
ಕಾಂಗ್ರೆಸ್ ಒಪ್ಪಿದಲ್ಲಿ ವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಚಾರ: ಕೇಜ್ರಿವಾಲ್
ಕೇಜ್ರಿವಾಲ್ ಅವರು 2014 ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸಿ ದ್ದರು ಮತ್ತು ಎರಡು ಲಕ್ಷಕ್ಕೂ ಹೆಚ್ಚು ಮತ ಗಳಿಸಿದ್ದರು.
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬಂಧನದಿಂದ ತೀವ್ರ ಅಸಮಾಧಾನಗೊಂಡಿರುವ ಆಮ್ ಆದ್ಮಿ ಪಕ್ಷ (ಎಎಪಿ)ದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ವಾರಣಾಸಿಯಲ್ಲಿ ಪ್ರಧಾನಿ ವಿರುದ್ಧ ಪ್ರಚಾರಕ್ಕೆ ಧುಮುಕಲು ಕಾತರದಿಂದ ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಮುಖ್ಯಮಂತ್ರಿ ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದು, ಜೂನ್ 1 ರವರೆಗೆ ಚುನಾವಣೆ ಪ್ರಚಾರಕ್ಕೆ ನ್ಯಾಯಾಲಯ ಅವಕಾಶ ಮಾಡಿಕೊಟ್ಟಿದೆ. ಕೇಜ್ರಿವಾಲ್ 2014 ರ ಲೋಕಸಭೆ ಚುನಾವಣೆಯಲ್ಲಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸಿ, ಎರಡು ಲಕ್ಷಕ್ಕೂ ಹೆಚ್ಚು ಮತ ಗಳಿಸಿ ಎರಡನೇ ಸ್ಥಾನ ಪಡೆದಿದ್ದರು. ಮೋದಿ ಅವರು ವಾರಣಾಸಿಯಿಂದ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಚುನಾವಣೆ ಜೂನ್ 1 ರಂದು ಚುನಾವಣೆ ನಡೆಯಲಿದ್ದು,ಯುಪಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದಾರೆ.
ಕಾಂಗ್ರೆಸ್ ಒಪ್ಪಿಗೆಗೆ ಕೋರಿಕೆ: ಮೂಲಗಳ ಪ್ರಕಾರ, ಕೇಜ್ರಿವಾಲ್ ಅವರು ಮೋದಿ ವಿರುದ್ಧ ಪ್ರಚಾರ ಮಾಡಲು ಕಾಂಗ್ರೆಸ್‌ನ ಒಪ್ಪಿಗೆ ಕೋರಿದ್ದಾರೆ. ಆದರೆ, ಕಾಂಗ್ರೆಸ್ ಈ ಕುರಿತು ನಿರ್ಧರಿಸಿಲ್ಲ. ಈ ಕುರಿತು ದೆಹಲಿಯಲ್ಲಿ ಎಎಪಿ ಪದಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ʻವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದೆ. ಹೀಗಾಗಿ, ಕ್ಷೇತ್ರದಲ್ಲಿ ಪ್ರಚಾರಕ್ಕೆ ಯಾರು ಬೇಕು ಎಂಬುದನ್ನು ಕಾಂಗ್ರೆಸ್ ನಿರ್ಧರಿಸಬೇಕಿದೆ. ಕ್ಷೇತ್ರದಲ್ಲಿ ಮೋದಿಯನ್ನು ಎದುರಿಸಲು ಆಪ್ ಅಗತ್ಯವೆಂದು ಕಾಂಗ್ರೆಸ್ ಹೇಳಿದರೆ, ಎಎಪಿ ಹೋಗುತ್ತದೆ. ಎಎಪಿ ಇಂಡಿಯ ಒಕ್ಕೂಟದ ಸಕ್ರಿಯ ಪಾಲುದಾರ. ಚುನಾವಣೆಯಲ್ಲಿ ಯಶಸ್ಸಿಗೆ ಹೆಚ್ಚಿನದನ್ನು ಮಾಡುತ್ತದೆ,ʼ ಎಂದರು.
ಕೇಜ್ರಿವಾಲ್ ಪ್ರಚಾರ: ಮೇ 16 ರಂದು ಕೇಜ್ರಿವಾಲ್ ಮತ್ತು ಎಎಪಿ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ ಲಕ್ನೋಗೆ ಭೇಟಿ ನೀಡಿ, ಸಮಾಜ ವಾದಿ ಪಕ್ಷದ (ಎಸ್‌ಪಿ) ನಾಯಕ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ್ದರು. ಈಶಾನ್ಯ ಮತ್ತು ವಾಯವ್ಯ ದೆಹಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಕನ್ಹಯ್ಯ ಕುಮಾರ್ ಮತ್ತು ಉದಿತ್ ರಾಜ್ ಅವರನ್ನು ಬೆಂಬಲಿಸಿ ರೋಡ್ ಶೋ ನಡೆಸಿದ್ದರು.
ಕೇಜ್ರಿವಾಲ್ ಅವರು ಮೇ 21 ರಂದು ಜಮ್ಶೆಡ್‌ಪುರದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಅವರೊಂದಿಗೆ ಸಭೆಯಲ್ಲಿ ಮಾತ ನಾಡಿದ್ದರು. ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಕೂಡ ಉಪಸ್ಥಿತರಿದ್ದರು. ಸದ್ಯ ಹೇಮಂತ್ ಸೊರೆನ್ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಎಎಪಿ ವಿರುದ್ಧ ಬಿಜೆಪಿ: ಕೇಜ್ರಿವಾಲ್ ಅವರ ಬಂಧನ ಮತ್ತು ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಎಎಪಿ ಮತ್ತು ಬಿಜೆಪಿ ನಡುವಿನ ಕದನ ಉಲ್ಬಣಗೊಂಡಿದೆ. ಎರಡು ಹಂತದ ಚುನಾವಣೆ ಬಾಕಿ ಉಳಿದಿದ್ದು,ಮೇ 25 ರಂದು ದೆಹಲಿಯ ಏಳು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಆನಂತರ, ಕೇಜ್ರಿವಾಲ್ ಪಂಜಾಬ್ ಹಾಗೂ ವಾರಣಾಸಿ ಕಡೆಗೆ ಗಮನ ಹರಿಸಬಹುದು. ಜೂನ್ 1 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. 2014 ರಲ್ಲಿ ಮೋದಿ ಅವರು ವಾರಣಾಸಿ ಕ್ಷೇತ್ರದಲ್ಲಿ ಕೇಜ್ರಿವಾಲ್ ವಿರುದ್ಧ ಶೇ.50 ಕ್ಕಿಂತ ಅಧಿಕ ಮತ ಗಳಿಸಿದ್ದರು. ಎಲ್ಲ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಕಣದಲ್ಲಿದ್ದರಿಂದ, ಮತಗಳು ವಿಭಜನೆಯಾದವು. ಹೀಗಿದ್ದರೂ, ಕೇಜ್ರಿವಾಲ್ ಅವರು 2 ಲಕ್ಷ ಮತ ಗಳಿಸಿ, ಎರಡನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದರು.
ಈ ಬಾರಿ ಬಹುಜನ ಸಮಾಜ ಪಕ್ಷ(ಬಿಎಸ್ಪಿ)ದ ಅಭ್ಯರ್ಥಿ ಅಥರ್ ಜಮಾಲ್ ಲಾರಿ ಕೂಡ ಸ್ಪರ್ಧೆಯಲ್ಲಿದ್ದಾರೆ. ಎನ್‌ಡಿಎ ಮತ್ತು ಇಂಡಿಯ ಒಕ್ಕೂಟದ ನಡುವೆ ಕದನ ನಡೆಯುತ್ತಿದೆ. ಮೇ 20 ರಂದು ಲಕ್ನೋದಲ್ಲಿ ಮತ ಚಲಾವಣೆ ಮಾಡಿದ ಬಳಿಕ ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರು, ಈ ಬಾರಿ ಜನ ಬದಲಾವಣೆಗೆ ಮನಸ್ಸು ಮಾಡಿದ್ದಾರೆ ಎಂದು ಹೇಳಿದ್ದರು.
ಮಂಗಳವಾರ (ಮೇ 21) ವಾರಣಾಸಿಯಲ್ಲಿ ಪ್ರಚಾರ ನಡೆಸಿದ ಪ್ರಧಾನಿ, ಮಹಿಳಾ ಮತದಾರರನ್ನು ಮತದಾನಕ್ಕೆ ಪ್ರೋತ್ಸಾಹಿಸಲು ತಟ್ಟೆಗಳನ್ನು ಬಡಿಯಲು ಹೇಳಿದರು. ಮೋದಿ ಅವರ ಗೆಲುವು ಪೂರ್ವನಿರ್ಧರಿತವಾಗಿದೆ. ಇಂಡಿಯ ಒಕ್ಕೂಟ ಗೆಲುವಿನ ಅಂತರವನ್ನು ಕಡಿಮೆ ಮಾಡಲು ಬಯಸುತ್ತಿದೆ. 2019 ರ ಚುನಾವಣೆಯಲ್ಲಿ ಅವರು ಶೇ.60 ಕ್ಕಿಂತ ಹೆಚ್ಚು ಮತ ಗಳಿಸಿದ್ದರು.
ಕೇಜ್ರಿವಾಲ್ ಬಯಕೆ ಏನು?: ಕೇಜ್ರಿವಾಲ್ ಪ್ರಚಾರಕ್ಕೆ ಧುಮುಕುವ ಮೂಲಕ ಜನರ ಮನಸ್ಥಿತಿಯನ್ನು ಬದಲಿಸಲು ಪ್ರಯತ್ನಿಸಬಹುದು. ದೆಹಲಿಯಲ್ಲಿ ಗರಿಷ್ಠಬೇಡಿಕೆ ಇದ್ದಾಗಲೂ ವಿದ್ಯುತ್ ಕಡಿತಗೊಳಿಸದ, ವಿದ್ಯುತ್ ಮತ್ತು ನೀರಿನ ಶುಲ್ಕ ಸ್ಥಿರತೆ, ನಿರ್ದಿಷ್ಟ ಮಟ್ಟದವರೆಗೆ ಉಚಿತ ಹಾಗೂ ಉತ್ತಮ ಸರ್ಕಾರಿ ಶಾಲೆಗಳು ಹಾಗೂ ಆಸ್ಪತ್ರೆಗಳು ಸುಧಾರಿಸಿವೆ ಎಂಬ ಕೀರ್ತಿ ಕೇಜ್ರಿವಾಲ್ ಅವರಿಗೆ ಇದೆ. ಇದೆಲ್ಲ ಕಡಿಮೆ ಸಾಧನೆಯಲ್ಲ.ಕೇಂದ್ರದೊಟ್ಟಿಗೆ ಸಂಘರ್ಷದ ಹೊರತಾಗಿಯೂ, ದೆಹಲಿಯಲ್ಲಿ ಅಧಿಕಾರದಲ್ಲಿ ಮುಂದುವರಿದಿದ್ದಾರೆ ಮತ್ತು ಅವರ ಪಕ್ಷ ಪಂಜಾಬಿನಲ್ಲಿ ಸರ್ಕಾರವನ್ನು ರಚಿಸಿದೆ. ಚುನಾವಣೆಯಲ್ಲಿ ಪ್ರಚಾರ ಮಾಡುವುದ ನ್ನು ತಪ್ಪಿಸಲು ತಮ್ಮನ್ನು ಜೈಲಿಗೆ ಹಾಕಲಾಯಿತು ಎಂಬುದು ಅವರ ಆರೋಪ. ಆದರೆ, ಸರ್ವೋಚ್ಚ ನ್ಯಾಯಾಲಯ ಅವರಿಗೆ ಮಧ್ಯಂತರ ಜಾಮೀನು ನೀಡಿರುವುದರಿಂದ, ಬಿಜೆಪಿಗೆ ಎಷ್ಟು ಸಾಧ್ಯವೋ ಅಷ್ಟು ಹಾನಿಯುಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ.
ಚೆಂಡು ಈಗ ಕಾಂಗ್ರೆಸ್ ಅಂಗಳದಲ್ಲಿದೆ.