ಬಿಜೆಪಿಗೆ ಮೀನುಗಾರರ ಮೇಲೆ ಹಠಾತ್ ಪ್ರೀತಿ: ಸ್ಟಾಲಿನ್‌ ವ್ಯಂಗ್ಯ
x

ಬಿಜೆಪಿಗೆ ಮೀನುಗಾರರ ಮೇಲೆ ಹಠಾತ್ ಪ್ರೀತಿ: ಸ್ಟಾಲಿನ್‌ ವ್ಯಂಗ್ಯ


ಏಪ್ರಿಲ್‌ 1- ಚುನಾವಣೆಗೆ ಮುನ್ನ ಮೀನುಗಾರರ ಮೇಲೆ ಬಿಜೆಪಿಗೆ ʻಹಠಾತ್ ಪ್ರೀತಿʼ ಹುಟ್ಟಿದೆ. ರಾಜ್ಯ 37,000 ಕೋಟಿ ರೂ.ಗಳ ಪ್ರವಾಹ ಪರಿಹಾರ ಪ್ಯಾಕೇಜ್‌ಗಳನ್ನು ಕೋರಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಧಾನಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ (ಏಪ್ರಿಲ್ 1) ಪ್ರಶ್ನಿಸಿದ್ದಾರೆ.

ಕಚ್ಚತೀವು ವಿಷಯದಲ್ಲಿ ಪ್ರಧಾನಿ ಟೀಕೆಗೆ ಎಕ್ಸ್‌ ನಲ್ಲಿ ತಿರುಗೇಟು ನೀಡಿರುವ ‌ಸ್ಟಾಲಿನ್‌, ಕಚ್ಚತೀವು ದ್ವೀಪವನ್ನು 1974 ರಲ್ಲಿ ಒಪ್ಪಂದದ ಮೂಲಕ ಭಾರತವು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿತು. ಪ್ರಧಾನಿ ʻದಿಕ್ಕು ತಪ್ಪಿಸುವʼ ತಂತ್ರ ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ʻ10 ವರ್ಷ ಕಾಲ ಕುಂಭಕರ್ಣ ನಿದ್ದೆಯಲ್ಲಿದ್ದು, ಚುನಾವಣೆ ಕಾಲದಲ್ಲಿ ಮೀನುಗಾರರ ಮೇಲೆ ಏಕಾಏಕಿ ಪ್ರೇಮ ತೋರುತ್ತಿರುವವರಿಗೆ ತಮಿಳುನಾಡಿನ ಜನರು ಕೇವಲ ಮೂರು ಪ್ರಶ್ನೆಗಳನ್ನು ಮುಂದಿಡಲು ಬಯಸುತ್ತಾರೆ; ತಮಿಳುನಾಡು ಪಾವತಿಸುವ ಒಂದು ರೂ. ತೆರಿಗೆಯಲ್ಲಿ ಕೇಂದ್ರ ಸರ್ಕಾರ ಕೇವಲ 29 ಪೈಸೆ ಮಾತ್ರ ಏಕೆ ಹಿಂದಿರುಗಿಸುತ್ತದೆ? ಎರಡನೆಯದಾಗಿ, ರಾಜ್ಯ ಎರಡು ನೈಸರ್ಗಿಕ ವಿಕೋಪ ಎದುರಿಸಿದ್ದರೂ (ಡಿಸೆಂಬರ್ 2023ರಲ್ಲಿ ಚೆನ್ನೈ ಮತ್ತು ತೂತುಕುಡಿಯಲ್ಲಿ ಸಂಭವಿಸಿದ ಪ್ರವಾಹ) ಒಂದು ಪೈಸೆ ಪ್ರವಾಹ ಪರಿಹಾರ ಏಕೆ ನೀಡಿಲ್ಲ? ಮತ್ತು, ಮೂರನೆಯದಾಗಿ, ಬಿಜೆಪಿ ಕಳೆದ 10 ವರ್ಷಗಳಲ್ಲಿ ರಾಜ್ಯಕ್ಕೆ ಒಂದು ವಿಶೇಷ ಯೋಜನೆ ಜಾರಿಗೊಳಿಸಿದೆಯೇ? ದಿಕ್ಕು ತಪ್ಪಿಸುವ ಬದಲು,ಈ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿʼ ಎಂದು ಕೋರಿದರು.

ʻಕಚ್ಚತೀವು ದ್ವೀಪ ಕುರಿತ ಹೊಸ ವಿವರಗಳು ಡಿಎಂಕೆಯ ದ್ವಂದ್ವ ನಿಲುವನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿವೆʼ ಎಂದು ಪ್ರಧಾನಿ ಹೇಳಿದ್ದರು. ʼಕಾಂಗ್ರೆಸ್‌ ಮತ್ತು ಡಿಎಂಕೆ ಕುಟುಂಬ ಘಟಕಗಳು. ತಮ್ಮ ಪುತ್ರರು ಮತ್ತು ಪುತ್ರಿಯರ ಅಧಿಕಾರದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತವೆ. ಕಚ್ಚತೀವು ಮೇಲಿನ ನಿರ್ಲಕ್ಷದಿಂದ ಬಡ ಮೀನುಗಾರರು ಮತ್ತು ವಿಶೇಷವಾಗಿ ಮೀನುಗಾರ ಮಹಿಳೆಯರ ಹಿತಾಸಕ್ತಿಗೆ ಧಕ್ಕೆಯಾಯಿತು,ʼ ಎಂದು ಹೇಳಿದ್ದರು.

ಡಿಎಂಕೆ ವಕ್ತಾರ ಎಸ್. ಮನುರಾಜ್, ‌ʻಬಿಜೆಪಿ ತನ್ನ ಸಾಧನೆಗಳ ಬಗ್ಗೆ ಪ್ರಚಾರ ಮಾಡಲು ಹೆದರಿದೆ. ಪ್ರತಿಪಕ್ಷಗಳ ಮೇಲೆ ಆರೋಪ ಮಾಡುವ ಆಟಗಳಲ್ಲಿ ನಿರತವಾಗಿದೆ. ಸುಮಾರು 50 ವರ್ಷ ಹಳೆಯ ಸಮಸ್ಯೆ ಕುರಿತ ಲೇಖನದಿಂದ ಪ್ರಧಾನಿಯವರ ಕಣ್ಣು ತೆರೆದಿರುವುದು ಆಶ್ಚರ್ಯಕರʼ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

Read More
Next Story