
ನ್ಯಾ.ಯಶ್ವಂತ್ ವರ್ಮಾಗೆ ಸುಪ್ರೀಂ ಶಾಕ್- ಪದಚ್ಯುತಿ ಪ್ರಕ್ರಿಯೆ ಪ್ರಶ್ನಿಸಿದ್ದ ಅರ್ಜಿ ವಜಾ!
ನ್ಯಾಯಮೂರ್ತಿ ಯಶ್ವಂತ್ ವರ್ಮಾ ಅವರ ಮನೆಯಲ್ಲಿ 15 ಕೋಟಿ ನಗದು ಸಿಕ್ಕ ಪ್ರಕರಣಕ್ಕೆ ಈಗ ದೊಡ್ಡ ತಿರುವು ಸಿಕ್ಕಿದೆ. ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿದ್ದು, ಪದಚ್ಯುತಿ ತೂಗುಗತ್ತಿ ಈಗ ವರ್ಮಾ ಅವರ ಮುಂದಿದೆ.
ತಮ್ಮನ್ನು ನ್ಯಾಯಮೂರ್ತಿ ಹುದ್ದೆಯಿಂದ ಪದಚ್ಯುತಗೊಳಿಸಲು ಲೋಕಸಭೆ ಸ್ಪೀಕರ್ ಕೈಗೊಂಡಿರುವ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಮೂರ್ತಿ ಯಶ್ವಂತ್ ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ. ಕಳೆದ ವರ್ಷ ಅವರ ದೆಹಲಿಯ ನಿವಾಸದಲ್ಲಿ ಅಪಾರ ಪ್ರಮಾಣದ ಲೆಕ್ಕವಿಲ್ಲದ ನಗದು ಪತ್ತೆಯಾದ ಹಿನ್ನೆಲೆಯಲ್ಲಿ, ಅವರನ್ನು ಹುದ್ದೆಯಿಂದ ತೆಗೆದುಹಾಕಲು ಸಂಸತ್ತಿನಲ್ಲಿ ಮಂಡಿಸಲಾದ ಪ್ರಸ್ತಾವನೆ ಮತ್ತು ಅದರ ತನಿಖೆಗಾಗಿ ರಚಿಸಲಾದ ಸಮಿತಿಯ ಕ್ರಮ ಸಿಂಧು ಎಂದು ನ್ಯಾಯಾಲಯ ಎತ್ತಿ ಹಿಡಿದಿದೆ.
ಕಳೆದ ವರ್ಷ ಮಾರ್ಚ್‌ನಲ್ಲಿ ದೆಹಲಿಯಲ್ಲಿದ್ದ ನ್ಯಾಯಮೂರ್ತಿ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಈ ವೇಳೆ ಅಲ್ಲಿ ಕಂತೆ ಕಂತೆ ನಗದು ಪತ್ತೆಯಾಗಿತ್ತು. ಅಕ್ರಮ ಹಣದ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಆಗಿನ ಮುಖ್ಯ ನ್ಯಾಯಮೂರ್ತಿಗಳು, ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿದ್ದರು. ತದನಂತರ ಆಗಸ್ಟ್ 2025 ರಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಈ ಭ್ರಷ್ಟಾಚಾರದ ಆರೋಪದ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದರು.
ಸುಪ್ರೀಂ ಕೋರ್ಟ್ ತೀರ್ಪು
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠವು ಈ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳ ತನಿಖಾ ಕಾಯ್ದೆ 1968ರ ಅಡಿಯಲ್ಲಿ ಜಂಟಿ ಸಮಿತಿಯೇ ಇರಬೇಕು ಎಂಬ ವರ್ಮಾ ಅವರ ವಾದವನ್ನು ಪೀಠವು ತಳ್ಳಿಹಾಕಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಒಂದೇ ದಿನ ಪದಚ್ಯುತಿ ಮಂಡನೆಯಾದಾಗ ಅನುಸರಿಸಿದ ಕ್ರಮ ಕಾನೂನುಬದ್ಧವಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಏನಿದು ನ್ಯಾಯಮೂರ್ತಿ ಯಶ್ವಂತ್ ವರ್ಮಾ ಪ್ರಕರಣ?
ಈ ಪ್ರಕರಣದ ಕಥೆ ಶುರುವಾಗಿದ್ದು ಮಾರ್ಚ್ 2025ರಲ್ಲಿ. ಆಗ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಯಶ್ವಂತ್ ವರ್ಮಾ ಅವರ ಲಟ್ಯನ್ಸ್ ದೆಹಲಿಯ ಅಧಿಕೃತ ನಿವಾಸದಲ್ಲಿ ಅನಿರೀಕ್ಷಿತವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರಿಗೆ ಅಲ್ಲಿ ಕಂಡ ದೃಶ್ಯ ದಂಗುಬಡಿಸುವಂತಿತ್ತು. ಬೆಂಕಿಯಲ್ಲಿ ಸುಟ್ಟುಹೋಗಿದ್ದ ಮತ್ತು ಅರೆಬರೆ ಸುಟ್ಟಿದ್ದ ಸುಮಾರು 15 ಕೋಟಿ ರೂಪಾಯಿಗಳಿಗೂ ಅಧಿಕ ನಗದು ಹಣದ ಕಂತೆಗಳು ಅಲ್ಲಿ ಪತ್ತೆಯಾಗಿದ್ದವು.
ಒಬ್ಬ ನ್ಯಾಯಮೂರ್ತಿಯ ಮನೆಯಲ್ಲಿ ಇಷ್ಟು ದೊಡ್ಡ ಮೊತ್ತದ ಹಣ ಹೇಗೆ ಬಂತು ಎಂಬುದು ಇಡೀ ನ್ಯಾಯಾಂಗ ವ್ಯವಸ್ಥೆಯನ್ನು ಬೆಚ್ಚಿಬೀಳಿಸಿತು. ಈ ಘಟನೆಯ ವೀಡಿಯೊಗಳು ವೈರಲ್ ಆಗುತ್ತಿದ್ದಂತೆ ಅಂದಿನ ಮುಖ್ಯ ನ್ಯಾಯಮೂರ್ತಿಗಳು (CJI) ಈ ಬಗ್ಗೆ ತನಿಖೆಗೆ ಆದೇಶಿಸಿ, ಅವರನ್ನು ದೆಹಲಿಯಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿದ್ದರು.

