ಜಾರ್ಖಂಡ್: ಬಹುಮತ ಪರೀಕ್ಷೆ ಇಂದು
x

ಜಾರ್ಖಂಡ್: ಬಹುಮತ ಪರೀಕ್ಷೆ ಇಂದು

ಹಿಂದಿನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ ಒಂದು ದಿನದ ನಂತರ ಚಂಪೈ ಸೊರೇನ್ ಅಧಿಕಾರ ವಹಿಸಿಕೊಂಡರು.


ಜಾರ್ಖಂಡ್‌ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಚಂಪೈ ಸೊರೇನ್ ಅವರು ಸೋಮವಾರ (ಫೆಬ್ರವರಿ 5) ಬಹುಮತವನ್ನು ಸಾಬೀತುಪಡಿಸ ಬೇಕಿದೆ.

ಜಾರ್ಖಂಡ್ ನ ವಿಧಾನಸಭಾ ಸದಸ್ಯರ ಸಂಖ್ಯಾಬಲ 81 ಇದ್ದು, ಬಹುಮತದ ಸಂಖ್ಯೆ 41 ಆಗಿದೆ. ಹೈದರಾಬಾದ್‌ಗೆ ತೆರಳಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಮೈತ್ರಿಕೂಟದ ಎಲ್ಲಾ ಶಾಸಕರು ರಾಂಚಿಗೆ ಭಾನುವಾರ ಸಂಜೆ ವಾಪಸಾದರು. ಜೆಎಂಎಂ ಮತ್ತು ಅದರ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಆರ್ ಜೆಡಿ ಶಾಸಕರನ್ನು ಆಪರೇಷನ್ ಗೆ ಒಳಗಾಗದಂತೆ ಕಾಪಾಡಿಕೊಳ್ಳಲು, ಕಾಂಗ್ರೆಸ್ ಭದ್ರಕೋಟೆಯಾದ ತೆಲಂಗಾಣಕ್ಕೆ ಕಳುಹಿಸಲಾಗಿತ್ತು. ಭಾನುವಾರ ರಾತ್ರಿ ರಾಂಚಿಗೆ ಎರಡು ಬಸ್ ಗಳಲ್ಲಿ ಮರಳಿದ ಆಡಳಿತಾರೂಢ ಮೈತ್ರಿಕೂಟದ ಶಾಸಕರನ್ನು ಸರ್ಕೀಟ್‌ ಹೌಸ್‌ಗೆ ಕರೆದೊಯ್ಯಲಾಯಿತು.

ʻನಮ್ಮ ಶಾಸಕರು ಒಗ್ಗಟ್ಟಾಗಿದ್ದಾರೆ. 48 ರಿಂದ 50 ಶಾಸಕರ ಬೆಂಬಲವಿದೆ" ಎಂದು ಸಚಿವ ಆಲಂಗೀರ್ ಆಲಂ ಹೇಳಿದ್ದಾರೆ.

ಜೆಎಂಎಂ ಶಾಸಕ ಮಿಥಿಲೇಶ್ ಠಾಕೂರ್ ಅವರು ಜೆಎಂಎಂ ನೇತೃತ್ವದ ಒಕ್ಕೂಟವು ವಿಶ್ವಾಸ ಮತ ಗಳಿಸಲಿದೆ. ಬಿಜೆಪಿಯ ಹಲವು ಶಾಸಕರು ಕೂಡ ಮೈತ್ರಿಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರ ವಿಶ್ವಾಸ ಕಳೆದುಕೊಳ್ಳಲಿದೆ: ಬಿಜೆಪಿ

ಬಿಜೆಪಿಯ ಮುಖ್ಯ ಸಚೇತಕ ಬಿರಂಚಿ ನಾರಾಯಣ್ ಮಾತನಾಡಿ, ವಿಶ್ವಾಸಮತ ಯಾಚನೆಯಲ್ಲಿ ಮೈತ್ರಿಕೂಟ ಸೋಲುವುದು ಖಚಿತ. ಶಾಸಕರನ್ನು ಹೈದರಾಬಾದ್‌ ನಲ್ಲಿರಿಸಿ, ಕಟ್ಟುನಿಟ್ಟಿನ ನಿಗಾ ಇಟ್ಟಿದ್ದಾರೆ ಎಂದರೆ ಅವರಿಗೆ ಗೆಲ್ಲುವ ವಿಶ್ವಾಸವಿಲ್ಲ ಎಂದರ್ಥʼ ಎಂದರು.

ಪ್ರತಿಪಕ್ಷ ಬಿಜೆಪಿ ಸದನದಲ್ಲಿ ತನ್ನ ಕಾರ್ಯತಂತ್ರವನ್ನು ರೂಪಿಸಲು ಭಾನುವಾರ ತನ್ನ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿತ್ತು. ʻಚಂಪೈ ಸೊರೆನ್ ಅವರು ಹಿಂದಿನ ಹೇಮಂತ್ ಸೋರೆನ್ ಸರ್ಕಾರದ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ಹೇಳಿದ್ದರಿಂದ ಕೇಸರಿ ಪಕ್ಷ ವಿಶ್ವಾಸ ನಿರ್ಣಯವನ್ನು ವಿರೋಧಿಸುತ್ತದೆ. ಇದು ಹೇಮಂತ್ ಸೋರೆನ್ ಸರ್ಕಾರದ ಭಾಗ 2 ಆಗಿರಲಿದೆʼ ಎಂದು ಆರೋಪಿಸಿದ್ದಾರೆ.

ಮೈತ್ರಿ ಕೂಟದ ಶಾಸಕರು ಮೂರು ದಿನಗಳಿಂದ ಹೈದರಾಬಾದ್‌ನ ರೆಸಾರ್ಟ್ ನಲ್ಲಿದ್ದರು. ಬಿಜೆಪಿ ಆಪರೇಷನ್ ಕಮಲ ಮಾಡಬಹುದು ಎನ್ನುವ ಭಯ ಮೈತ್ರಿ ಪಕ್ಷಗಳಿಗೆ ಇತ್ತು. ಫೆಬ್ರವರಿ 2 ರಂದು ಸುಮಾರು 38 ಶಾಸಕರನ್ನು ಎರಡು ವಿಮಾನಗಳಲ್ಲಿ ಹೈದರಾಬಾದ್‌ಗೆ ಕಳುಹಿಸಲಾಗಿತ್ತು. 81 ಸದಸ್ಯರ ಜಾರ್ಖಂಡ್ ವಿಧಾನಸಭೆಯಲ್ಲಿ 43 ಶಾಸಕರ ಬೆಂಬಲ ಹೊಂದಿರುವುದಾಗಿ ಮೈತ್ರಿಕೂಟವು ಗುರುವಾರ ಹೇಳಿಕೊಂಡಿತ್ತು.

ಫೆಬ್ರವರಿ 2 ರಂದು ರಾಜಭವನದಲ್ಲಿ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಸೋರೆನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಅವರೊಂದಿಗೆ ಕಾಂಗ್ರೆಸ್ ಹಿರಿಯ ನಾಯಕ ಅಲಂಗೀರ್ ಆಲಂ ಮತ್ತು ಆರ್ಜೆಡಿ ನಾಯಕ ಸತ್ಯಾನಂದ್ ಭೋಕ್ತಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೆನ್ ಅವರನ್ನು ಬುಧವಾರ ಇಡಿ ಬಂಧಿಸಿತು. ಪಿಎಂಎಲ್‌ಎ (ಮನಿ ಲಾಂಡರಿಂಗ್ ಆಕ್ಟ್ ತಡೆ) ವಿಶೇಷ ನ್ಯಾಯಾಲಯ ಅವರಿಗೆ ವಿಶ್ವಾಸ ಮತದಲ್ಲಿ ಭಾಗವಹಿಸಲು ಅನುಮತಿ ನೀಡಿದೆ. ಶುಕ್ರವಾರ ಹೇಮಂತ್ ಸೋರೆನ್ ಅವರನ್ನು ಐದು ದಿನಗಳ ಕಾಲ ಇಡಿ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿದೆ. ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವಿನ ಮೈತ್ರಿಯು 47 ಶಾಸಕರನ್ನು ಹೊಂದಿದೆ ಮತ್ತು ಸಿಪಿಎಂಎಲ್ (ಎಲ್) ಶಾಸಕರೊಬ್ಬರು ಮೈತ್ರಿ ಸರ್ಕಾರವನ್ನು ಬೆಂಬಲಿಸಿದ್ದಾರೆ.

Read More
Next Story