J&K Assembly polls: ಹೊಸ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಮೂರು ಹಂತಗಳಿಗೆ 44 ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದ್ದ ಬಿಜೆಪಿ, ಕೆಲವೇ ಗಂಟೆ ಗಳಲ್ಲಿ ಅದನ್ನು ಹಿಂಪಡೆದು, ಹೊಸ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಹೊಸ ಪಟ್ಟಿಯಲ್ಲಿ ಮೊದಲ ಹಂತದ 15 ಅಭ್ಯರ್ಥಿಗಳ ಹೆಸರು ಮಾತ್ರ ಇದೆ.
ಪಕ್ಷ ಹಿಂಪಡೆದ ಪಟ್ಟಿಯಲ್ಲಿ ನಾಪತ್ತೆಯಾಗಿರುವ ಮೂರು ಪ್ರಮುಖ ಹೆಸರುಗಳೆಂದರೆ, ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಮತ್ತು ಮಾಜಿ ಉಪಮುಖ್ಯಮಂತ್ರಿಗಳಾದ ನಿರ್ಮಲ್ ಸಿಂಗ್ ಮತ್ತು ಕವಿಂದರ್ ಗುಪ್ತಾ. ನಗ್ರೋಟಾದಿಂದ ಕಣಕ್ಕಿಳಿದಿದ್ದ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರ ಸಹೋದರ ದೇವೇಂದ್ರ ರಾಣಾ ಅವರ ಹೆಸರು ಪಟ್ಟಿಯಲ್ಲಿದೆ. ರಾಣಾ ನ್ಯಾಷನಲ್ ಕಾನ್ಫರೆನ್ಸ್‌ನಿಂದ ಪಕ್ಷಾಂತರ ಮಾಡಿದ್ದರು.
ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮತ್ತು ಪ್ಯಾಂಥರ್ಸ್ ಪಾರ್ಟಿ ತೊರೆದು ಬಿಜೆಪಿ ಸೇರಿದ ಹಲವು ನಾಯಕರಲ್ಲದೆ, ಇಬ್ಬರು ಕಾಶ್ಮೀರಿ ಪಂಡಿತರು ಮತ್ತು 14 ಮುಸ್ಲಿಂ ಅಭ್ಯರ್ಥಿಗಳು ಹಿಂತೆಗೆದುಕೊಂಡ ಪಟ್ಟಿಯಲ್ಲಿದ್ದರು. ಹಿಂದಿನ ಪಟ್ಟಿಯಲ್ಲಿ ಮೊದಲ ಹಂತಕ್ಕೆ 15, ಎರಡನೇ ಹಂತಕ್ಕೆ 10 ಮತ್ತು ಮೂರನೇ ಹಂತಕ್ಕೆ 19 ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು.
ಅಸಮಾಧಾನ ಕಾರಣ: ಪಟ್ಟಿಯಲ್ಲಿನ ಪ್ರಮುಖ ಲೋಪಗಳು ಅಸಮಾಧಾನಕ್ಕೆ ಕಾರಣವಾದವು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇದರಿಂದಾಗಿ, ಮೊದಲ ಹಂತದ ಅಭ್ಯರ್ಥಿಗಳ ಹೆಸರನ್ನು ಮಾತ್ರ ಮರು ಬಿಡುಗಡೆ ಮಾಡಲಾಗಿದೆ.