Jan 25 news LIVE: ಹಸು ಬೆಳೆ ಮೇಯ್ದಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ
x

ಇಂದಿನ ಸುದ್ದಿಗಳು 

Jan 25 news LIVE: ಹಸು ಬೆಳೆ ಮೇಯ್ದಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ

ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.


Click the Play button to hear this message in audio format

ಇಂದು ಭಾನುವಾರ, ಜನವರಿ 25, 2026. ಭಾರತದ ಮತ್ತು ಅಂತಾರಾಷ್ಟ್ರೀಯ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.

Live Updates

  • 25 Jan 2026 6:09 PM IST

    ಸಾಧಕರಿಗೆ ಪದ್ಮಶ್ರೀ ಗೌರವ; ಮಂಡ್ಯದ ಅಂಕೇಗೌಡರಿಗೆ ಪ್ರಶಸ್ತಿ

    77ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ದೇಶದ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಬಾರಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 45 'ಅನ್‌ಸಂಗ್ ಹೀರೊಸ್' ಸಾಧಕರಿಗೆ ಪದ್ಮಶ್ರೀ ಗೌರವ ಸಂದಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರಳಹಳ್ಳಿಯ ಜ್ಞಾನ ದಾಸೋಹಿ ಅಂಕೇಗೌಡ ಅವರು ಆಯ್ಕೆಯಾಗಿದ್ದಾರೆ. ಒಮ್ಮೆ ಬಸ್ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ 75 ವರ್ಷದ ಅಂಕೇಗೌಡರು, ಇಂದು ವಿಶ್ವದ ಅತಿದೊಡ್ಡ ಉಚಿತ ಖಾಸಗಿ ಗ್ರಂಥಾಲಯಗಳಲ್ಲಿ ಒಂದಾದ 'ಪುಸ್ತಕ ಮನೆ'ಯ ಸ್ಥಾಪಕರು. ಕಳೆದ ಐದು ದಶಕಗಳಿಂದ ತಮ್ಮ ಗಳಿಕೆಯ ಬಹುಭಾಗವನ್ನು ಪುಸ್ತಕಗಳಿಗಾಗಿ ಮೀಸಲಿಟ್ಟಿರುವ ಇವರು, ಇಂದು 20ಕ್ಕೂ ಹೆಚ್ಚು ಭಾಷೆಗಳ ಸುಮಾರು 20 ಲಕ್ಷಕ್ಕೂ ಅಧಿಕ ಪುಸ್ತಕಗಳ ಬೃಹತ್ ಸಂಗ್ರಹವನ್ನು ಹೊಂದಿದ್ದಾರೆ. ಅಪರೂಪದ ಹಸ್ತಪ್ರತಿಗಳು ಮತ್ತು ವಿದೇಶಿ ಸಾಹಿತ್ಯವನ್ನೊಳಗೊಂಡ ಇವರ ಗ್ರಂಥಾಲಯವು ಜ್ಞಾನಾಕಾಂಕ್ಷಿಗಳಿಗೆ ಉಚಿತವಾಗಿ ಲಭ್ಯವಿದೆ. ಇವರ ಈ ನಿಸ್ವಾರ್ಥ ಸಾಹಿತ್ಯ ಮತ್ತು ಶಿಕ್ಷಣ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

  • ಶಾಸಕ ಸುರೇಶ್ ಕುಮಾರ್ ಏಳು ತಿಂಗಳು ಹೇಳಿಕೆ ವಿವಾದ; ಶಾಸಕರ ಮನೆ ಮುಂದೆ ಕಾಂಗ್ರೆಸ್ ಪೋಸ್ಟರ್ ವಾರ್
    25 Jan 2026 11:21 AM IST

    ಶಾಸಕ ಸುರೇಶ್ ಕುಮಾರ್ 'ಏಳು ತಿಂಗಳು' ಹೇಳಿಕೆ ವಿವಾದ; ಶಾಸಕರ ಮನೆ ಮುಂದೆ ಕಾಂಗ್ರೆಸ್ ಪೋಸ್ಟರ್ ವಾರ್

    ವಿಧಾನಸಭೆಯ ಕಲಾಪದಲ್ಲಿ ಸಚಿವ ಬೈರತಿ ಸುರೇಶ್ ವಿರುದ್ಧ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ನೀಡಿದ್ದ 'ಏಳು ತಿಂಗಳಿಗೆ ಹುಟ್ಟಿದವರು' ಎಂಬ ವಿವಾದಾತ್ಮಕ ಹೇಳಿಕೆಯ ಕಿಡಿ ಈಗ ಬೀದಿ ಜಗಳಕ್ಕೆ ಕಾರಣವಾಗಿದೆ. ಸದನದಲ್ಲಿ ಈ ಮಾತಿನಿಂದ ತೀವ್ರ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಶಾಸಕರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದರೂ, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಮಾತ್ರ ಕಡಿಮೆಯಾಗಿಲ್ಲ. ಸುರೇಶ್ ಕುಮಾರ್ ಅವರು ರಾಜ್ಯದ ಮಹಿಳೆಯರ ಮತ್ತು ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿರುವ ಕಾಂಗ್ರೆಸ್ ಕಾರ್ಯಕರ್ತರು, ರಾಜಾಜಿನಗರದಲ್ಲಿರುವ ಶಾಸಕರ ನಿವಾಸದ ಗೋಡೆಗಳಿಗೆ ಪೋಸ್ಟರ್ ಅಂಟಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಈ ಪೋಸ್ಟರ್ ವಾರ್‌ಗೆ ಸಂಬಂಧಿಸಿದಂತೆ ಬಸವೇಶ್ವರ ನಗರ ಪೊಲೀಸರು ಈಗಾಗಲೇ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಪ್ರಕರಣವು ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.

  • ಜಮೀನಿಗೆ ನುಗ್ಗಿದ ಹಸು: ವೃದ್ಧೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮೂವರು ಮಹಿಳೆಯರು ಪೊಲೀಸ್ ವಶಕ್ಕೆ
    25 Jan 2026 10:50 AM IST

    ಜಮೀನಿಗೆ ನುಗ್ಗಿದ ಹಸು: ವೃದ್ಧೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮೂವರು ಮಹಿಳೆಯರು ಪೊಲೀಸ್ ವಶಕ್ಕೆ

    ಹಸು ಜಮೀನಿಗೆ ನುಗ್ಗಿ ಬೆಳೆ ನಾಶಪಡಿಸಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ವೃದ್ಧೆಯೊಬ್ಬರನ್ನು ಕಂಬಕ್ಕೆ ಕಟ್ಟಿ ಹಾಕಿ ಸತತ ಎರಡು ಗಂಟೆಗಳ ಕಾಲ ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಣ್ಣಮ್ಮ ಎಂಬ ವೃದ್ಧೆಯ ಹಸುವು ಪಕ್ಕದ ಅಂಗಮುತ್ತು ಎಂಬುವರ ಜಮೀನಿಗೆ ನುಗ್ಗಿ ಅಲ್ಲಿ ಬೆಳೆದಿದ್ದ ಹುರಳಿ ಫಸಲನ್ನು ಮೇಯ್ದಿತ್ತು. ಇದರಿಂದ ಆಕ್ರೋಶಗೊಂಡ ಅಂಗಮುತ್ತು ಮತ್ತು ಅವರ ಕುಟುಂಬದ ಸದಸ್ಯರು, ವೃದ್ಧೆ ಕಣ್ಣಮ್ಮರನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಸುಮಾರು ಎರಡು ಗಂಟೆಗಳ ಕಾಲ ವೃದ್ಧೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.

Read More
Next Story