ಡಿಎಂಕೆ ಸಂಸದೀಯ ಪಕ್ಷದ ನಾಯಕಿ ಕನಿಮೋಳಿ
ಚೆನ್ನೈ, ಜೂ.11 - ತೂತುಕುಡಿ ಲೋಕಸಭೆ ಕ್ಷೇತ್ರದ ಡಿಎಂಕೆ ಸಂಸದೆ ಕನಿಮೊಳಿ ಅವರನ್ನು ಪಕ್ಷದ ಸಂಸದೀಯ ನಾಯಕಿಯಾಗಿ ನೇಮಿಸಲಾಗಿದೆ ಎಂದು ಡಿಎಂಕೆ ಹೇಳಿದೆ. ಅವರು ಶ್ರೀಪೆರಂಬದೂರು ಸಂಸದ ಟಿ.ಆರ್. ಬಾಲು ಅವರ ಸ್ಥಾನವನ್ನು ಅಲಂಕರಿಸಿದ್ದಾರೆ.
ಚೆನ್ನೈ ಸೆಂಟ್ರಲ್ ಕ್ಷೇತ್ರದ ಸಂಸದ ದಯಾನಿಧಿ ಮಾರನ್ ಲೋಕಸಭೆಯಲ್ಲಿ ಪಕ್ಷದ ಉಪ ನಾಯಕ, ನೀಲಗಿರಿ ಕ್ಷೇತ್ರದ ಸಂಸದ, ಮಾಜಿ ಕೇಂದ್ರ ಸಚಿವ ಎ. ರಾಜಾ ಲೋಕಸಭೆಯಲ್ಲಿ ಸಚೇತಕ ಮತ್ತು ತಿರುಚಿ ಎನ್. ಶಿವ ಅವರನ್ನು ರಾಜ್ಯಸಭೆಯ ಡಿಎಂಕೆ ನಾಯಕರನ್ನಾಗಿ ನೇಮಿಸಲಾಗಿದೆ ಎಂದು ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ಹೇಳಿದ್ದಾರೆ.
ಡಿಎಂಕೆ ಟ್ರೇಡ್ ಯೂನಿಯನ್ ಎಲ್ಪಿಎಫ್ ಪ್ರಧಾನ ಕಾರ್ಯದರ್ಶಿ ಎಂ. ಷಣ್ಮುಗಂ ಅವರು ರಾಜ್ಯಸಭೆಯಲ್ಲಿ ಉಪ ನಾಯಕ, ಹಿರಿಯ ವಕೀಲ ಪಿ. ವಿಲ್ಸನ್ ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ಸಚೇತಕ ಮತ್ತು ಅರಕ್ಕೋಣಂ ಸಂಸದ ಎಸ್.ಜಗದ್ರಕ್ಷಕನ್ ಅವರನ್ನು ಉಭಯ ಸದನಗಳ ಖಜಾಂಚಿಯಾಗಿ ನೇಮಿಸಲಾಗಿದೆ ಎಂದು ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೋಮವಾರ ಇಲ್ಲಿ ಹೇಳಿದ್ದಾರೆ.