
ರಾಹುಲ್ ವಿರುದ್ಧ ‘ಜೂತೆ ಮಾರೋʼ ಆಂದೋಲನ: ಅಠವಳೆ
ಧರ್ಮಶಾಲಾ/ಶಿಮ್ಲಾ: ಮೀಸಲು ಕುರಿತು ರಾಹುಲ್ ಗಾಂಧಿ ಅವರ ಹೇಳಿಕೆಗೆ ದಲಿತ ಸಮುದಾಯ ಮತ್ತು ರಿಪಬ್ಲಿಕನ್ ಪಾರ್ಟಿ ಇಂಡಿಯಾ(ಆರ್‌ಪಿಐ) ರಾಷ್ಟ್ರವ್ಯಾಪಿ ಜೂತೆ ಮಾರೋ ಆಂದೋಲನವನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಶುಕ್ರವಾರ ಹೇಳಿದ್ದಾರೆ.
ಇತ್ತೀಚೆಗೆ ಅಮೆರಿಕದ ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯದಲ್ಲಿ ʻಭಾರತವು ಎಲ್ಲರಿಗೂ ನ್ಯಾಯಸಮ್ಮತ ಸ್ಥಳ ಆದಾಗ ಮೀಸಲು ರದ್ದುಗೊಳಿಸುವ ಬಗ್ಗೆ ಕಾಂಗ್ರೆಸ್ ಯೋಚಿಸುತ್ತದೆʼ ಎಂದು ಹೇಳಿದ್ದರು.
ʻದಲಿತರು, ಒಬಿಸಿ ಮತ್ತು ಆದಿವಾಸಿಗಳ ಮೀಸಲು ಕಸಿದುಕೊಳ್ಳಲು ಸಾಧ್ಯವಿಲ್ಲ. ಅದನ್ನು ಮಾಡಲು ಪ್ರಯತ್ನಿಸುವವರಿಗೆ ಸಮರ್ಪಕ ಪ್ರತಿಕ್ರಿಯೆ ನೀಡಲಾಗುವುದು. ದಲಿತ ಸಮುದಾಯ ಮತ್ತು ಆರ್‌ಪಿಐ ರಾಷ್ಟ್ರವ್ಯಾಪಿ ಜೂತೆ ಮಾರೋ ಆಂದೋಲನ ಪ್ರಾರಂಭಿಸಲಿದೆ. ಅವರ ಮೇಲೆ ಚಪ್ಪಲಿಗಳನ್ನು ಎಸೆಯಲಾಗುವುದು,ʼ ಎಂದರು.
ʻರಾಹುಲ್ ಗಾಂಧಿ ಒಬ್ಬ ನಿಷ್ಪ್ರಯೋಜಕ ವ್ಯಕ್ತಿ. ಇಂಗ್ಲೆಂಡ್ ಅಥವಾ ಅಮೆರಿಕಕ್ಕೆ ಹೋದಾಗ ಭಾರತದ ವಿರುದ್ಧ ಮಾತನಾಡುತ್ತಾರೆ. ಇಂಥ ಅಸ್ಪಷ್ಟ ಹೇಳಿಕೆ ನೀಡಬಾರದು. ದೇಶದಲ್ಲಿ ಪ್ರಜಾಪ್ರಭುತ್ವವೇ ಇಲ್ಲ ಎಂದರೆ ಹೇಗೆ? ಅವರು 99 ಸ್ಥಾನ ಪಡೆದು ವಿರೋಧ ಪಕ್ಷದ ನಾಯಕರಾಗಿದ್ದು ಹೇಗೆ? ಜನ ನಮಗೆ ಜನಾದೇಶ ನೀಡಿದ್ದಾರೆ. ಎನ್‌ಡಿಎ ಸರ್ಕಾರ ಎಲ್ಲರನ್ನೂ ಮುಂದೆ ಕೊಂಡೊಯ್ಯುತ್ತಿದೆ,ʼ ಎಂದು ಹೇಳಿದರು.
ಅಠವಳೆ ತಮ್ಮ ಎಕ್ಸ್‌ನ ಪೋಸ್ಟ್‌ನಲ್ಲಿ,ʼರಾಹುಲ್ ಗಾಂಧಿ ಈ ಹೇಳಿಕೆ ಮೂಲಕ ಕಾಂಗ್ರೆಸ್ ನ ದಲಿತ ವಿರೋಧಿ ಮುಖವನ್ನು ಅನಾವರಣ ಗೊಳಿಸಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಮೀಸಲಿಗೆ ಅಂತ್ಯವಿಲ್ಲ,ʼ ಎಂದು ಹೇಳಿದರು.
ವಿಶ್ವ ಸಹಕಾರಿ ಆರ್ಥಿಕ ವೇದಿಕೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಅಠವಳೆ ಅವರು ಧರ್ಮಶಾಲಾಕ್ಕೆ ಬಂದಿದ್ದರು.