ವಕ್ಫ್ ತಿದ್ದುಪಡಿ ಮಸೂದೆ| ಜೆಡಿಯು, ಟಿಡಿಪಿ ಬೆಂಬಲ
ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆಯು ಮಂಡಳಿಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರುವ ಉದ್ದೇಶವನ್ನು ಹೊಂದಿದೆಯೇ ಹೊರತು ಹಸ್ತಕ್ಷೇಪ ಮಾಡುವ ಪ್ರಯತ್ನವಲ್ಲ ಎಂದು ಜೆಡಿಯು ಮತ್ತು ಟಿಡಿಪಿ ಗುರುವಾರ ಹೇಳಿದ್ದು, ಮಸೂದೆಯನ್ನು ಬೆಂಬಲಿಸಿವೆ.
ಸರ್ಕಾರ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಲು ಮುಂದಾದಾಗ, ಜನತಾ ದಳ (ಯು) ನಾಯಕ ಮತ್ತು ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಲಾಲನ್, ಮಸೂದೆಯು ಮುಸ್ಲಿಂ ವಿರೋಧಿ ಅಲ್ಲ ಎಂದು ಹೇಳಿದರು.
ಮಸೂದೆಯನ್ನು ಸಮರ್ಥಿಸಿಕೊಂಡು, ‘ವಕ್ಫ್ ಮಂಡಳಿ ಕಾನೂನು ತಿದ್ದುಪಡಿ ಮುಸ್ಲಿಂ ವಿರೋಧಿ ಎಂದು ಹಲವು ಸದಸ್ಯರು ಹೇಳುತ್ತಿದ್ದಾರೆ. ಅದು ಹೇಗೆ ಮುಸ್ಲಿಂ ವಿರೋಧಿ? ಅಯೋಧ್ಯೆಯ ಉದಾಹರಣೆಯನ್ನು ನೀಡಲಾಗುತ್ತಿದೆ. ದೇವಾಲಯ ಮತ್ತು ಸಂಸ್ಥೆಗಳ ನಡುವೆ ವ್ಯತ್ಯಾಸ ವಿಲ್ಲವೇ? ಇದು ಮಸೀದಿಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನವಲ್ಲ. ಬದಲಿಗೆ ಪಾರದರ್ಶಕಗೊಳಿಸುವ ಪ್ರಯತ್ನ,ʼ ಎಂದು ಹೇಳಿದರು.
ʻವಕ್ಫ್ ಬೋರ್ಡ್ ಅನ್ನು ಕಾನೂನಿನ ಮೂಲಕ ರಚಿಸಲಾಗಿದೆ. ಇಂಥ ಸಂಸ್ಥೆಗಳು ನಿರಂಕುಶಾಧಿಕಾರಿಯಾಗುತ್ತವೆ. ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಕಾನೂನು ತರಲು ಸರ್ಕಾರಕ್ಕೆ ಅಧಿಕಾರವಿದೆ,ʼ ಎಂದು ಹೇಳಿದರು.
1984 ರ ಸಿಖ್ ವಿರೋಧಿ ದಂಗೆ ಬಗ್ಗೆ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡು, ʼಸಾವಿರಾರು ಸಿಖ್ಖರನ್ನು ಕೊಂದವರು ಯಾರು? ಈ ಮಸೂದೆ ಕೋಮು ವಿಭಜನೆ ಪ್ರಯತ್ನವಲ್ಲ. ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಮಸೂದೆ ಬರಬೇಕು ಮತ್ತು ಪಾರದರ್ಶಕತೆ ತರಬೇಕು,ʼ ಎಂದು ಹೇಳಿದರು.
ಟಿಡಿಪಿ ಬೆಂಬಲ: ʻಮಸೂದೆಯನ್ನು ಸಂಸದೀಯ ಸಮಿತಿಗೆ ಕಳುಹಿಸಿದರೆ ತಮ್ಮ ಪಕ್ಷ ಅಭ್ಯಂತರ ಮಾಡುವುದಿಲ್ಲ,ʼ ಎಂದು ಟಿಡಿಪಿ ಸಂಸದ ಜಿ.ಎಂ. ಹರೀಶ್ ಬಾಲಯೋಗಿ ಹೇಳಿದ್ದಾರೆ.
ʻಸರ್ಕಾರದ ಕಾಳಜಿಯನ್ನು ಶ್ಲಾಘಿಸುತ್ತೇನೆ. ದಾನಿಗಳನ್ನು ರಕ್ಷಿಸಬೇಕು. ಉದ್ದೇಶ ಮತ್ತು ಅಧಿಕಾರದ ದುರ್ಬಳಕೆಯಾದಾಗ, ಸುಧಾರಣೆ ಮತ್ತು ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು ಸರ್ಕಾರದ ಜವಾಬ್ದಾರಿ. ಮಸೂದೆಯನ್ನು ನಾವು ಬೆಂಬಲಿಸುತ್ತೇವೆ,ʼ ಎಂದು ಹೇಳಿದರು.
ʻನೋಂದಣಿಯಿಂದ ದೇಶದ ಬಡ ಮುಸ್ಲಿಮರು ಮತ್ತು ಮಹಿಳೆಯರಿಗೆ ಸಹಾಯವಾಗಲಿದೆ ಮತ್ತು ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರುತ್ತದೆ ಎಂದು ನಂಬುತ್ತೇವೆ. ತಪ್ಪು ಗ್ರಹಿಕೆ ನಿವಾರಿಸಲು, ತಪ್ಪು ಮಾಹಿತಿ ರವಾನೆಯಾಗುತ್ತಿದ್ದರೆ ಮತ್ತು ಮಸೂದೆಯ ಉದ್ದೇಶವನ್ನು ತಿಳಿಸಲು ವ್ಯಾಪಕ ಸಮಾಲೋಚನೆ ಅಗತ್ಯವಿದ್ದರೆ, ಅದನ್ನು ಸಂಸದೀಯ ಸಮಿತಿಗೆ ಕಳುಹಿಸಲು ಆಕ್ಷೇಪವಿಲ್ಲ,ʼ ಎಂದು ಹೇಳಿದರು.
ತಿದ್ದುಪಡಿ ಕಾಯಿದೆಯು ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರರ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವುದು ಸೇರಿದಂತೆ ದೂರ ಗಾಮಿ ಬದಲಾವಣೆಗಳನ್ನು ಪ್ರಸ್ತಾಪಿಸುತ್ತದೆ. ಮಸೂದೆಯು ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ 1995 ಎಂದು ಮರುನಾಮಕರಣ ಮಾಡುವ ಗುರಿಯನ್ನು ಹೊಂದಿದೆ.