‘father-son’ post| ಕಂಗನಾ ಮತ್ತೊಂದು ವಿವಾದ
x

‘father-son’ post| ಕಂಗನಾ ಮತ್ತೊಂದು ವಿವಾದ

ಕಾಂಗ್ರೆಸ್‌ನ ಸುಪ್ರಿಯಾ ಶ್ರಿನೇಟ್ ಅವರು ʻಅಶ್ಲೀಲ ವ್ಯಂಗ್ಯʼಕ್ಕಾಗಿ ರನೌತ್ ಅವರನ್ನು ಟೀಕಿಸಿದ್ದಾರೆ; ಬಿಜೆಪಿಯ ಹಿರಿಯ ಮುಖಂಡ ಮನೋರಂಜನ್ ಕಾಲಿಯಾ,ʼ ರಾಜಕೀಯ ಕಂಗನಾ ಅವರ ಕ್ಷೇತ್ರವಲ್ಲ; ಏಕೆಂದರೆ, ರಾಜಕೀಯ ಗಂಭೀರ ವಿಷಯ,ʼ ಎಂದು ಹೇಳಿದ್ದಾರೆ


ನಟಿ-ರಾಜಕಾರಣಿ ಕಂಗನಾ ರನೌತ್ ಅವರು ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಕೃಷಿ ಕಾನೂನು ಕುರಿತ ಹೇಳಿಕೆಗಳಿಗೆ ಹಿನ್ನಡೆ ಎದುರಿಸಿದ್ದ ನಟಿ, ಶಾಸ್ತ್ರಿ ಅವರ 120 ನೇ ಜನ್ಮದಿನದಂದು ರಾಷ್ಟ್ರಪಿತ ಗಾಂಧಿ ಅವರ ಸ್ಥಾನಮಾನವನ್ನು ಕಡಿಮೆ ಮಾಡುವ ಪೋಸ್ಟ್‌ ಮಾಡಿದ್ದರು.

ತಂದೆ-ಮಗ ಪೋಸ್ಟ್: ʻದೇಶ್ ಕೆ ಪಿತಾ ನಹೀ, ದೇಶ್ ಕೆ ತೋ ಲಾಲ್ ಹೋತೇ ಹೈ. ಧನ್ಯ್‌ ಹೈ ಭಾರತ್ ಮಾ ಕೆ ಯೇ ಲಾಲ್ (ದೇಶಕ್ಕೆ ತಂದೆ ಇಲ್ಲ; ಮಕ್ಕಳಿರುತ್ತಾರೆ. ಭಾರತಮಾತೆಯ ಈ ಮಕ್ಕಳು ಧನ್ಯರು)ʼ ಎಂದು ಇನ್‌ಸ್ಟಾಗ್ರಾಮ್ ನಲ್ಲಿ ಬರೆದಿದ್ದರು.

ಆನಂತರ ಮತ್ತೊಂದು ಪೋಸ್ಟ್‌ನಲ್ಲಿ ದೇಶದಲ್ಲಿ ಸ್ವಚ್ಛತೆ ಪರಂಪರೆಯನ್ನು ಮುಂದಕ್ಕೆ ಒಯ್ದ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಬರೆದಿದ್ದರು. ಇದು ವಿವಾದಕ್ಕೆ ಕಾರಣವಾಯಿತು.

ಕಾಂಗ್ರೆಸ್‌ ಟೀಕೆ: ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್ ಅವರು ಗಾಂಧಿಯವರ ʻಅಶ್ಲೀಲ ಗೇಲಿʼ ಮಾಡಿದ ರನೌತ್ ಅವರನ್ನು ಟೀಕಿಸಿದರು.

ʻಬಿಜೆಪಿ ಸಂಸದೆ ಕಂಗನಾ ಅವರು ಗಾಂಧಿ ಜನ್ಮದಿನದಂದು ಅಶ್ಲೀಲ ಗೇಲಿ ಮಾಡಿದ್ದಾರೆ. ಗೋಡ್ಸೆ ಆರಾಧಕರು ಬಾಪು ಮತ್ತು ಶಾಸ್ತ್ರಿ ಅವರ ನಡುವೆ ಪ್ರತ್ಯೇಕತೆ ತೋರಿಸುತ್ತಾರೆ. ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಹೊಸ ಗೋಡ್ಸೆ ಭಕ್ತಳನ್ನು ಮನಃಪೂರ್ವಕವಾಗಿ ಕ್ಷಮಿಸುವರೇ? ರಾಷ್ಟ್ರಪಿತ ಇದ್ದಾರೆ, ಪುತ್ರರೂ ಇದ್ದಾರೆ, ಹುತಾತ್ಮರೂ ಇದ್ದಾರೆ. ಪ್ರತಿಯೊಬ್ಬರೂ ಗೌರವಕ್ಕೆ ಅರ್ಹರು,ʼ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.

ಪಂಜಾಬಿನ ಹಿರಿಯ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಕೂಡ ರನೌತ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ʻಗಾಂಧೀಜಿ ಕುರಿತ ಕಂಗನಾ ರನೌತ್‌ ಅವರ ಹೇಳಿಕೆಯನ್ನು ಖಂಡಿಸುತ್ತೇನೆ. ವಿವಾದಾತ್ಮಕ ಹೇಳಿಕೆ ನೀಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ರಾಜಕೀಯ ಅವರ ಕ್ಷೇತ್ರವಲ್ಲ. ರಾಜಕೀಯ ಒಂದು ಗಂಭೀರ ವಿಷಯ. ಮಾತನಾಡುವ ಮೊದಲು ಯೋಚಿಸಬೇಕು... ಅವರ ವಿವಾದಾತ್ಮಕ ಹೇಳಿಕೆಗಳು ಪಕ್ಷಕ್ಕೆ ತೊಂದರೆ ಉಂಟುಮಾಡುತ್ತವೆ,ʼ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.

Read More
Next Story