
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ
ಸರ್ಕಾರದ ವಿರುದ್ಧ ತೀರ್ಪು ನೀಡುವುದಷ್ಟೇ ನ್ಯಾಯಾಂಗ ಸ್ವಾತಂತ್ರ್ಯವಲ್ಲ: ನಿರ್ಗಮಿತ ಸಿಜೆಐ ಗವಾಯಿ ಸ್ಪಷ್ಟನೆ
ಕೆಲವು ಕಡೆಗಳಲ್ಲಿ, ನೀವು ಸರ್ಕಾರದ ವಿರುದ್ಧ ತೀರ್ಪು ನೀಡದಿದ್ದರೆ ನೀವು ಸ್ವತಂತ್ರ ನ್ಯಾಯಾಧೀಶರಲ್ಲ ಎಂಬ ತಪ್ಪು ಕಲ್ಪನೆಯಿದೆ. ಇದು ಸರಿಯಾದ ದೃಷ್ಟಿಕೋನವಲ್ಲ," ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.
"ನ್ಯಾಯಾಧೀಶರೊಬ್ಬರು ಸರ್ಕಾರದ ವಿರುದ್ಧ ತೀರ್ಪು ನೀಡಿದರೆ ಮಾತ್ರ ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಭಾವನೆ ಕೆಲವು ವಲಯಗಳಲ್ಲಿದೆ. ಆದರೆ ಇದು ತಪ್ಪು ಕಲ್ಪನೆ" ಎಂದು ನಿರ್ಗಮಿತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಹೇಳಿದ್ದಾರೆ.
ಭಾನುವಾರ (ನವೆಂಬರ್ 23) ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನ್ಯಾಯಾಂಗದ ಸ್ವಾತಂತ್ರ್ಯ ಎಂಬುದು ರಾಜಿ ಮಾಡಿಕೊಳ್ಳಲಾಗದ ವಿಷಯವಾಗಿದ್ದು, ನ್ಯಾಯಾಧೀಶರು ತಮ್ಮ ಮುಂದಿರುವ ದಾಖಲೆಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕೇ ಹೊರತು, ಎದುರಾಳಿ ಸರ್ಕಾರವೇ ಅಥವಾ ಖಾಸಗಿ ವ್ಯಕ್ತಿಯೇ ಎಂಬುದನ್ನಲ್ಲ ಎಂದು ಸ್ಪಷ್ಟಪಡಿಸಿದರು. "ಕೆಲವು ಕಡೆಗಳಲ್ಲಿ, ನೀವು ಸರ್ಕಾರದ ವಿರುದ್ಧ ತೀರ್ಪು ನೀಡದಿದ್ದರೆ ನೀವು ಸ್ವತಂತ್ರ ನ್ಯಾಯಾಧೀಶರಲ್ಲ ಎಂಬ ತಪ್ಪು ಕಲ್ಪನೆಯಿದೆ. ಇದು ಸರಿಯಾದ ದೃಷ್ಟಿಕೋನವಲ್ಲ," ಎಂದು ಅವರು ಅಭಿಪ್ರಾಯಪಟ್ಟರು.
ನ್ಯಾಯಾಧೀಶರ ವರ್ಗಾವಣೆ ಮತ್ತು ಕೊಲಿಜಿಯಂ ನಿರ್ಧಾರಗಳು
ತಮ್ಮ ಅವಧಿಯಲ್ಲಿ ನಡೆದ ನ್ಯಾಯಾಧೀಶರ ವರ್ಗಾವಣೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ಅಗತ್ಯವಿದ್ದಾಗ ಅಥವಾ ಹೈಕೋರ್ಟ್‌ಗಳಲ್ಲಿ ಹಿರಿಯ ನ್ಯಾಯಾಧೀಶರ ಮಾರ್ಗದರ್ಶನ ಬೇಕಾದಾಗ ಮಾತ್ರ ವರ್ಗಾವಣೆಗಳನ್ನು ಮಾಡಲಾಗಿದೆ. ಕೆಲವು ವರ್ಗಾವಣೆಗಳು ದೂರುಗಳ ಆಧಾರದ ಮೇಲೆ ನಡೆದಿವೆಯಾದರೂ, ಸಮಾಲೋಚಕ (consultee) ನ್ಯಾಯಾಧೀಶರ ಪರಿಶೀಲನೆಯ ನಂತರವೇ ಕ್ರಮ ಕೈಗೊಳ್ಳಲಾಗಿದೆ," ಎಂದು ಸಮರ್ಥಿಸಿಕೊಂಡರು.
ತಮ್ಮ ಅವಧಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಮಹಿಳಾ ನ್ಯಾಯಾಧೀಶರ ನೇಮಕವಾಗದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಜೆಐ, "ನಾವು ಕೆಲವರನ್ನು ಪರಿಗಣಿಸಿದ್ದೆವು. ಆದರೆ ಕೊಲಿಜಿಯಂ ಸದಸ್ಯರ ನಡುವೆ ಒಮ್ಮತ ಮೂಡದ ಕಾರಣ ನೇಮಕಾತಿ ಸಾಧ್ಯವಾಗಲಿಲ್ಲ," ಎಂದು ವಿವರಿಸಿದರು.
'ಕ್ರೀಮಿ ಲೇಯರ್' ತೀರ್ಪು ಮತ್ತು ಮೀಸಲಾತಿ
ಮೀಸಲಾತಿಯಲ್ಲಿ 'ಕ್ರೀಮಿ ಲೇಯರ್' (ಮುಂದುವರಿದ ವರ್ಗ) ಕುರಿತ ತೀರ್ಪನ್ನು ಕಾನೂನಾಗಿಸುವ ವಿಷಯ ಕಾರ್ಯಾಂಗಕ್ಕೆ ಬಿಟ್ಟದ್ದು ಎಂದು ಗವಾಯಿ ಹೇಳಿದರು. "ಮುಖ್ಯ ಕಾರ್ಯದರ್ಶಿಯ ಮಗ ಮತ್ತು ಕೃಷಿ ಕಾರ್ಮಿಕನ ಮಗನನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸಮಾನತೆಯಲ್ಲ. ಯಾರು ಅವಕಾಶಗಳಿಂದ ವಂಚಿತರಾಗಿದ್ದಾರೋ ಅವರನ್ನು ಸಮಾನತೆಯ ಹಾದಿಗೆ ತರುವುದೇ ಮೀಸಲಾತಿಯ ಮೂಲ ಉದ್ದೇಶ. ಪರಿಶಿಷ್ಟ ಜಾತಿಯ (SC) ಅನೇಕ ಕುಟುಂಬಗಳು ತಲೆಮಾರುಗಳಿಂದ ಮೀಸಲಾತಿ ಪಡೆದು ಈಗ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢವಾಗಿರುವುದನ್ನು ನಾವು ಕಂಡಿದ್ದೇವೆ," ಎಂದು ಅವರು ಮೀಸಲಾತಿಯ ಆಶಯವನ್ನು ವಿಶ್ಲೇಷಿಸಿದರು.
ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು.

