ಕೇರಳ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ಪಲ್ಸರ್ ಸುನಿ ಸೇರಿದಂತೆ ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
x

ಕೇರಳ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ಪಲ್ಸರ್ ಸುನಿ ಸೇರಿದಂತೆ ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ನ್ಯಾಯಾಧೀಶೆ ಹನಿ ಎಂ. ವರ್ಗೀಸ್ ಅವರು ತೀರ್ಪು ಪ್ರಕಟಿಸಿದ್ದು, ಅಪರಾಧಿಗಳಾದ ಪಲ್ಸರ್ ಸುನಿ (ಸುನಿಲ್), ಮಾರ್ಟಿನ್ ಆಂಟೋನಿ, ಮಣಿಕಂದನ್ ಬಿ, ವಿಜೇಶ್ ವಿಪಿ, ಸಲೀಂ ಎಚ್ ಮತ್ತು ಪ್ರದೀಪ್ ಅವರಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆಯೊಂದಿಗೆ ತಲಾ 50,000 ರೂ. ದಂಡ ವಿಧಿಸಿದ್ದಾರೆ.


Click the Play button to hear this message in audio format

ದೇಶವನ್ನೇ ಬೆಚ್ಚಿಬೀಳಿಸಿದ್ದ 2017ರ ಕೇರಳದ ಖ್ಯಾತ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ, ಪ್ರಮುಖ ಆರೋಪಿ ಪಲ್ಸರ್ ಸುನಿ ಹಾಗೂ ಇತರೆ ಐವರು ಅಪರಾಧಿಗಳಿಗೆ ಎರ್ನಾಕುಲಂನ ಹೆಚ್ಚುವರಿ ವಿಶೇಷ ಸೆಷನ್ಸ್ ನ್ಯಾಯಾಲಯವು ತಲಾ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಗುರುವಾರ ಮಹತ್ವದ ತೀರ್ಪು ನೀಡಿದೆ.

ಸುಮಾರು ಎಂಟು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಬಂದಿರುವ ಈ ತೀರ್ಪಿನಲ್ಲಿ, ಪ್ರಮುಖ ಆರೋಪಿ ನಟ ದಿಲೀಪ್ ಅವರನ್ನು ದೋಷಮುಕ್ತಗೊಳಿಸಲಾಗಿದೆ.

ಭಾರೀ ದಂಡ ಮತ್ತು ಪರಿಹಾರ

ನ್ಯಾಯಾಧೀಶೆ ಹನಿ ಎಂ. ವರ್ಗೀಸ್ ಅವರು ತೀರ್ಪು ಪ್ರಕಟಿಸಿದ್ದು, ಅಪರಾಧಿಗಳಾದ ಪಲ್ಸರ್ ಸುನಿ (ಸುನಿಲ್), ಮಾರ್ಟಿನ್ ಆಂಟೋನಿ, ಮಣಿಕಂದನ್ ಬಿ, ವಿಜೇಶ್ ವಿಪಿ, ಸಲೀಂ ಎಚ್ ಮತ್ತು ಪ್ರದೀಪ್ ಅವರಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆಯೊಂದಿಗೆ ತಲಾ 50,000 ರೂ. ದಂಡ ವಿಧಿಸಿದ್ದಾರೆ. ಒಟ್ಟಾರೆಯಾಗಿ ಸಂಗ್ರಹವಾಗುವ ದಂಡದ ಮೊತ್ತದಲ್ಲಿ 5 ಲಕ್ಷ ರೂಪಾಯಿಯನ್ನು ಸಂತ್ರಸ್ತ ನಟಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಲಾಗಿದೆ. ಒಂದು ವೇಳೆ ದಂಡ ಪಾವತಿಸಲು ತಪ್ಪಿದಲ್ಲಿ, ಅಪರಾಧಿಗಳು ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

ಪ್ರತ್ಯೇಕ ಶಿಕ್ಷೆಗಳ ವಿವರ

ಪ್ರಕರಣದ ಮೊದಲ ಆರೋಪಿ ಪಲ್ಸರ್ ಸುನಿಗೆ ಹಲ್ಲೆಯ ದೃಶ್ಯಗಳನ್ನು ಚಿತ್ರೀಕರಿಸಿದ್ದಕ್ಕಾಗಿ ಐಟಿ ಕಾಯ್ದೆಯ ಸೆಕ್ಷನ್ 66E ಅಡಿ ಪ್ರತ್ಯೇಕವಾಗಿ 3 ವರ್ಷ ಮತ್ತು ಆ ದೃಶ್ಯಗಳನ್ನು ಹಂಚಿಕೊಂಡಿದ್ದಕ್ಕಾಗಿ ಸೆಕ್ಷನ್ 67A ಅಡಿ 5 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಅಪಹರಣದ ಆರೋಪಕ್ಕಾಗಿ ಎಲ್ಲಾ ಆರು ಮಂದಿಗೆ ಐಪಿಸಿ ಸೆಕ್ಷನ್ 366 ರ ಅಡಿಯಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಪಲ್ಸರ್ ಸುನಿಗೆ 3.25 ಲಕ್ಷ ರೂ. ದಂಡ ವಿಧಿಸಲಾಗಿದ್ದರೆ, ಮಾರ್ಟಿನ್ ಆಂಟೋನಿಗೆ 1.5 ಲಕ್ಷ ರೂ. ಮತ್ತು ಉಳಿದವರಿಗೆ ತಲಾ 1.25 ಲಕ್ಷ ರೂ. ದಂಡ ಹಾಕಲಾಗಿದೆ. ಅಪರಾಧಿಗಳು ಈಗಾಗಲೇ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿ ಕಳೆದ ಅವಧಿಯನ್ನು ಶಿಕ್ಷೆಯ ಅವಧಿಯಲ್ಲಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನಟಿಗೆ ಮರಳಲಿದೆ ಚಿನ್ನದ ಉಂಗುರ

ಘಟನೆಯ ಸಂದರ್ಭದಲ್ಲಿ ನಟಿಯಿಂದ ಕಸಿದುಕೊಳ್ಳಲಾದ ಚಿನ್ನದ ಉಂಗುರವನ್ನು ಅವರಿಗೆ ಕೂಡಲೇ ಹಿಂದಿರುಗಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಅಲ್ಲದೆ, ಕೃತ್ಯಕ್ಕೆ ಬಳಸಲಾದ ಎಕ್ಸ್‌ಯುವಿ 500 ವಾಹನವನ್ನು ಅದರ ಮಾಲೀಕರಿಗೆ ಮರಳಿಸಲು ಮತ್ತು ಕೃತ್ಯದ ದೃಶ್ಯಗಳಿರುವ ಪೆನ್ ಡ್ರೈವ್ ಅನ್ನು ಸಂತ್ರಸ್ತೆಯ ಗೌಪ್ಯತೆಗೆ ಧಕ್ಕೆಯಾಗದಂತೆ ಅತ್ಯಂತ ಸುರಕ್ಷಿತವಾಗಿ ಕಾಪಾಡಿಕೊಳ್ಳಲು ತನಿಖಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ದಿಲೀಪ್ ಖುಲಾಸೆ: ಮೇಲ್ಮನವಿ ಸಾಧ್ಯತೆ

ಈ ಪ್ರಕರಣದಲ್ಲಿ ನಟಿಯ ಮೇಲೆ ಹಲ್ಲೆ ನಡೆಸಲು ‘ಸುಪಾರಿ’ ನೀಡಿದ ಆರೋಪ ಎದುರಿಸುತ್ತಿದ್ದ ಮಲಯಾಳಂನ ಸ್ಟಾರ್ ನಟ ದಿಲೀಪ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ನಿರ್ದೋಷಿ ಎಂದು ಘೋಷಿಸಿದೆ. ಆದರೆ, ನಟನ ಖುಲಾಸೆಯನ್ನು ಪ್ರಶ್ನಿಸಿ ಕೇರಳ ಸರ್ಕಾರವು ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳಿದ್ದು, ಕಾನೂನು ಹೋರಾಟ ಮುಂದುವರಿಯುವ ಲಕ್ಷಣಗಳಿವೆ.

Read More
Next Story