿ
x

ಸಿಎಎ ಬಗ್ಗೆ ಕಾಂಗ್ರೆಸ್ ಮೌನ: ಪಿಣರಾಯಿ ವಾಗ್ದಾಳಿ


ಕೊಲ್ಲಂ (ಕೇರಳ), ಏ. 9- ಕಾಂಗ್ರೆಸ್‌ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮೌನವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದ್ದಾರೆ.

ʻಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ಸೇರಿದಂತೆ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿರುವ ಅನೇಕ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದೆ. ಆದರೆ, ಸಿಎಎ ಬಗ್ಗೆ ಒಂದೇ ಒಂದು ಮಾತು ಆಡಿಲ್ಲʼ ಎಂದು ಟೀಕಿಸಿದರು.

ʻ ಸಿಎಎಯನ್ನು ಉದ್ದೇಶಪೂರ್ವಕವಾಗಿ ಪಕ್ಕಕ್ಕೆ ಇಡಲಾಗಿದೆ ಎನ್ನಬಹುದು. ಹಲವು ಕಾನೂನುಗಳನ್ನು ನಿರ್ದಿಷ್ಟವಾಗಿ ಹೆಸರಿಸಿರುವ ಕಾಂಗ್ರೆಸ್‌, ಸಿಎಎ ಬಗ್ಗೆ ಮಾತನಾಡಲು ಹೆದರುತ್ತಿದೆʼ ಎಂದು ಮುಖ್ಯಮಂತ್ರಿ ಹೇಳಿದರು. ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿರುವ ರಕ್ಷಣೆಯನ್ನು ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್‌ ಅವರ ಹೇಳಿಕೆಯನ್ನು ಸಿಎಂ ಪ್ರಶ್ನಿಸಿದರು.

ʻಸಂವಿಧಾನದ 15, 16, 25, 26, 28, 29 ಮತ್ತು 30 ನೇ ವಿಧಿಗಳಡಿಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಖಾತ್ರಿಪಡಿಸಿದ ಹಕ್ಕುಗಳು ಮತ್ತು ಧಾರ್ಮಿಕ ನಂಬಿಕೆಯ ಮೂಲಭೂತ ಹಕ್ಕನ್ನು ಎತ್ತಿಹಿಡಿಯುವುದಾಗಿ ಪ್ರಣಾಳಿಕೆಯ 8 ನೇ ಪುಟದಲ್ಲಿ ಹೇಳಲಾಗಿದೆ. ಆದರೆ, ಸಿಎಎ ಸಮಸ್ಯೆಯನ್ನು ಎತ್ತಿಲ್ಲ. ಸಿಎಎ ಮೂಲಭೂತವಾಗಿ ಸಂವಿಧಾನದ 14 ನೇ ವಿಧಿಯ ಉಲ್ಲಂಘನೆ. ಗಮನಿಸಬೇಕಾದ ಅಂಶವೆಂದರೆ, ಪ್ರಣಾಳಿಕೆಯ 8 ನೇ ಪುಟದಲ್ಲಿ ಆರ್ಟಿಕಲ್ 14 ನ್ನು ಉಲ್ಲೇಖಿಸಿಲ್ಲʼ ಎಂದು ಪಿಣರಾಯಿ ಹೇಳಿದರು.

ʻಬಿಜೆಪಿ-ಎನ್‌ಡಿಎ ಜಾರಿಗೊಳಿಸಿದ ಎಲ್ಲ ಜನವಿರೋಧಿ ಕಾನೂನುಗಳನ್ನು ವಿಶೇಷವಾಗಿ ಕಾರ್ಮಿಕರು, ರೈತರು, ಕ್ರಿಮಿನಲ್ ನ್ಯಾಯ, ಪರಿಸರ, ಅರಣ್ಯ ಮತ್ತು ಡಿಜಿಟಲ್ ದತ್ತಾಂಶ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು ಪರಿಶೀಲಿಸುವುದಾಗಿ ಮತ್ತು ಬದಲಾಯಿಸುವುದಾಗಿ ಭರವಸೆ ನೀಡಿದೆ. ಸಿಪಿಐ(ಎಂ) ಇದಕ್ಕೆ ಒಪ್ಪಿಗೆ ನೀಡಿದೆʼ ಎಂದು ಹೇಳಿದರು.

ಪೌರತ್ವ (ತಿದ್ದುಪಡಿ) ಮಸೂದೆಯನ್ನು ಡಿಸೆಂಬರ್ 2019 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಆನಂತರ ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಲಾಯಿತು. ಕಾಯಿದೆ ವಿರುದ್ಧ ದೇಶದ ಹಲವು ಕಡೆ ಪ್ರತಿಭಟನೆಗಳು ಭುಗಿಲೆದ್ದವು; ವಿರೋಧ ಪಕ್ಷಗಳು ಕಾನೂನನ್ನು ವಿರೋಧಿಸಿದವು.

Read More
Next Story