![Jammu&Kashmir: ಗಡಿ ನಿಯಂತ್ರಣ ರೇಖೆ ಬಳಿ ಸ್ಫೋಟ; ಇಬ್ಬರು ಸೈನಿಕರು ಹುತಾತ್ಮ Jammu&Kashmir: ಗಡಿ ನಿಯಂತ್ರಣ ರೇಖೆ ಬಳಿ ಸ್ಫೋಟ; ಇಬ್ಬರು ಸೈನಿಕರು ಹುತಾತ್ಮ](https://karnataka.thefederal.com/h-upload/2025/02/11/512132-army.webp)
Jammu&Kashmir: ಗಡಿ ನಿಯಂತ್ರಣ ರೇಖೆ ಬಳಿ ಸ್ಫೋಟ; ಇಬ್ಬರು ಸೈನಿಕರು ಹುತಾತ್ಮ
Jammu&Kashmir: ಉಗ್ರರು ಹುದುಗಿಸಿಟ್ಟಿದ್ದ ಐಇಡಿ ಸ್ಫೋಟಗೊಂಡಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಘಟನೆ ಬಗ್ಗೆ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಮ್ಮು: ಜಮ್ಮುವಿನ ಸಮೀಪದ ಅಖ್ನೂರ್ ವಲಯದಲ್ಲಿ ಮಂಗಳವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಅವರಲ್ಲಿ ಒಬ್ಬರು ಕ್ಯಾಪ್ಟನ್ ಆಗಿದ್ದಾರೆ. ಘಟನೆಯಲ್ಲಿ ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರು ಹುದುಗಿಸಿಟ್ಟಿದ್ದ ಐಇಡಿ ಸ್ಫೋಟಗೊಂಡಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಘಟನೆ ಬಗ್ಗೆ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದು "ಘಟನೆ ಬಳಿಕ ನಮ್ಮ ಪಡೆ ಈ ಪ್ರದೇಶವನ್ನು ನಿಯಂತ್ರಣದಲ್ಲಿಟ್ಟುಕೊಂಡಿದೆ. ಶಂಕಿತ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಯುತ್ತಿದೆ" ಎಂದು ಹೇಳಿದ್ದಾರೆ.
ಅಧಿಕಾರಿಗಳ ನೀಡಿರುವ ಮಾಹಿತಿ ಪ್ರಕಾರ, ಸೈನಿಕರು ಭಟ್ಟಾಲ್ ಪ್ರದೇಶದ ಮುಂದೆ ಇರುವ ಗಡಿ ರೇಖೆ ಬಳಿ ಮಧ್ಯಾಹ್ನ 3:50ಕ್ಕೆ ಗಸ್ತು ತಿರುಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಗಾಯಗೊಂಡ ಸೈನಿಕರನ್ನುತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅವರಲ್ಲಿ ಇಬ್ಬರು ಗಾಯದ ತೀವ್ರತೆಯಿಂದ ಮೃತಪಟ್ಟಿದ್ದಾರೆ. ಮತ್ತೊಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಜಮ್ಮುವಿನ ವೈಟ್ ನೈಟ್ ಕಾರ್ಪ್ಸ್ ಸೇನಾ ಘಟಕವು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದೆ.
ಲಾಲೇಲಿ, ಅಖ್ನೂರ್ ವಲಯದಲ್ಲಿ ಗಡಿರೇಖೆಯ ಬಳಿ ಗಸ್ತು ಕಾಯುತ್ತಿದ್ದ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ಪರಿಣಾಮವಾಗಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ನಮ್ಮ ಪಡೆಗಳು ಈ ಪ್ರದೇಶವನ್ನು ನಿಯಂತ್ರಣದಲ್ಲಿಟ್ಟುಕೊಂಡಿವೆ ಮತ್ತು ಶೋಧ ಕಾರ್ಯಾಚರಣೆ ಮುಂದುವರಿಯುತ್ತಿದೆ ಎಂದು ವೈಟ್ ಕಾರ್ಪ್ಸ್ ಹೇಳಿದೆ.