ಲೇಹ್ ಹಿಂಸಾಚಾರ: ನ್ಯಾಯಾಂಗ ತನಿಖೆಗೆ ಕೇಂದ್ರ ಆದೇಶ
x

ಲೇಹ್‌ನಲ್ಲಿ ಕರ್ಫ್ಯೂ ಸಮಯದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಲೇಹ್ ಹಿಂಸಾಚಾರ: ನ್ಯಾಯಾಂಗ ತನಿಖೆಗೆ ಕೇಂದ್ರ ಆದೇಶ

ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ ಆರನೇ ಶೆಡ್ಯೂಲ್ ಜಾರಿಗೆ ಆಗ್ರಹಿಸಿ ನಡೆದ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿ, ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಸಂಘರ್ಷದಲ್ಲಿ ನಾಲ್ವರು ನಾಗರಿಕರು ಮೃತಪಟ್ಟು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.


Click the Play button to hear this message in audio format

ಲಡಾಖ್‌ನಲ್ಲಿ ಸೆಪ್ಟೆಂಬರ್ 24 ರಂದು ನಡೆದ ಹಿಂಸಾಚಾರದ ಕುರಿತು ನ್ಯಾಯಾಂಗ ತನಿಖೆಗೆ ಗೃಹ ಸಚಿವಾಲಯ ಆದೇಶಿಸಿದೆ. ಇದು ನ್ಯಾಯಯುತ ಮತ್ತು ಪಾರದರ್ಶಕ ತನಿಖೆ ನಡೆಸಬೇಕೆಂಬ ಕೇಂದ್ರಾಡಳಿತ ಪ್ರದೇಶದ ಜನರ ಬೇಡಿಕೆಯನ್ನು ಈಡೇರಿಸಿದೆ ಎಂದು ಲಡಾಖ್ ಮುಖ್ಯ ಕಾರ್ಯದರ್ಶಿ ಪವನ್ ಕೋತ್ವಾಲ್ ಹೇಳಿದ್ದಾರೆ.

ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ ಆರನೇ ಶೆಡ್ಯೂಲ್ ಜಾರಿಗೆ ಆಗ್ರಹಿಸಿ ನಡೆದ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿ, ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಸಂಘರ್ಷದಲ್ಲಿ ನಾಲ್ವರು ನಾಗರಿಕರು ಮೃತಪಟ್ಟು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆಯ ಕುರಿತು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕೆಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿತ್ತು. ಈ ಬೇಡಿಕೆಯನ್ನು ಮನ್ನಿಸಿರುವ ಕೇಂದ್ರ ಗೃಹ ಸಚಿವಾಲಯ, ಶುಕ್ರವಾರ ತನಿಖೆಗೆ ಆದೇಶಿಸಿದೆ. "ಈ ನಿರ್ಧಾರವು ನ್ಯಾಯ ಮತ್ತು ಪಾರದರ್ಶಕತೆಗೆ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ," ಎಂದು ಕೋತ್ವಾಲ್ ತಿಳಿಸಿದ್ದಾರೆ.

ತನಿಖಾ ಆಯೋಗದ ವಿವರ

ಗೃಹ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ಅವರ ನೇತೃತ್ವದಲ್ಲಿ ಈ ನ್ಯಾಯಾಂಗ ತನಿಖೆ ನಡೆಯಲಿದೆ. ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮೋಹನ್ ಸಿಂಗ್ ಪರಿಹಾರ್ ಅವರು ನ್ಯಾಯಾಂಗ ಕಾರ್ಯದರ್ಶಿಯಾಗಿ ಮತ್ತು ಐಎಎಸ್ ಅಧಿಕಾರಿ ತುಷಾರ್ ಆನಂದ್ ಅವರು ಆಡಳಿತಾತ್ಮಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. "ಹಿಂಸಾಚಾರಕ್ಕೆ ಕಾರಣವಾದ ಸಂದರ್ಭಗಳು, ಪೊಲೀಸರ ಕ್ರಮ ಹಾಗೂ ನಾಲ್ವರ ಸಾವಿಗೆ ಕಾರಣವಾದ ಘಟನೆಗಳ" ಕುರಿತು ತನಿಖೆ ನಡೆಸುವುದು ಆಯೋಗದ ಮುಖ್ಯ ಜವಾಬ್ದಾರಿಯಾಗಿದೆ.

ಶಾಂತಿಗಾಗಿ ಮನವಿ

ಹಿಂಸಾಚಾರದ ವೇಳೆ ಬಂಧಿತರಾದವರಲ್ಲಿ ಬಹುತೇಕ ಮಂದಿಗೆ ಜಾಮೀನು ದೊರೆತಿದ್ದು, ಉಳಿದ 30 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅವರೂ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಕೋತ್ವಾಲ್ ಮಾಹಿತಿ ನೀಡಿದರು. ಗಾಯಾಳುಗಳ ಪೈಕಿ ಐವರು ಎಸ್‌ಎನ್‌ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಜನರು ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ ಅವರು, "ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಿರುವುದರಿಂದ, ಸಮುದಾಯದ ಮುಖಂಡರು ದೊಡ್ಡ ಸಭೆಗಳು ಅಥವಾ ಪ್ರತಿಭಟನೆಗಳನ್ನು ಆಯೋಜಿಸದೆ ಶಾಂತಿ ಕಾಪಾಡಬೇಕು" ಎಂದು ಕೋರಿದರು. "ಸೆಪ್ಟೆಂಬರ್ 24 ರಂದು ಪ್ರತಿಭಟನೆಗಳು ಶಾಂತಿಯುತವಾಗಿ ಪ್ರಾರಂಭವಾದರೂ, ನಂತರ ಸಂಘಟಕರ ನಿಯಂತ್ರಣವನ್ನು ಮೀರಿ ಹೋಯಿತು," ಎಂದು ಅವರು ಹೇಳಿದರು. ಪ್ರಸ್ತುತ ವಿದ್ಯಾರ್ಥಿಗಳ ಪರೀಕ್ಷಾ ಸಮಯವಾಗಿದ್ದು, ಕಲಿಕೆಗೆ ಪೂರಕವಾದ ಶಾಂತಿಯುತ ವಾತಾವರಣವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಭದ್ರತೆ ಮತ್ತು ಮಾತುಕತೆ

ಹಿಂಸಾಚಾರದ ನಂತರ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಈಗ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗಾಗಿ ತರಬೇತಿ ಪಡೆದ ಕ್ಷಿಪ್ರ ಕಾರ್ಯಾಚರಣೆ ಪಡೆಯ (RAF) ಎರಡು ಕಂಪನಿಗಳನ್ನು ನಿಯೋಜಿಸಲಾಗಿದೆ ಎಂದು ಕೋತ್ವಾಲ್ ತಿಳಿಸಿದರು. ಲಡಾಖ್‌ನ ಆರ್ಥಿಕತೆಗೆ ಪ್ರಮುಖವಾಗಿರುವ ಪ್ರವಾಸೋದ್ಯಮದ ಮೇಲೆ ಅಶಾಂತಿಯು ಪ್ರತಿಕೂಲ ಪರಿಣಾಮ ಬೀರಿದ್ದು, ಅದನ್ನು ಪುನರುಜ್ಜೀವನಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Read More
Next Story