J&K Polls| 2 ನೇ ಹಂತದ ಚುನಾವಣೆ: ಶೇ.54ರಷ್ಟು ಮತ ಚಲಾವಣೆ
x
ಬುಡ್ಗಾಮ್‌ ಜಿಲ್ಲೆಯಲ್ಲಿ ನವ ವಿವಾಹಿತೆಯೊಬ್ಬರು ಮತ ಚಲಾವಣೆ ಮಾಡಿದರು.

J&K Polls| 2 ನೇ ಹಂತದ ಚುನಾವಣೆ: ಶೇ.54ರಷ್ಟು ಮತ ಚಲಾವಣೆ


ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಬುಧವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. 5 ಗಂಟೆಯವರೆಗೆ ಶೇ.54 ಮತ ಚಲಾವಣೆ ಆಗಿದ್ದು,6 ಗಂಟೆಗೆ ಮತದಾನ ಮುಕ್ತಾಯವಾಗಲಿದೆ.

2.5 ದಶಲಕ್ಷ ಮತದಾರರು ರಾಜ್ಯದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ 26 ಸ್ಥಾನಗಳಿಗೆ ಕಣದಲ್ಲಿರುವ 239 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಈ ಅಸೆಂಬ್ಲಿ ಕ್ಷೇತ್ರಗಳು ಆರು ಜಿಲ್ಲೆಗಳಲ್ಲಿ ಹರಡಿಕೊಂಡಿವೆ; ಕಣಿವೆಯಲ್ಲಿ ಮೂರು ಮತ್ತು ಜಮ್ಮು ವಿಭಾಗದಲ್ಲಿ ಮೂರು.

3,500 ಕ್ಕೂ ಹೆಚ್ಚು ಮತಗಟ್ಟೆ: ಚುನಾವಣೆ ಆಯೋಗವು 1,056 ನಗರ ಮತಗಟ್ಟೆಗಳು ಮತ್ತು 2,446 ಗ್ರಾಮೀಣ ಮತಗಟ್ಟೆ ಸೇರಿದಂತೆ 3,502 ಮತಗಟ್ಟೆಗಳನ್ನು ಸ್ಥಾಪಿಸಿದೆ. ಪೊಲೀಸ್, ಸಶಸ್ತ್ರ ಪೊಲೀಸರು ಮತ್ತು ಕೇಂದ್ರದ ಅರೆಸೇನಾ ಪಡೆ ಒಳಗೊಂಡ ಭದ್ರತೆ ಸಿಬ್ಬಂದಿಯನ್ನು ಮತಗಟ್ಟೆಗಳ ಬಳಿ ನಿಯೋಜಿಸಲಾಗಿದೆ. ಮತದಾನ ಭಯಮುಕ್ತ ವಾತಾವರಣದಲ್ಲಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿ ಮತಗಟ್ಟೆ ಸುತ್ತಲೂ ಬಹು ಹಂತದ ಭದ್ರತೆ ಏರ್ಪಡಿಸಲಾಗಿದೆ ಎಂದು ಹೇಳಿದರು.

2 ನೇ ಹಂತದಲ್ಲಿ 157 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 26 ಮಹಿಳೆಯರು ನಿರ್ವಹಿಸುವ ಗುಲಾಬಿ ಮತಗಟ್ಟೆಗಳು, 26 ವಿಶೇಷಚೇತನರು ನಿರ್ವಹಿಸುವ ಮತಗಟ್ಟೆಗಳು, 26 ಯುವಕರು ನಿರ್ವಹಿಸುವ ಮತಗಟ್ಟೆಗಳು, 31 ಗಡಿ ಮತಗಟ್ಟೆಗಳು, 26 ಹಸಿರು ಮತಗಟ್ಟೆಗಳು ಮತ್ತು 22 ವಿಶಿಷ್ಟ ಮತಗಟ್ಟೆಗಳು ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಎಲ್ಲಿ ಎಷ್ಟು?: ಶ್ರೀನಗರ ಜಿಲ್ಲೆಯಲ್ಲಿ 93 ಅಭ್ಯರ್ಥಿಗಳು, ಬುದ್ಗಾಮ್ ಜಿಲ್ಲೆ 46, ರಾಜೌರಿ ಜಿಲ್ಲೆ 34, ಪೂಂಚ್ ಜಿಲ್ಲೆ 25, ಗಂದರ್ಬಾಲ್ ಜಿಲ್ಲೆ 21 ಮತ್ತು ರಿಯಾಸಿ ಜಿಲ್ಲೆಯಲ್ಲಿ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಶ್ರೀನಗರ ಜಿಲ್ಲೆಯ ಕ್ಷೇತ್ರಗಳೆಂದರೆ ಹಜರತ್‌ಬಾಲ್, ಖನ್ಯಾರ್, ಹಬ್ಬಕದಲ್, ಲಾಲ್ ಚೌಕ್, ಚನ್ನಪೋರಾ, ಝಡಿಬಲ್, ಸೆಂಟ್ರಲ್ ಶಾಲ್ತೆಂಗ್ ಮತ್ತು ಈದ್ಗಾ. ಬಡ್ಗಾಮ್ ಜಿಲ್ಲೆಯ ವಿಭಾಗಗಳು ಬುದ್ಗಾಮ್, ಬೀರ್ವಾ, ಖಾನ್ಸಾಹಿಬ್, ಚ್ರಾರ್-ಎ-ಶರೀಫ್ ಮತ್ತು ಚದೂರ. ಗಂದರ್ಬಾಲ್ ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳಿವೆ -- ಕಂಗನ್ (ಎಸ್ಟಿ) ಮತ್ತು ಗಂದರ್ಬಲ್.

ಜಮ್ಮು ವಿಭಾಗದಲ್ಲಿ ಗುಲಾಬ್‌ಗಢ (ಎಸ್‌ಟಿ), ರಿಯಾಸಿ, ಶ್ರೀಮಾತಾ ವೈಷ್ಣೋ ದೇವಿ (ರಿಯಾಸಿ ಜಿಲ್ಲೆ), ಕಲಕೋಟೆ-ಸುಂದರಬನಿ, ನೌಶೆರಾ, ರಾಜೌರಿ (ಎಸ್‌ಟಿ) (ರಾಜೌರಿ ಜಿಲ್ಲೆ), ಬುಧಾಲ್ (ಎಸ್‌ಟಿ), ತನ್ನಮಂಡಿ (ಎಸ್‌ಟಿ). ), ಸುರನ್‌ಕೋಟೆ (ST), ಪೂಂಚ್ ಹವೇಲಿ ಮತ್ತು ಮೆಂಧರ್ (ST) (ಪೂಂಚ್ ಜಿಲ್ಲೆ) ಕ್ಷೇತ್ರಗಳಿವೆ.

ಪ್ರಮುಖ ನಾಯಕರು: ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಜೆಕೆಪಿಸಿಸಿ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಮತ್ತು ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಪ್ರಮುಖ ಅಭ್ಯರ್ಥಿಗಳು. ಅಬ್ದುಲ್ಲಾ ಗಂದರ್‌ಬಾಲ್ ಮತ್ತು ಬುದ್ಗಾಮ್ ಕ್ಷೇತ್ರದಿಂದ, ಕರ್ರಾ ಸೆಂಟ್ರಲ್ ಶಾಲ್ತೆಂಗ್‌ನಿಂದ ಹಾಗೂ 2014ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದ ರಾಜೌರಿ ಜಿಲ್ಲೆಯ ನೌಶೇರಾ ಕ್ಷೇತ್ರವನ್ನು ಉಳಿಸಿಕೊಳ್ಳಲು ರೈನಾ ಪ್ರಯತ್ನಿಸುತ್ತಿದ್ದಾರೆ.

ಜೈಲಿನಲ್ಲಿರುವ ಧರ್ಮಗುರು ಸರ್ಜನ್ ಅಹ್ಮದ್ ವಾಗೇ ಅಲಿಯಾಸ್ ಬರ್ಕತಿ ಅವರು ಒಮರ್ ಅಬ್ದುಲ್ಲಾ ವಿರುದ್ಧ ಸ್ಪರ್ಧಿಸಿದ್ದಾರೆ. ಅವರು ಬೀರ್ವಾ ಮತ್ತು ಗಂದರ್‌ಬಲ್ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ.

ರಶೀದ್ ಇಂಜಿನಿಯರ್ ಎಂದೇ ಜನಪ್ರಿಯರಾಗಿರುವ ಶೇಖ್ ಅಬ್ದುಲ್ ರಶೀದ್ ಅವರು ಸಂಸತ್ ಚುನಾವಣೆಯಲ್ಲಿ ತಿಹಾರ್ ಜೈಲಿನಿಂದ ಸ್ಪರ್ಧಿಸಿ, ಬಾರಾಮುಲ್ಲಾ ಕ್ಷೇತ್ರದಿಂದ ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಓಮರ್ ಅಬ್ದುಲ್ಲಾ ಅವರನ್ನು ಸೋಲಿಸಿದ್ದರು.

ಸೆಪ್ಟೆಂಬರ್ 18 ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಶೇ.61 ರಷ್ಟು ಮತದಾನ ನಡೆದಿದೆ. ಮೂರನೇ ಹಂತದ ಮತದಾನ ಅಕ್ಟೋಬರ್ 1 ರಂದು ನಡೆಯಲಿದೆ. ಮತಗಳ ಎಣಿಕೆ ಅಕ್ಟೋಬರ್ 8 ರಂದು ನಡೆಯಲಿದೆ.

Read More
Next Story