ಕಂಗನಾಗೆ ಜೀವ ಬೆದರಿಕೆ, ಪೊಲೀಸರಿಂದ ರಕ್ಷಣೆ ಕೋರಿಕೆ
ಹಿಂದಿ ಚಲನಚಿತ್ರ ʻಎಮರ್ಜೆನ್ಸಿʼಯಲ್ಲಿ ರನೌತ್ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ
ತಮ್ಮ ಚಿತ್ರ ʻಎಮರ್ಜೆನ್ಸಿʼ ಬಿಡುಗಡೆಗೆ ಮುನ್ನ ಜೀವ ಬೆದರಿಕೆ ಎದುರಿಸುತ್ತಿರುವ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರನೌತ್ ಅವರು ಮಂಗಳವಾರ ಪೊಲೀಸರಿಂದ ರಕ್ಷಣೆ ಕೋರಿದ್ದಾರೆ.
ಸಿನಿಮಾದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ರನೌತ್ ನಟಿಸಿದ್ದಾರೆ. ಚಿತ್ರದ ಟ್ರೇಲರ್ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ನಂತರ ಬೆದರಿಕೆ ಬಂದಿತು ಎಂದು ಹೇಳಿದರು.
ವಿಡಿಯೋ ಮೂಲಕ ಬೆದರಿಕೆ: ಸಂಸದೆ ಸ್ವೀಕರಿಸಿದ ವಿಡಿಯೋದಲ್ಲಿ ನಿಹಾಂಗ್ ಸಿಖ್‌ಗಳಂತೆ ವಸ್ತ್ರ ಧರಿಸಿರುವ ಆರು ಪುರುಷರಲ್ಲಿ ಇಬ್ಬರು ಹೆದರಿಸಿದ್ದಾರೆ. ಸಿನಿಮಾ ಬಿಡುಗಡೆಯಾದರೆ ಸಿಖ್ ಸಮುದಾಯ ಖಂಡಿಸುತ್ತದೆ ಎಂದು ವ್ಯಕ್ತಿಯೊಬ್ಬರು ಹೇಳುತ್ತಾರೆ. ನಿಮ್ಮ ಸಿನಿಮಾವನ್ನು ‘ಚಪ್ಪಲಿ’ಗಳೊಂದಿಗೆ ಸ್ವೀಕರಿಸಲಾಗುತ್ತದೆ’ ಎಂದಿರುವುದು ಕೇಳಿಬರುತ್ತಿದೆ. ʻಸಿನಿಮಾದಲ್ಲಿ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯನ್ನು ಭಯೋತ್ಪಾದಕನಂತೆ ಬಿಂಬಿಸಿದ್ದರೆ, ನೀವು ಯಾರ ಸಿನಿಮಾ ಮಾಡುತ್ತಿದ್ದೀರೋ ಅವರಿಗೆ (ಇಂದಿರಾ ಗಾಂಧಿ) ಏನಾಯಿತು ಎಂಬುದನ್ನು ನೆನಪಿಸಿಕೊಳ್ಳಿ,ʼ ಎಂದು ವಿಕ್ಕಿ ಥಾಮಸ್ ಸಿಂಗ್ ಎಂದು ಗುರುತಿಸಲ್ಪಟ್ಟಿರುವ ಮತ್ತೊಬ್ಬ ವ್ಯಕ್ತಿ ಎಚ್ಚರಿಸಿದ್ದಾರೆ.
ಇಂದಿರಾ ಗಾಂಧಿಯವರ ಹಂತಕರಾದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಬಗ್ಗೆಯೂ ಮಾತನಾಡಿದ್ದಾರೆ. ʻಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಯಾರು? ನಾವು ನಮ್ಮ ತಲೆಗಳನ್ನು ಅರ್ಪಿಸುತ್ತೇವೆ; ಆದರೆ, ತಲೆಗಳನ್ನು ಅರ್ಪಿಸಬಲ್ಲವರಿಗೆ ತಲೆಗಳನ್ನು ಕತ್ತರಿಸಲೂ ಬರುತ್ತದೆ,ʼ ಎಂದು ಹೇಳಿದ್ದಾರೆ.
ಪೊಲೀಸರಿಗೆ ದೂರು: ಪೋಸ್ಟ್ ಹಂಚಿಕೊಂಡಿರುವ ಕಂಗನಾ, ಅದನ್ನು ಮಹಾರಾಷ್ಟ್ರ, ಹಿಮಾಚಲ ಪೊಲೀಸ್ ಮತ್ತು ಪಂಜಾಬ್‌ನ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಚಲನಚಿತ್ರ ಸಿಖ್ ವಿರೋಧಿ ನಿರೂಪಣೆಯನ್ನು ಹರಡುತ್ತದೆ ಮತ್ತು ಸಿಖ್ಖರನ್ನು ಪ್ರತ್ಯೇಕತಾವಾದಿಗಳು ಎಂದು ತಪ್ಪಾಗಿ ಚಿತ್ರಿಸುತ್ತದೆ ಎಂದಿರುವ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಸೇರಿದಂತೆ ಹಲವು ಗುಂಪುಗಳು ಚಲನಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿವೆ.
ರೈತರ ಪ್ರತಿಭಟನೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ನಂತರ ಕಂಗನಾ ಅವರಿಗೆ ಬಿಜೆಪಿ ಛೀಮಾರಿ ಹಾಕಿದೆ.