ಸಿಎಎ: ಸುಪ್ರೀಂ ಕದ ತಟ್ಟಿದ ಐಯುಎಂಎಲ್‌
x

ಸಿಎಎ: ಸುಪ್ರೀಂ ಕದ ತಟ್ಟಿದ ಐಯುಎಂಎಲ್‌


ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ನಿಯಮಗಳ ಅಧಿಸೂಚನೆಯನ್ನು ಪ್ರಶ್ನಿಸಿರುವ ಮುಸ್ಲಿಂ ಲೀಗ್ (ಐಯುಎಂಎಲ್), ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಶಾಸನವು ಮುಸ್ಲಿಂ ಸಮುದಾಯದ ವಿರುದ್ಧ ʻಅಸಾಂವಿಧಾನಿಕ" ಮತ್ತು ʻತಾರತಮ್ಯʼ ಎಂದಿರುವ ಕೇರಳ ಮೂಲದ ಐಯುಎಂಎಲ್‌, ಸಿಎಎ ಮತ್ತು ಅದರ ನಿಯಮಗಳನ್ನು ತಡೆಹಿಡಿಯುವಂತೆ ಉನ್ನತ ನ್ಯಾಯಾಲಯವನ್ನು ಕೋರಿದೆ.

ಕಾನೂನಿನ ವ್ಯಾಪ್ತಿಯಿಂದ ಹೊರಗುಳಿಯುವ ಮುಸ್ಲಿಂ ಸಮುದಾಯದವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ನೋಡಿಕೊಳ್ಳುವಂತೆ ಸಂಘಟನೆ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಿರುಕುಳವನ್ನು ಎದುರಿಸಿದ ಮತ್ತು ಡಿಸೆಂಬರ್ 31, 2014 ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ವಲಸೆ ಬಂದ ದಾಖಲೆ ರಹಿತ ಮುಸ್ಲಿಮೇತರರಿಗೆ ಭಾರತೀಯ ಪೌರತ್ವವನ್ನು ನೀಡುವುದಾಗಿ ಸಿಎಎ ಭರವಸೆ ನೀಡುತ್ತದೆ.

14ನೇ ವಿಧಿಯ ಉಲ್ಲಂಘನೆ:

ʻಸಿಎಎ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದರಿಂದ, ಸಂವಿಧಾನದ ಮೂಲ ರಚನೆಯಾದ ಜಾತ್ಯತೀತತೆಗೆ ಧಕ್ಕೆ ತರುತ್ತದೆ. ದೇಶದ ಸಾಂವಿಧಾನಿಕ ಚೌಕಟ್ಟು ಮತ್ತು ಅಂತಾರಾಷ್ಟ್ರೀಯ ಕಾನೂನುಗಳು ನಿರಾಶ್ರಿತರ ರಕ್ಷಣೆಗೆ ಕಟ್ಟುಪಾಡುಗಳನ್ನು ವಿಧಿಸುತ್ತವೆ. ಸಿಎಎ ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುತ್ತದೆʼ ಎಂದು ಅರ್ಜಿ ವಾದಿಸಿದೆ. 2019ರಲ್ಲಿ ಸಿಎಎಯನ್ನು ಅಂಗೀಕರಿಸಿದಾಗ, ಅದನ್ನು ಪ್ರಶ್ನಿಸಿದ ಮೊದಲ ರಾಜಕೀಯ ಸಂಘಟನೆಗಳಲ್ಲಿ ಐಯುಎಂಎಲ್‌ ಒಂದು. ಶಾಸನಕ್ಕೆ ತಡೆಯನ್ನು ಕೋರಿತ್ತು. ಆದರೆ, ಕಾನೂನು ಜಾರಿಗೆ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ಎಸ್‌ಸಿಯಲ್ಲಿ 250 ಅರ್ಜಿ ಬಾಕಿ: ಸಿಎಎ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವ 250 ಅರ್ಜಿಗಳು ಬಾಕಿ ಉಳಿದಿದ್ದು, ನ್ಯಾಯಾಲಯ ತೀರ್ಪು ನೀಡುವವರೆಗೆ ಸಿಎಎ ನಿಯಮಗಳ ಅನುಷ್ಠಾನವನ್ನು ತಡೆಹಿಡಿಯುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

Read More
Next Story