J&K Polls| ಭ್ರಷ್ಟಾಚಾರ, ಭಯೋತ್ಪಾದನೆ, ಪ್ರತ್ಯೇಕತಾವಾದಕ್ಕೆ ಮುಕ್ತಿ-ಪ್ರಧಾನಿ
ಜಮ್ಮು: ಜಮ್ಮು-ಕಾಶ್ಮೀರದ ಜನರು ಶಾಂತಿ ಮತ್ತು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದ ಮುಕ್ತ ಸರ್ಕಾರಕ್ಕೆ ಎದುರು ನೋಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಇಲ್ಲಿನ ಎಂಎಎಂ ಸ್ಟೇಡಿಯಂನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮಾತನಾಡಿ,ʼಈ ಚುನಾವಣೆಯು ಮುಂದಿನ ಸರ್ಕಾರವನ್ನು ನಿರ್ಧರಿಸುವ ಐತಿಹಾಸಿಕ ಅವಕಾಶವನ್ನು ಜಮ್ಮುವಿನ ಜನತೆಗೆ ನೀಡಿದೆ. ಅವರು ಅದನ್ನು ಸದುಪಯೋಗಪಡಿಸಿಕೊಂಡು, ಬಿಜೆಪಿಯನ್ನು ಆಯ್ಕೆ ಮಾಡಬೇಕಿದೆ,ʼ ಎಂದು ಹೇಳಿದರು.
ʻಚುನಾವಣೆಯ ಮೊದಲ ಎರಡು ಹಂತಗಳಲ್ಲಿ ಉತ್ತಮ ಮತದಾನವಾಗಿದೆ. ಬಿಜೆಪಿ ಜಮ್ಮು-ಕಾಶ್ಮೀರದಲ್ಲಿ ಸಂಪೂರ್ಣ ಬಹುಮತದೊಂದಿಗೆ ತನ್ನ ಮೊದಲ ಸರ್ಕಾರವನ್ನು ರಚಿಸುವುದು ಖಚಿತ,ʼ ಎಂದು ಹೇಳಿದರು.
ಇದು ಜಮ್ಮು-ಕಾಶ್ಮೀರಕ್ಕೆ ಪ್ರಧಾನಿಯವರ ಮೂರನೇ ಭೇಟಿ ಮತ್ತು ಹದಿನೈದು ದಿನಗಳಲ್ಲಿ ನಾಲ್ಕನೇ ಚುನಾವಣೆ ಸಭೆಯಾಗಿದೆ. ಅವರು ಮೊದಲ ಹಂತದ ಚುನಾವಣೆಗೆ ನಾಲ್ಕು ದಿನಗಳ ಮೊದಲು ಸೆಪ್ಟೆಂಬರ್ 14 ರಂದು ದೋಡಾ ಜಿಲ್ಲೆಯಲ್ಲಿ ಹಾಗೂ ಎರಡನೇ ಹಂತದ ಚುನಾವಣೆಗೆ ಪೂರ್ವಭಾವಿಯಾಗಿ ಸೆಪ್ಟೆಂಬರ್ 19 ರಂದು ಶ್ರೀನಗರ ಮತ್ತು ಕತ್ರಾದಲ್ಲಿ ಎರಡು ಸಭೆಯಲ್ಲಿ ಮಾತನಾಡಿದ್ದರು.
ಜಮ್ಮು ಪ್ರದೇಶದ 24 ಮತ್ತು ಕಾಶ್ಮೀರದ 16 ಸೇರಿದಂತೆ 40 ವಿಧಾನಸಭೆ ಕ್ಷೇತ್ರಗಳಿಗೆ ಪ್ರಚಾರ ಭಾನುವಾರ ಸಂಜೆ ಕೊನೆಗೊಳ್ಳಲಿದೆ.