ನಟಿ ಮೇಲಿನ ಲೈಂಗಿಕ ದೌರ್ಜನ್ಯ ಕೇಸ್: ದೋಷಮುಕ್ತರಾದ ಮಲಯಾಳಂ ನಟ ದಿಲೀಪ್
x

ನಟಿ ಮೇಲಿನ ಲೈಂಗಿಕ ದೌರ್ಜನ್ಯ ಕೇಸ್: ದೋಷಮುಕ್ತರಾದ ಮಲಯಾಳಂ ನಟ ದಿಲೀಪ್

2017ರ ಫೆಬ್ರವರಿ 17ರಂದು ರಾತ್ರಿ ಕೊಚ್ಚಿಯಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯನ್ನು ಅವರ ಕಾರಿನಲ್ಲೇ ಅಪಹರಿಸಲಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೋ ಚಿತ್ರೀಕರಿಸಲಾಗಿತ್ತು.


Click the Play button to hear this message in audio format

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಕೊನೆಗೂ ನಿರಾಳರಾಗಿದ್ದಾರೆ. ಎರ್ನಾಕುಲಂ ಹೆಚ್ಚುವರಿ ವಿಶೇಷ ಸೆಷನ್ಸ್ ನ್ಯಾಯಾಲಯವು ಸೋಮವಾರ (ಡಿ.8) ದಿಲೀಪ್ ಅವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಈ ಮೂಲಕ 8 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಮಹತ್ವದ ತಿರುವು ಸಿಕ್ಕಿದೆ.

2017ರ ಫೆಬ್ರವರಿ 17ರಂದು ರಾತ್ರಿ ಕೊಚ್ಚಿಯಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯನ್ನು ಅವರ ಕಾರಿನಲ್ಲೇ ಅಪಹರಿಸಲಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೋ ಚಿತ್ರೀಕರಿಸಲಾಗಿತ್ತು. ಈ ಕೃತ್ಯದ ಪ್ರಮುಖ ಸೂತ್ರಧಾರಿ ನಟ ದಿಲೀಪ್ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ವೈಯಕ್ತಿಕ ದ್ವೇಷದ ಆರೋಪ

ದಿಲೀಪ್ ಮತ್ತು ಸಂತ್ರಸ್ತ ನಟಿಯ ನಡುವಿನ ವೈಯಕ್ತಿಕ ದ್ವೇಷವೇ ಈ ಕೃತ್ಯಕ್ಕೆ ಕಾರಣ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ದಿಲೀಪ್ ಮತ್ತು ಮತ್ತೋರ್ವ ನಟಿಯ ನಡುವಿನ ಸಂಬಂಧದ ವಿಷಯವನ್ನು, ಸಂತ್ರಸ್ತ ನಟಿಯು ದಿಲೀಪ್ ಅವರ ಮೊದಲ ಪತ್ನಿ ಮಂಜು ವಾರಿಯರ್ ಅವರಿಗೆ ತಿಳಿಸಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ದಿಲೀಪ್, ಸೇಡು ತೀರಿಸಿಕೊಳ್ಳಲು ಪಲ್ಸರ್ ಸುನಿ ಎಂಬಾತನಿಗೆ 'ಸುಪಾರಿ' ನೀಡಿದ್ದರು ಎಂದು ಪೊಲೀಸರು ಆರೋಪಿಸಿದ್ದರು.

ಇತರೆ ಆರೋಪಿಗಳು ಯಾರು?

ಪ್ರಕರಣದಲ್ಲಿ ದಿಲೀಪ್ ಅವರಲ್ಲದೆ, ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಸುನಿಲ್ ಕುಮಾರ್ (ಪಲ್ಸರ್ ಸುನಿ), ಮಾರ್ಟಿನ್ ಆಂಟನಿ, ಬಿ. ಮಣಿಕಂಠನ್, ವಿ.ಪಿ. ವಿಜೇಶ್, ಎಚ್. ಸಲೀಮ್ ಮತ್ತು ಸಿ. ಪ್ರದೀಪ್ ಸೇರಿದಂತೆ ಒಟ್ಟು 10 ಮಂದಿಯ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.

ಜೈಲುವಾಸ ಮತ್ತು ಬಿಡುಗಡೆ

ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಜೈಲಿನಿಂದ ದಿಲೀಪ್‌ಗೆ ಬರೆದ ಪತ್ರದ ಸುಳಿವು ಸಿಕ್ಕ ನಂತರ, 2017ರ ಜುಲೈ 10ರಂದು ದಿಲೀಪ್ ಅವರನ್ನು ಬಂಧಿಸಲಾಗಿತ್ತು. ಬರೋಬ್ಬರಿ 85 ದಿನಗಳ ಕಾಲ ಜೈಲುವಾಸ ಅನುಭವಿಸಿದ ಬಳಿಕ ಅವರಿಗೆ ಜಾಮೀನು ಸಿಕ್ಕಿತ್ತು.

ಚಿತ್ರರಂಗದಲ್ಲಿ ಬದಲಾವಣೆಯ ಅಲೆ

ಈ ಘಟನೆ ಮಲಯಾಳಂ ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಮಹಿಳಾ ಕಲಾವಿದರ ರಕ್ಷಣೆಗಾಗಿ 'ವುಮೆನ್ ಇನ್ ಸಿನಿಮಾ ಕಲೆಕ್ಟಿವ್' (WCC) ಎಂಬ ಸಂಘಟನೆ ಹುಟ್ಟಿಕೊಳ್ಳಲು ಇದು ಕಾರಣವಾಯಿತು. ಮೀಟೂ ಚಳವಳಿಗೂ ಇದು ವೇದಿಕೆ ಕಲ್ಪಿಸಿತು.

ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ದಿಲೀಪ್ ಅವರನ್ನು ಖುಲಾಸೆಗೊಳಿಸಿದೆ. ತೀರ್ಪು ಹೊರಬರುತ್ತಿದ್ದಂತೆಯೇ ದಿಲೀಪ್ ಅಭಿಮಾನಿಗಳು ಸಂಭ್ರಮಿಸಿದರೆ, ಸಾಮಾಜಿಕ ಜಾಲತಾಣಗಳಲ್ಲಿ ಸಂತ್ರಸ್ತ ನಟಿಗೆ ನ್ಯಾಯ ಸಿಗದಿರುವ ಬಗ್ಗೆ ಚರ್ಚೆಗಳು ಆರಂಭವಾಗಿವೆ.

Read More
Next Story