ಸುಪ್ರೀಂ ಕೋರ್ಟ್‌ನ ಮುಂದಿನ ಸಿಜೆಐ ನ್ಯಾ. ಸೂರ್ಯ ಕಾಂತ್ ಶರ್ಮಾ
x

ಸುಪ್ರೀಂ ಕೋರ್ಟ್‌ನ ಮುಂದಿನ ಸಿಜೆಐ ನ್ಯಾ. ಸೂರ್ಯ ಕಾಂತ್ ಶರ್ಮಾ

ಸಿಜೆಐ ಬಿ.ಆರ್. ಗವಾಯಿ ಅವರು ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ. ಸುಪ್ರೀಂ ಕೋರ್ಟ್‌ನ ಸಂಪ್ರದಾಯದಂತೆ, ನಿವೃತ್ತರಾಗುವ ಮುಖ್ಯ ನ್ಯಾಯಮೂರ್ತಿಗಳು ತಮ್ಮ ನಂತರದ ಅತ್ಯಂತ ಹಿರಿಯ ನ್ಯಾಯಮೂರ್ತಿಯ ಹೆಸರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡುತ್ತಾರೆ.


ಸುಪ್ರೀಂ ಕೋರ್ಟ್​​ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರು, ತಮ್ಮ ಉತ್ತರಾಧಿಕಾರಿಯಾಗಿ ಹಿರಿಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಶಿಫಾರಸು ಮಾಡಿದ್ದಾರೆ. ಈ ಮೂಲಕ ಅವರು ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ

ಸಿಜೆಐ ಬಿ.ಆರ್. ಗವಾಯಿ ಅವರು ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ. ಸುಪ್ರೀಂ ಕೋರ್ಟ್‌ನ ಸಂಪ್ರದಾಯದಂತೆ, ನಿವೃತ್ತರಾಗುವ ಮುಖ್ಯ ನ್ಯಾಯಮೂರ್ತಿಗಳು ತಮ್ಮ ನಂತರದ ಅತ್ಯಂತ ಹಿರಿಯ ನ್ಯಾಯಮೂರ್ತಿಯ ಹೆಸರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಕಾನೂನು ಸಚಿವಾಲಯವು ಸಿಜೆಐ ಗವಾಯಿ ಅವರಿಗೆ ತಮ್ಮ ಉತ್ತರಾಧಿಕಾರಿಯ ಹೆಸರನ್ನು ಶಿಫಾರಸು ಮಾಡುವಂತೆ ಕೋರಿತ್ತು. ಅದರಂತೆ, ಸಿಜೆಐ ಗವಾಯಿ ಅವರು ನ್ಯಾ. ಸೂರ್ಯ ಕಾಂತ್ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ನ್ಯಾ. ಸೂರ್ಯ ಕಾಂತ್ ಅವರು ನವೆಂಬರ್ 24 ರಂದು ನೂತನ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಹರಿಯಾಣದಿಂದ ಮೊದಲ ಸಿಜೆಐ

ಫೆಬ್ರವರಿ 10, 1962ರಂದು ಹರಿಯಾಣದ ಹಿಸಾರ್ ಜಿಲ್ಲೆಯ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದ ನ್ಯಾಯಮೂರ್ತಿ ಸೂರ್ಯ ಕಾಂತ್, ಸುಪ್ರೀಂ ಕೋರ್ಟ್​​ ನ್ಯಾಯಮೂರ್ತಿಯಾಗಲಿರುವ ಹರಿಯಾಣ ಮೂಲದ ಮೊದಲ ವ್ಯಕ್ತಿಯಾಗಲಿದ್ದಾರೆ. ಸರ್ಕಾರಿ ಶಾಲೆಯಲ್ಲೇ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ ಅವರು, 2000ನೇ ಇಸವಿಯಲ್ಲಿ ಕೇವಲ 38ನೇ ವಯಸ್ಸಿನಲ್ಲಿ ಹರಿಯಾಣದ ಅತ್ಯಂತ ಕಿರಿಯ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡಿದ್ದರು. 2004ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ, ನಂತರ 2018ರಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, ಮೇ 2019ರಲ್ಲಿ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದಿದ್ದರು. ಅವರು ಸುಮಾರು 15 ತಿಂಗಳ ಕಾಲ, ಅಂದರೆ ಫೆಬ್ರವರಿ 9, 2027ರವರೆಗೆ ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಹಲವು ಮಹತ್ವದ ತೀರ್ಪುಗಳಲ್ಲಿ ಭಾಗಿ

ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದತಿ, ಪೌರತ್ವ ಕಾಯ್ದೆಯ ಸಿಂಧುತ್ವ, 'ಒಂದು ಶ್ರೇಣಿ, ಒಂದು ಪಿಂಚಣಿ' (OROP) ಯೋಜನೆ, ಪೆಗಾಸಸ್ ಬೇಹುಗಾರಿಕೆ ಪ್ರಕರಣ ಮತ್ತು ದೇಶದ್ರೋಹ ಕಾನೂನಿಗೆ ತಡೆ ನೀಡಿದಂತಹ ಹಲವು ಮಹತ್ವದ ಸಾಂವಿಧಾನಿಕ ಪೀಠಗಳ ಭಾಗವಾಗಿದ್ದರು. ಅವರ ಅನುಭವ ಮತ್ತು ಹಿನ್ನೆಲೆಯು ಭಾರತದ ನ್ಯಾಯಾಂಗ ವ್ಯವಸ್ಥೆಗೆ ಮತ್ತಷ್ಟು ಬಲ ತರಲಿದೆ ಎಂದು ನಿರೀಕ್ಷಿಸಲಾಗಿದೆ.

Read More
Next Story