
ಕೇಜ್ರಿವಾಲ್ ಜಾಮೀನು ವಿಸ್ತರಣೆ: ಸಿಜೆಐ ನಿರ್ಧಾರಕ್ಕೆ ಬಿಟ್ಟ ಪೀಠ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ಮಧ್ಯಂತರ ಜಾಮೀನಿನ ವಿಸ್ತರಣೆ ಕೋರಿ ಸಲ್ಲಿಸಿದ ಅರ್ಜಿಯನ್ನು ತುರ್ತಾಗಿ ಪಟ್ಟಿ ಮಾಡಬೇಕೆಂದು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಮನವಿ ಮಾಡಿದ್ದಾರೆ.
ಆದರೆ, ಮುಖ್ಯ ವಿಷಯದಲ್ಲಿ ತೀರ್ಪು ಕಾಯ್ದಿರಿಸಿರುವುದರಿಂದ, ತುರ್ತು ಪಟ್ಟಿ ಕುರಿತ ನಿರ್ಧಾರವನ್ನು ಸಿಜೆಐ ಡಿ.ವೈ. ಚಂದ್ರಚೂಡ್ ಅವರು ಮಾತ್ರ ತೆಗೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠ ಹೇಳಿದೆ.
ನ್ಯಾಯಾಲಯದ ಪ್ರಶ್ನೆ: ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಮತ್ತು ಕೆ.ವಿ.ವಿಶ್ವನಾಥನ್ ಅವರ ರಜಾಕಾಲದ ಪೀಠವು ಮುಖ್ಯಮಂತ್ರಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರ ಸಲ್ಲಿಕೆಗಳನ್ನು ಗಮನಿಸಿತು.
ಮುಖ್ಯಮಂತ್ರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ನ್ಯಾ.ಸಂಜೀವ್ ಖನ್ನಾ ನೇತೃತ್ವದ ಪ್ರಧಾನ ಪೀಠದ ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾ.ದೀಪಂಕರ್ ದತ್ತಾ ಅವರು ಕಳೆದ ವಾರ ಕೇಜ್ರಿವಾಲ್ ಅವರ ಮನವಿಯನ್ನು ಏಕೆ ತುರ್ತು ಪಟ್ಟಿಗೆ ಉಲ್ಲೇಖಿಸಲಿಲ್ಲ ಎಂದು ವಕೀಲ ಸಿಂಘ್ವಿ ಅವರನ್ನು ಕೇಳಿದರು.
ʻಹಠಾತ್ ಮತ್ತು ವಿವರಿಸಲಾಗದ ತೂಕ ನಷ್ಟ ಮತ್ತು ಅಧಿಕ ಕೀಟೋನ್ ಮಟ್ಟʼದ ಹಿನ್ನೆಲೆಯಲ್ಲಿ ಪಿಇಟಿ-ಸಿಟಿ ಸ್ಕ್ಯಾನ್ ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ತಮ್ಮ ಮಧ್ಯಂತರ ಜಾಮೀನನ್ನು ಏಳು ದಿನ ವಿಸ್ತರಿಸಲು ಕೋರಿದ್ದಾರೆ.ಈ ಚಿಹ್ನೆಗಳು ಮೂತ್ರಕೋಶದಲ್ಲಿ ಸಮಸ್ಯೆ, ಗಂಭೀರ ಹೃದಯ ಕಾಯಿಲೆ ಮತ್ತು ಕ್ಯಾನ್ಸರ್ ಇರಬಹುದು.
ಕೇಜ್ರಿವಾಲ್ ಮನವಿ: ಮೇ 26 ರಂದು ಸಲ್ಲಿಸಿದ ಹೊಸ ಮನವಿಯಲ್ಲಿ ಕೇಜ್ರಿವಾಲ್, ಜೂನ್ 2 ರ ಬದಲುಗೆ ಜೂನ್ 9 ರಂದು ಜೈಲು ಅಧಿಕಾರಿಗಳ ಮುಂದೆ ಶರಣಾಗಲಿದ್ದೇನೆ ಎಂದು ಹೇಳಿದ್ದರು. ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಅನುಕೂಲವಾಗುವಂತೆ ಸುಪ್ರೀಂ ಕೋರ್ಟ್ ಮೇ 10 ರಂದು 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಕೊನೆಯ ಹಂತದ ಮತದಾನ ಮುಗಿದ ಒಂದು ದಿನದ ನಂತರ ಜೂನ್ 2 ರಂದು ಶರಣಾಗಬೇಕು ಎಂದು ನಿರ್ದೇಶಿಸಿತ್ತು.