
ಜಮ್ಮು-ಕಾಶ್ಮೀರ: ಪೂಂಚ್‌ನಲ್ಲಿ ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಭಾರತೀಯ ಸೈನಿಕ ಹುತಾತ್ಮ
ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನ ನಿವಾಸಿಗಳಿಗೆ ಭೀಕರ ದಿನವಾಗಿದ್ದು, ಆಪರೇಷನ್ ಸಿಂದೂರ್‌ನ ಬೆನ್ನಿಗೆ ಪಾಕಿಸ್ತಾನವು ತೀವ್ರವಾದ ಗುಂಡಿನ ದಾಳಿ ಮತ್ತು ಸಣ್ಣ ಶಸ್ತ್ರಾಸ್ತ್ರ ಗುಂಡಿನ ದಾಳಿ ನಡೆಸಿದೆ.
ಆಪರೇಷನ್ ಸಿಂದೂರ್‌ನ ಬೆನ್ನಿಗೆ ಗಡಿರೇಖೆಯ (LoC) ಆಚೆಗೆ ಪಾಕಿಸ್ತಾನ ಗುಂಡಿನ ದಾಳಿ ಮುಂದುವರೆಸಿದ್ದರಿಂದ, ಪೂಂಚ್‌ನಲ್ಲಿ ಭಾರತೀಯ ಸೇನಾ ಸಿಬ್ಬಂದಿ 32 ವರ್ಷದ ಲಾನ್ಸ್ ನಾಯಕ್ ದಿನೇಶ್ ಕುಮಾರ್‌ನ ಮೃತಪಟ್ಟಿದ್ದಾರೆ.
ವೈಟ್ ನೈಟ್ ಕಾರ್ಪ್ಸ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ, “#GOC ಮತ್ತು #WhiteKnightCorpsನ ಎಲ್ಲ ಶ್ರೇಣಿಯವರು 5 ಫೀಲ್ಡ್ ರೆಜಿಮೆಂಟ್‌ನ ಲಾನ್ಸ್ ನಾಯಕ್ ದಿನೇಶ್ ಕುಮಾರ್‌ರ ಸರ್ವೋಚ್ಚ ತ್ಯಾಗಕ್ಕೆ ನಮನ ಸಲ್ಲಿಸುತ್ತಾರೆ. ಪಾಕಿಸ್ತಾನ ಸೇನೆಯು ನಡೆಸಿದ ಗುಂಡಿನ ದಾಳಿಯಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ. ಪೂಂಚ್ ಸೆಕ್ಟರ್‌ನಲ್ಲಿ ಪಾಕ್ ನಡೆಸುತ್ತಿರುವ ದಾಳಿಗಳಿಂದ ಅಮಾಯಕ ನಾಗರಿಕರ ಕಾಪಾಡಲು ನಾವು ಬದ್ಧರಾಗಿದ್ದೇವೆ,'' ಎಂದು ಅವರು ಹೇಳಿದ್ದಾರೆ.
ದಿನೇಶ್ ಕುಮಾರ್ ಹರಿಯಾಣದ ಪಲ್ವಾಲ್ ಜಿಲ್ಲೆಯ ಮೊಹಮ್ಮದ್‌ಪುರ ಗ್ರಾಮದವರು. 2014ರಲ್ಲಿ ಸೇನೆಗೆ ಸೇರಿದ್ದ ಅವರು ಇತ್ತೀಚೆಗೆ ಲಾನ್ಸ್ ನಾಯಕ್ ಹುದ್ದೆಗೆ ಬಡ್ತಿ ಪಡೆದಿದ್ದರು. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿರೇಖೆಯಲ್ಲಿ (LoC) ನಿಯೋಜನೆಗೊಂಡಿದ್ದರು.
ಸೈನಿಕ ಹುತಾತ್ಮರಾದ ಸುದ್ದಿ ಹರಡುತ್ತಿದ್ದಂತೆ, ದೇಶಾದ್ಯಂತ ಗೌರವ ಸಲ್ಲಿಕೆಯಾದವು. ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಜವಾನ್ ದಿನೇಶ್ ಕುಮಾರ್ ಶರ್ಮಾ ಅವರ ಶೌರ್ಯಕ್ಕೆ ಹೃದಯಪೂರ್ವಕ ಸಂತಾಪ ವ್ಯಕ್ತಪಡಿಸಿದ್ದಾರೆ
ಪೂಂಚ್‌ನಲ್ಲಿ ಭಾರೀ ಗುಂಡಿನ ದಾಳಿ
ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನ ನಿವಾಸಿಗಳಿಗೆ ಭೀಕರ ದಿನವಾಗಿದ್ದು, ಆಪರೇಷನ್ ಸಿಂದೂರ್‌ನ ಬೆನ್ನಿಗೆ ಪಾಕಿಸ್ತಾನವು ತೀವ್ರವಾದ ಗುಂಡಿನ ದಾಳಿ ಮತ್ತು ಸಣ್ಣ ಶಸ್ತ್ರಾಸ್ತ್ರ ಗುಂಡಿನ ದಾಳಿ ನಡೆಸಿದೆ. ಇದರಿಂದ 15ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 40 ಕ್ಕಿಂತ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ದಾಳಿಯು ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಒಂಬತ್ತು ಭಯೋತ್ಪಾದಕ ಉಡಾವಣಾ ಕೇಂದ್ರಗಳ ಮೇಲೆ ನಿಖರವಾದ ಕ್ಷಿಪಣಿ ದಾಳಿಗಳನ್ನು ನಡೆಸಿದ ಕೆಲವೇ ಗಂಟೆಗಳ ನಂತರ ಆರಂಭಗೊಂಡಿತ್ತು.
ಭಾರತೀಯ ಸೇನೆಯು ಈ ಗುಂಡಿನ ದಾಳಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಡಿರೇಖೆಯ ಉದ್ದಕ್ಕೂ ಗುಂಡಿನ ದಾಳಿಗಳು ಭಾರೀ ಫಿರಂಗಿ ದಾಳಿಗಳು ನಡೆಯುತ್ತಿವೆ.