Delhi CM| ಕೇಜ್ರಿವಾಲ್ ರಾಜೀನಾಮೆ, ಆತಿಶಿ ಅವರಿಂದ ಹಕ್ಕು ಮಂಡನೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರಿಗೆ ಮಂಗಳವಾರ (ಸೆಪ್ಟೆಂಬರ್ 17) ರಾಜೀನಾಮೆ ಸಲ್ಲಿಸಿದ್ದಾರೆ. ಎಎಪಿ ನಾಯಕಿ ಆತಿಶಿ ಅವರು ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ.
ಕೇಜ್ರಿವಾಲ್ ಅವರು ಮಂಗಳವಾರ ಮಧ್ಯಾಹ್ನ ರಾಜೀನಾಮೆ ನೀಡಲು ತಮ್ಮ ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ಎಲ್‌ಜಿ ಸಚಿವಾಲಯವನ್ನು ತಲುಪಿದರು.
ಸಭೆಯ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಆತಿಶಿ, ʻನಾವು ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದೇವೆ. ದೆಹಲಿ ಜನರ ಹಿತಾಸಕ್ತಿಗಳನ್ನು ರಕ್ಷಿಸುತ್ತೇವೆ,ʼ ಎಂದು ಹೇಳಿದರು.
ದೆಹಲಿ ಸಚಿವ ಗೋಪಾಲ್ ರೈ, ʻನಾವು ಈ ಬಗ್ಗೆ ಎಲ್‌ಜಿಗೆ ತಿಳಿಸಿದ್ದೇವೆ. ಆತಿಶಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನಾಂಕವನ್ನು ನಿರ್ಧರಿಸಲು ಎಲ್‌ಜಿಗೆ ಮನವಿ ಮಾಡಿದ್ದೇವೆ,ʼ ಎಂದು ಹೇಳಿದರು.
ದುಃಖದ ಕ್ಷಣ: ʻಕೇಜ್ರಿವಾಲ್ ಸುಳ್ಳು ಆರೋಪ ಎದುರಿಸುತ್ತಿದ್ದು, ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಅವರನ್ನು ಗುರಿಯಾಗಿಸಿಕೊಂಡಿವೆ. ಸುಪ್ರೀಂ ಕೋರ್ಟ್ ತನಿಖಾ ಸಂಸ್ಥೆಗಳನ್ನು ಪಂಜರದ ಗಿಳಿ ಎಂದು ಕಟುವಾಗಿ ಟೀಕಿಸಿದೆ,ʼ ಎಂದು ಹೇಳಿದರು.
ʻಬೇರೆ ನಾಯಕರಾಗಿದ್ದರೆ, ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳುತ್ತಿದ್ದರು. ಆದರೆ, ಕೇಜ್ರಿವಾಲ್ ಅವರು ಜನರ ನ್ಯಾಯಾಲಯಕ್ಕೆ ಹೋಗಲು ನಿರ್ಧರಿಸಿದರು.ಇದು ನಮಗೆ ದುಃಖದ ಕ್ಷಣ. ಶೀಘ್ರದಲ್ಲೇ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕೇಜ್ರಿವಾಲ್ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಜನರು ಪ್ರತಿಜ್ಞೆ ಮಾಡಿದ್ದಾರೆ,ʼ ಎಂದು ಹೇಳಿದರು.