ಮಂಡಿಯಿಂದ ಕಂಗನಾ ರಣಾವತ್ ಆಯ್ಕೆ ಪ್ರಶ್ನಿಸಿ ಅರ್ಜಿ
x

ಮಂಡಿಯಿಂದ ಕಂಗನಾ ರಣಾವತ್ ಆಯ್ಕೆ ಪ್ರಶ್ನಿಸಿ ಅರ್ಜಿ

ಮಂಡಿ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸಿದ್ದ ತಮ್ಮ ನಾಮಪತ್ರವನ್ನು ತಪ್ಪಾಗಿ ತಿರಸ್ಕರಿಸಲಾಗಿದೆ ಎಂದು ಕಿನ್ನೌರ್ ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಸಂಸದೆ ಕಂಗನಾ ರನೌತ್‌ ಅವರಿಗೆ ನೋಟಿಸ್‌ ನೀಡಲಾಗಿದೆ.


ತಮ್ಮ ನಾಮಪತ್ರವನ್ನು ಉದ್ಧೇಶಪೂರ್ವಕವಾಗಿ ತಿರಸ್ಕರಿಸಲಾಗಿದೆ. ಹೀಗಾಗಿ, ಮಂಡಿಯ ಬಿಜೆಪಿ ಲೋಕಸಭೆ ಸದಸ್ಯೆ ಕಂಗನಾ ರನೌತ್‌ ಅವರ ಆಯ್ಕೆಯನ್ನು ರದ್ದುಗೊಳಿಸಬೇಕು ಎಂದು ಕಿನ್ನೌರ್ ನಿವಾಸಿಯೊಬ್ಬರು ಸಲ್ಲಿಸಿದ ಅರ್ಜಿಯ ಮೇರೆಗೆ ಹಿಮಾಚಲ ಪ್ರದೇಶ ಹೈಕೋರ್ಟ್ ಬುಧವಾರ (ಜುಲೈ 24) ಸಂಸದೆಗೆ ನೋಟಿಸ್ ಜಾರಿ ಮಾಡಿದೆ.

ನ್ಯಾ. ಜ್ಯೋತ್ಸ್ನಾ ರೇವಾಲ್ ಅವರು ಆಗಸ್ಟ್ 21 ರೊಳಗೆ ಉತ್ತರವನ್ನು ಸಲ್ಲಿಸುವಂತೆ ರನೌತ್ ಅವರಿಗೆ ಸೂಚಿಸಿದ್ದಾರೆ.

ಅರ್ಜಿದಾರರಾದ ಲಾಯಕ್ ರಾಮ್ ನೇಗಿ ಅವರು ತಮ್ಮ ನಾಮಪತ್ರಗಳನ್ನು ಚುನಾವಣಾಧಿಕಾರಿ (ಡೆಪ್ಯುಟಿ ಕಮಿಷನರ್, ಮಂಡಿ) ತಪ್ಪಾಗಿ ತಿರಸ್ಕರಿಸಿದ್ದಾರೆ ಎಂದಿದ್ದಾರೆ. ಅರಣ್ಯ ಇಲಾಖೆಯ ಮಾಜಿ ನೌಕರರಾದ ನೇಗಿ, ಅವಧಿಗೆ ಮುನ್ನವೇ ನಿವೃತ್ತಿ ಪಡೆದಿದ್ದು, ಚುನಾವಣಾಧಿಕಾರಿಗೆ ನಾಮಪತ್ರದ ಜೊತೆಗೆ ಇಲಾಖೆಯಿಂದ ʻಬಾಕಿಯಿಲ್ಲʼ ಪ್ರಮಾಣಪತ್ರವನ್ನು ಸಲ್ಲಿಸಿದ್ದರು. ಆದರೆ, ವಿದ್ಯುತ್‌, ನೀರು, ದೂರವಾಣಿ ಇಲಾಖೆಗಳಿಂದ ‘ಬಾಕಿಯಿಲ್ಲʼ ಪ್ರಮಾಣಪತ್ರ ಸಲ್ಲಿಸಲು ಒಂದು ದಿನ ಕಾಲಾವಕಾಶ ಪಡೆದಿದ್ದರು. ಆನಂತರ, ಅವುಗಳನ್ನು ಸಲ್ಲಿಸಿದಾಗ ಚುನಾವಣಾಧಿಕಾರಿ ಸ್ವೀಕರಿಸದೆ, ನಾಮಪತ್ರವನ್ನು ತಿರಸ್ಕರಿಸಿದರು ಎಂದು ಹೇಳಿದ್ದಾರೆ.

ತಮ್ಮ ನಾಮಪತ್ರವನ್ನು ಅಂಗೀಕರಿಸಿದ್ದರೆ, ಚುನಾವಣೆಯಲ್ಲಿ ಗೆಲ್ಲಬಹುದಿತ್ತು. ಹೀಗಾಗಿ, ಚುನಾವಣೆಯನ್ನು ರದ್ದುಗೊಳಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಮಂಡಿ ಲೋಕಸಭೆ ಕ್ಷೇತ್ರದಿಂದ ರನೌತ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ವಿಕ್ರಮಾದಿತ್ಯ ಸಿಂಗ್ ಅವರನ್ನು 74,755 ಮತಗಳಿಂದ ಸೋಲಿಸಿದರು. ರನೌತ್‌ 5,37,002 ಮತ ಮತ್ತು ಸಿಂಗ್ 4,62,267 ಮತ ಪಡೆದರು.

Read More
Next Story