370 ನೇ ವಿಧಿಯಡಿ ವಿಶೇಷ ಸ್ಥಾನಮಾನ ಪುನಃಸ್ಥಾಪನೆಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ
ಪುನಃಸ್ಥಾಪನೆಯ ಯಾವುದೇ ಪ್ರಕ್ರಿಯೆಯು ರಾಷ್ಟ್ರೀಯ ಏಕತೆ ಮತ್ತು ಜಮ್ಮು ಮತ್ತು ಕಾಶ್ಮೀರದ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಕಾಪಾಡಬೇಕು ಎಂದು ಈ ಅಸೆಂಬ್ಲಿ ಒತ್ತಿಹೇಳುತ್ತದೆ ಎಂದು ನಿರ್ಣಯದಲ್ಲಿ ಸೇರಿಸಲಾಗಿದೆ.
ಕೇಂದ್ರ ಸರ್ಕಾರ 2019ರಲ್ಲಿ ರದ್ದು ಮಾಡಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಮರುಸ್ಥಾಪಿಸುವಂತೆ ಜಮ್ಮು ಮತ್ತು ಕಾಶ್ಮೀರ ವಿಧಾನ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ವಿಶೇಷ ಸ್ಥಾನಮಾನ ಸ್ಥಾಪನೆಗೆ ಚುನಾಯಿತ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುವಂತೆ ಕೇಂದ್ರ ಸರ್ಕಾರವನ್ನು ಕೋರುವಂತೆ ಈ ನಿರ್ಣಯದಲ್ಲಿ ಸೂಚಿಸಲಾಗಿದೆ.
ವಿಧಾನಸಭೆ ಕಲಾಪಗಳು ಪ್ರಾರಂಭವಾಗುತ್ತಿದ್ದಂತೆ, ಜಮ್ಮು ಮತ್ತು ಕಾಶ್ಮೀರದ ಉಪಮುಖ್ಯಮಂತ್ರಿ ಸುರಿಂದರ್ ಚೌಧರಿ ಅವರು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸುವ ನಿರ್ಣಯ ಮಂಡಿಸಿದರು. ಈ ವಿಶೇಷ ಸ್ಥಾನಮಾನವನ್ನು ಇದನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಗಸ್ಟ್ 5, 2019 ರಂದು ಹಿಂತೆಗೆದುಕೊಂಡಿತ್ತು.
ಜಮ್ಮು ಮತ್ತು ಕಾಶ್ಮೀರದ ಜನರ ಹೆಗ್ಗುರುತು, ಸಂಸ್ಕೃತಿ ಮತ್ತು ಹಕ್ಕುಗಳನ್ನು ರಕ್ಷಿಸುವ ವಿಶೇಷ ಸ್ಥಾನಮಾನ ಮತ್ತು ಸಾಂವಿಧಾನಿಕ ಖಾತರಿಗಳ ಮಹತ್ವವನ್ನು ನೂತನ ಶಾಸಕಾಂಗವು ಪುನರುಚ್ಚರಿಸುತ್ತದೆ. ಏಕಪಕ್ಷೀಯವಾಗಿ ತೆಗೆದುಹಾಕಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತದೆ" ಎಂದು ಚೌಧರಿ ಮಂಡಿಸಿದ ನಿರ್ಣಯದಲ್ಲಿ ತಿಳಿಸಲಾಗಿದೆ.
ಪುನಃಸ್ಥಾಪನೆಯ ಯಾವುದೇ ಪ್ರಕ್ರಿಯೆಯು ರಾಷ್ಟ್ರೀಯ ಏಕತೆ ಮತ್ತು ಜಮ್ಮು ಮತ್ತು ಕಾಶ್ಮೀರದ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಕಾಪಾಡಬೇಕು ಎಂದು ಈ ಅಸೆಂಬ್ಲಿ ಒತ್ತಿಹೇಳುತ್ತದೆ" ಎಂದು ನಿರ್ಣಯದಲ್ಲಿ ಸೇರಿಸಲಾಗಿದೆ.
ಸದನದಲ್ಲಿ ಗಲಾಟೆ
ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ ಸೇರಿದಂತೆ ಬಿಜೆಪಿ ಸದಸ್ಯರು ನಿರ್ಣಯವನ್ನು ವಿರೋಧಿಸಿದರು. ಇದು ಕಲಾಪದಲ್ಲಿ ಪಟ್ಟಿ ಮಾಡಲಾದ ಕಾರ್ಯಸೂಚಿಯ ಭಾಗವಲ್ಲ ಎಂದು ಹೇಳಿದರು .
"ನಾವು ನಿರ್ಣಯವನ್ನು ತಿರಸ್ಕರಿಸುತ್ತೇವೆ. ಲೆಫ್ಟಿನೆಂಟ್ ಗವರ್ನರ್ ಅವರ ಭಾಷಣದ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬುದು ನಮಗೆ ನೀಡಲಾದ ಕಾರ್ಯಸೂಚಿಯಲ್ಲಿದೆ" ಎಂದು ಅವರು ಹೇಳಿದರು.
ಇಲ್ಲಿ ಪಕ್ಷಗಳ ನಡುವೆ ಇಲಿ ಮತ್ತು ಬೆಕ್ಕಿನ ಆಟ ನಡೆಯುತ್ತಿದೆ. ಆದರೆ ಈ ನಿರ್ಣಯದಿಂದ ಏನೂ ಆಗುವುದಿಲ್ಲ ಎಂದು ಅವರೆಲ್ಲರಿಗೂ ತಿಳಿದಿದೆ ಎಂದು ಪ್ರೆತಿ ಪಕ್ಷದವರು ಹೇಳಿದ್ದಾರೆ.
"ಈ ಕಾಯ್ದೆಯನ್ನು ದೇಶದ ಪ್ರಜಾಪ್ರಭುತ್ವದ ಅತಿದೊಡ್ಡ ದೇವಾಲಯ (ಸಂಸತ್ತು) ಅಂಗೀಕರಿಸಿದೆ" ಎಂದು ಹೇಳಿದರು.
ಶರ್ಮಾ ಅವರ ಹೇಳಿಕೆಗಳು ಕಲಾಪದಲ್ಲಿ ಗೊಂದಲಕ್ಕೆ ಕಾರಣವಾಯಿತು. ಆಡಳಿತ ಪಕ್ಷದ ಸದ್ಯರನ್ನು ಕೆರಳಿಸಿತು. ಸದನದಲ್ಲಿ ಗದ್ದಲದ ದೃಶ್ಯಗಳು ಕಂಡುಬಂದವು, ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಬಿಜೆಪಿ ಶಾಸಕರು ಎದ್ದು ನಿಂತು ಪರಸ್ಪರ ಆರೋಪಗಳನ್ನು ಮಾಡಲು ಆರಂಭಿಸಿದರು.
ಬಿಜೆಪಿ ಸದಸ್ಯರು ನಿರ್ಣಯದ ಪ್ರತಿಗಳನ್ನು ಹರಿದು ಸದನದ ಬಾವಿಗೆ ಎಸೆದರು. ಗದ್ದಲದ ನಡುವೆಯೇ ಶಾಸಕ ಲಂಗಟೆ ಶೇಖ್ ಖುರ್ಷಿದ್ ಸದನದ ಬಾವಿಯತ್ತ ನುಗ್ಗಲು ಯತ್ನಿಸಿದರು. ಅಸೆಂಬ್ಲಿ ಮಾರ್ಷಲ್‌ಗಳು ಅವರನ್ನು ತಡೆದರು.
ನಿರ್ಣಯವನ್ನು ಅಂಗೀಕರಿಸಬೇಕೆಂದು ಎನ್ ಸಿ ಸದಸ್ಯರು ಘೋಷಣೆಗಳನ್ನು ಕೂಗಿದರು. ಬಿಜೆಪಿ ಸದಸ್ಯರು ಸದನಕ್ಕೆ ಅಗೌರವ ಮಾಡಿದ್ದಾರೆ ಎಂದು ಬಂಡಿಪೋರಾದ ಕಾಂಗ್ರೆಸ್ ಶಾಸಕ ನಿಜಾಮುದ್ದೀನ್ ಭಟ್ ಆರೋಪಿಸಿದರು. "ಅವರು ನಿಯಮಗಳನ್ನು ಉಲ್ಲಂಘಿಸಿದ್ದಾರೆ" ಎಂದು ಹೇಳಿದರು.
ಪ್ರತಿಯೊಬ್ಬ ಸದಸ್ಯನಿಗೂ ಈ ಬಗ್ಗೆ ಮಾತನಾಡುವ ಹಕ್ಕಿದೆ ಎಂದು ಭಟ್ ಹೇಳಿದರು. ಆದಾಗ್ಯೂ, ಬಿಜೆಪಿ ಸದಸ್ಯರು ನಿರ್ಣಯದ ವಿರುದ್ಧ ಘೋಷಣೆಗಳನ್ನು ಕೂಗುವುದನ್ನು ಮುಂದುವರಿಸಿದರು.
ಕೋಲಾಹಲದ ನಡುವೆಯೇ ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರು ವಿರೋಧ ಪಕ್ಷದ ಸದಸ್ಯರು ಮಾತನಾಡಲು ಬಯಸದಿದ್ದರೆ, "ನಾನು ಅದನ್ನು ಮತಕ್ಕೆ ಹಾಕುತ್ತೇನೆ" ಎಂದು ಹೇಳಿದರು. ಬಳಿಕ ನಿರ್ಣಯವನ್ನು ಧ್ವನಿ ಮತಕ್ಕೆ ಹಾಕಲಾಯಿತು ಮತ್ತು ಅದನ್ನು ಗದ್ದಲದ ನಡುವೆ ಅಂಗೀಕರಿಸಲಾಯಿತು.
ನಿರ್ಣಯ ಅಂಗೀಕರಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗೆ ನುಗ್ಗಿದರು. ನಂತರ ಸ್ಪೀಕರ್ ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು.
2019 ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯನ್ನು ಮೋದಿ ಸರ್ಕಾರ ರದ್ದುಪಡಿಸಿತ್ತು. ಹಿಂದಿನ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು.